ದೇಶದ ಮೇಲೆ ಕಿಂಚಿತ್ತು ಭಕ್ತಿ, ಗೌರವ ಇರುವ ಯಾವುದೇ ವ್ಯಕ್ತಿಯಾದರೂ ರಾಷ್ಟ್ರಗೀತೆ ಹಾಡುವುದು ಕಿವಿಗೆ ಕೇಳಿಸುತ್ತಿದ್ದಂತೆ ಎಂತಹ ಅನಿರ್ವಾಯವಾದ ಕೆಲಸವಿದ್ದರೂ ಕೂಡ ಎದ್ದು ನಿಂತು ಗೌರವ ನೀಡುತ್ತಾರೆ. ಈ ಮನೋಭಾವವನ್ನು ಜನರು ಶಾಲಾ ವಿದ್ಯಾರ್ಥಿಯಾಗಿ ಕಲಿಯುತ್ತಿರುವಾಗಲೇ ರೂಢಿಸಿಕೊಂಡು ಬಂದಿರುತ್ತಾರೆ. ಆದರೆ ಬೇಸರದ ಸಂಗತಿ ಎಂದರೆ ಇಲ್ಲೊಂದಿಷ್ಟು ವಿದ್ಯಾರ್ಥಿಗಳ ಗುಂಪು ರಾಷ್ಟ್ರಗೀತೆ ಕೇಳಿ ತನ್ನ ಕೆಲಸ ಬಿಟ್ಟು ಎದ್ದು ನಿಂತು ಗೌರವ ನೀಡಿದ ವ್ಯಕ್ತಿಯನ್ನು ನೋಡಿ ಗೇಲಿ ಮಾಡಿ ನಕ್ಕಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ. ಇದನ್ನು ನೋಡಿದರೆ ನಮ್ಮ ಯುವ ಪೀಳಿಗೆ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂದು ಆತಂಕವಾಗುತ್ತದೆ.
ವೈರಲ್ ವಿಡಿಯೊದಲ್ಲಿ ಕಾಲೇಜುವೊಂದರಲ್ಲಿ ರಾಷ್ಟ್ರಗೀತೆ ಪ್ರಸಾರವಾಗುವಾಗ ವಿದ್ಯಾರ್ಥಿಗಳು ಅತ್ತಿಂದಿತ್ತ ಓಡಾಡಿಕೊಂಡು, ಮಾತನಾಡುತ್ತಾ ನಿಂತಿದ್ದರೆ, ಅಲ್ಲೇ ಪಕ್ಕದಲ್ಲಿ ಕಟ್ಟಡಕ್ಕೆ ಪೇಂಟಿಂಗ್ ಕೆಲಸ ಮಾಡುತ್ತಿದ್ದವನು ರಾಷ್ಟ್ರಗೀತೆ ಕೇಳಿದ ತಕ್ಷಣ ಮಾಡುತ್ತಿದ್ದ ಕೆಲಸವನ್ನು ಅಲ್ಲೆ ಬಿಟ್ಟು ಎದ್ದು ನಿಂತು ರಾಷ್ಟ್ರಗೀತೆಗೆ ಗೌರವ ಸಲ್ಲಿದ್ದಾನೆ. ಆದರೆ ಆ ವ್ಯಕ್ತಿ ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದ್ದನ್ನು ಕಂಡು ಒಂದು ಕಡೆ ಕುಳಿತುಕೊಂಡು ಮಾತನಾಡುತ್ತಿದ್ದ ವಿದ್ಯಾರ್ಥಿಗಳು ಗೇಲಿ ಮಾಡುತ್ತ ನಕ್ಕಿದ್ದಾರೆ.
ಈ ದೃಶ್ಯವನ್ನು ವಿಡಿಯೊ ಮಾಡಿ ಯಾರೋ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ವೈರಲ್ ಆಗಿದೆ. ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದ ಆ ವ್ಯಕ್ತಿಯ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರ ಜೊತೆಗೆ ರಾಷ್ಟ್ರಗೀತೆ ಪ್ರಸಾರವಾಗುತ್ತಿದ್ದರು ಅದಕ್ಕೆ ಗೌರವ ಕೊಡದೆ ಆ ಸಮಯದಲ್ಲಿ ಇನ್ನೊಬ್ಬರನ್ನು ಗೇಲಿ ಮಾಡಿದ ವಿದ್ಯಾರ್ಥಿಗಳಿಗೆ ಛೀಮಾರಿ ಹಾಕಿದ್ದಾರೆ.
ಇದನ್ನೂ ಓದಿ: 8 ವರ್ಷದ ಬಳಿಕ ಜನಿಸಿದ ಕಂದ 19ನೇ ದಿನಕ್ಕೆ ಕೊಲೆಯಾಯ್ತು; ಕೊಂದವರು ಯಾರು?
ಈ ವಿಡಿಯೊವನ್ನು cyberdddd ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೊ 12.7 ಮಿಲಿಯನ್ ವೀವ್ಸ್ ಹಾಗೂ ಹಲವಾರು ಕಾಮೆಂಟ್‍ಗಳನ್ನು ಗಳಿಸಿದೆ. ಒಬ್ಬ ಬಳಕೆದಾರರು ‘ಈತ ನಿಜವಾದ ವಿದ್ಯಾವಂತ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆ ವಿದ್ಯಾರ್ಥಿಗಳಿಗೆ ಮೂಲಭೂತ ಶಿಕ್ಷಣದ ಅಗತ್ಯವಿದೆʼ ಎಂದು ಹೇಳಿದ್ದಾರೆ.