Friday, 22nd November 2024

Viral Video: ಕರ್ತವ್ಯ ನಿರತ ಸರ್ಕಾರಿ ಅಧಿಕಾರಿಗೆ ಕಪಾಳಮೋಕ್ಷ; ಪಕ್ಷೇತರ ಅಭ್ಯರ್ಥಿ ದರ್ಪವನ್ನೊಮ್ಮೆ ನೋಡಿ- ಇಲ್ಲಿದೆ ವಿಡಿಯೊ

ಜೈಪುರ: ರಾಜಸ್ಥಾನದ (Rajasthan) ಮತದಾನ ಕೇಂದ್ರವೊಂದರಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್‌ (Sub-Divisional Magistrate) ಅವರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದ್ದು, ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ (Viral Video). ಡಿಯೋಲಿ-ಉನಿಯಾರಾ (Deoli-Uniara) ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನರೇಶ್‌ ಮೀನಾ ಎಂಬವರೇ ಈ ರೀತಿಯಾಗಿ ಸರಕಾರಿ ಅಧಿಕಾರಿಯ ಮೇಲೆ ಕೈ ಮಾಡಿದವರಾಗಿದ್ದಾರೆ.

ಈ ಘಟನೆಯು ಸಾಮ್ರವಟ ಮತದಾನ ಕೇಂದ್ರದಲ್ಲಿ ನಡೆದಿದ್ದು, ಈ ವಿಡಿಯೋದಲ್ಲಿ ಕಂಡುಬರುವಂತೆ ಮತದಾನ ಕೇಂದ್ರದ ಕಡೆಗೆ ಹೋಗುತ್ತಿದ್ದ ಮೀನಾ ಅವರು ಇಲ್ಲಿ ಕರ್ತವ್ಯದಲ್ಲಿದ್ದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್‌ ಅಮಿತ್‌ ಚೌಧರಿ ಅವರ ಕೆನ್ನೆಗೆ ಬಾರಿಸಿದ್ದಾರೆ, ಈ ಸಂದರ್ಭ ಅಲ್ಲೇ ಇದ್ದ ಪೊಲೀಸರು ಬಂದು ಮೀನಾ ಅವರನ್ನು ತಡೆದು ಅವರನು ಆಚೆ ಕಳುಹಿಸುತ್ತಿರುವುದು ಈ ವಿಡಿಯೋ ದೃಶ್ಯಗಳಲ್ಲಿ ದಾಖಲಾಗಿದೆ.

ಡಿಯೋಲಿ-ಉನಿಯಾರಾ ಉಪಚುನಾವಣೆಯಲ್ಲಿ ಮೀನಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಇವರು ಇತ್ತೀಚೆಗಷ್ಟೇ ಕಾಂಗ್ರೆಸ್‌ ಪಕ್ಷದಿಂದ ಉಚ್ಛಾಟನೆಗೊಂಡಿದ್ದರು. ಇಲ್ಲಿ ಕಾಂಗ್ರೆಸ್‌ ಪಕ್ಷವು ಕಸ್ತೋರ್‌ ಚಾಂದ್‌ ಮೀನಾ ಅವರನ್ನು ಪಕ್ಷದ ಅಭ್ಯರ್ಥಿ ಎಂದು ಘೋಷಿಸಿತ್ತು. ಆದರೆ ಮೀನಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಾರಣ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಮೀನಾ ಅವರು ಭಾರತ್‌ ಆದಿವಾಸಿ ಪಕ್ಷದ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕಾರಣ ಇಲ್ಲಿ ಮತ ವಿಭಜನೆಯಾಗುವ ಸಾಧ್ಯತೆಗಳಿದ್ದು ಪ್ರಮುಖ ಪಕ್ಷಗಳ ಅಭ್ಯರ್ಥಿಗಳಲ್ಲಿ ನಡುಕಕ್ಕೆ ಕಾರಣವಾಗಿದೆ.

ʼ ಇಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಬ್-ಡಿವಿಷನಲ್‌ ಮ್ಯಾಜಿಸ್ಟ್ರೇಟ್ ತನ್ನ ಮೂರು ಜನರನ್ನು ಬಳಸಿಕೊಂಡು ಅವರಿಂದ ಮತ ಚಲಾಯಿಸುವಂತೆ ಮಾಡಿದ್ದಾರೆʼ ಎಂದು ಮೀನಾ ಆರೋಪಿಸಿದ್ದಾರೆ. “ಇಲ್ಲಿ ಸಂಪೂರ್ಣ ಪೊಲೀಸ್‌ ಪಡೆ ನಮ್ಮನ್ನು ಸುತ್ತುವರೆದಿದೆ. ಮತದಾರರು ಮತದಾನ ಕೇಂದ್ರಗಳಿಗೆ ತೆರಳಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಢುವಂತೆ ನಾನು ವಿನಂತಿ ಮಾಡಿಕೊಳ್ಳುತ್ತಿದ್ದೇನೆʼ ಎಂದು ಮೀನಾ ಅವರ ಮತದಾರರಿಗೆ ಮನವಿ ಮಾಡಿಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಟೋಂಕ್‌ ನ ಎಸ್‌ಪಿ ವಿಕಾಸ್‌ ಸಂಗ್ವಾನ್‌, ʼಇಲ್ಲಿನ ಕೆಲವರು ಪಂಚಾಯತ್‌ ಮತದಾನವನ್ನು ಬಹಿಷ್ಕರಿಸಿದ್ದರು. ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ ಮತ್ತು ತಹಶೀಲ್ದಾರ್‌ ಅಲ್ಲಿಗೆ ತೆರಳಿ ಗ್ರಾಮಸ್ಥರನ್ನು ಮನವೊಲಿಸುವ ಕೆಲಸ ಮಾಡಿದ್ದಾರೆ, ಆದರೆ ಇಲ್ಲಿ ಸ್ವತಂತ್ರ ಅಭ್ಯರ್ಥಿ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಕೂಡಲೇ ಎಸ್‌ಪಿ ಅವರು ಅಭ್ಯರ್ಥಿಯನ್ನು ಅಲ್ಲಿಂದ ಹೊರಗೆ ಕಳುಹಿಸಿದ್ದಾರೆ. ಇದೀಗ ಎಸ್‌ಡಿಎಂ ಈ ಅಭ್ಯರ್ಥಿಯ ಮೇಲೆ ದೂರು ದಾಖಲಿಸುವುದನ್ನು ನಾವು ಕಾಯುತ್ತಿದ್ದೇವೆ. ನಮ್ಮ ತಂಡ ಇಲ್ಲಿಗೆ ತೆರಳಿ ಗ್ರಾಮಸ್ಥರನು ಮನಒಲಿಸಿದೆ ಮತ್ತು ಮತದಾನ ಶಾಂತವಾಗಿ ನಡೆಯುತ್ತಿದೆʼ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Bomb Threat: ಪ್ರಯಾಣಿಕನ ಬಳಿ ಬಾಂಬ್‌ ಇದೆ… ಮುಂಬೈ ಏರ್‌ಪೋರ್ಟ್‌ಗೆ ಮತ್ತೆ ಬೆದರಿಕೆ

2015 ಮತ್ತು 2023ರಲ್ಲಿ ಡಿಯೋಲಿ-ಉನಿಯಾರಾ ಕ್ಷೇತ್ರದ ಶಾಸಕರಾಗಿದ್ದ ಕಾಂಗ್ರೆಸ್‌ ನ ಹರೀಶ್‌ ಚಂದ್ರ ಮೀನಾ  ಅವರು ಲೋಕಸಭೆಗೆ ಆಯ್ಕೆಗೊಂಡ ಹಿನ್ನಲೆಯಲ್ಲಿ ಈ ಕ್ಷೇತ್ರಕ್ಕೆ ಮರುಮತದಾನ ನಡೆಯುತ್ತಿದೆ. ಸದ್ಯ ರಾಜಸ್ಥಾನ ವಿಧಾನಸಭೆಯಲ್ಲಿ ಒಟ್ಟು ೨೦೦ ಸದಸ್ಯಬಲದಲ್ಲಿ ಬಿಜೆಪಿ 114 ಸ್ಥಾನಗಳನ್ನು ಹೊಂದಿದ್ದರೆ, ಕಾಂಗ್ರೆಸ್‌ 65 ಸದಸ್ಯರನ್ನು ಹೊಂದಿದೆ.