Tuesday, 17th December 2024

Viral Video: ಜಬಲ್ಪುರ To ದೆಹಲಿ-ಸಲ್ಲು ಅಭಿಮಾನಿಯ ಮ್ಯಾರಥಾನ್ ಸೈಕಲ್ ಯಾತ್ರೆ; ಇದಕ್ಕಿದೆ ಒಂದು ಪ್ರಮುಖ ಕಾರಣ!

ಭೋಪಾಲ್‌: ನಮ್ಮ ದೇಶದಲ್ಲಿ ಫಿಲ್ಮ್ ಸ್ಟಾರ್‌ಗಳಿಗೆ ಯವ್ಯಾವ ರೀತಿಯ ಅಭಿಮಾನಿಗಳು ಇರ್ತಾರೆ ಅಂದರೆ ಕೆಲವೊಮ್ಮೆ ಅವರ ವರ್ತನೆ ಅತಿರೇಕ ಎನಿಸುತ್ತದೆ. ಇನ್ನು ಕೆಲವು ಅಭಿಮಾನಿಗಳು ತಮ್ಮ ಮೆಚ್ಚಿನ ನಟ-ನಟಿಯರ ಹೆಸರಿನಲ್ಲಿ ಒಂದಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಪ್ರಶಂಸಾರ್ಹ ಕೆಲಸವನ್ನು ಮಾಡುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಅಭಿಮಾನಿ ತನ್ನ ನೆಚ್ಚಿನ ನಟನ ಹೆಸರಿನಲ್ಲಿ ಮಧ್ಯ ಪ್ರದೇಶದ ಜಬಲ್ಪುರದಿಂದ ದೆಹಲಿಗೆ ಸೈಕಲ್ ಪ್ರಯಾಣವನ್ನು (Cycle Journey) ಕೈಗೊಳ್ಳುವ ಮೂಲಕ ಇದೀಗ ಎಲ್ಲರ ಗಮನವನ್ನು ಸೆಳೆದಿದ್ದಾನೆ. ಈ ಸುದ್ದಿ ಮತ್ತು ಇದಕ್ಕೆ ಸಂಬಂಧಿಸಿದ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತಿದೆ.

ಅಂದಹಾಗೆ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಕಟ್ಟರ್ ಅಭಿಮಾನಿಯಾಗಿರುವ ಮಧ್ಯ ಪ್ರದೇಶದ (Madhya Pradesh) ಜಬಲ್ಪುರದ (Jabalpur) ಸಮೀರ್ ಕುಮಾರ್‌ನ ಈ ಮೆಗಾ ಸೈಕಲ್ ಪ್ರಯಾಣದ ಹಿಂದೆ ಒಂದು ಬಲವಾದ ಕಾರಣವಿದೆ. ನಟ ಸಲ್ಮಾನ್ ಖಾನ್ ಅವರಿಗೆ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ (Lawrence Bishnoi) ನಿರಂತರ ಜೀವ ಬೆದರಿಕೆ ಒಡ್ಡುತ್ತಿರುವ ವಿಚಾರಕ್ಕೆ ಆತಂಕಗೊಂಡಿರುವ ಈ ಅಭಿಮಾನಿ, ಪ್ರದಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾಗಿ ಲಾರೆನ್ಸ್ ಗ್ಯಾಂಗ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲು ಮತ್ತು ತನ್ನ ನೆಚ್ಚಿನ ನಟನಿಗೆ ಸೂಕ್ತ ಭದ್ರತೆಯನ್ನು ನಿಡುವಂತೆ ಆಗ್ರಹಿಸುವ ಸಲುವಾಗಿ ಜಬಲ್ಪುರದಿಂದ ದೆಹಲಿಗೆ ಈ ಸೈಕಲ್ ಯಾತ್ರೆಯನ್ನು ಕೈಗೊಂಡಿದ್ದಾನೆಂದು ತಿಳಿದುಬಂದಿದೆ.

ದೆಹಲಿಯಲ್ಲಿ ಪ್ರಧಾನ ಮಂತ್ರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಬಳಿಕ ಸಮೀರ್ ಕುಮಾರ್ ಅಲ್ಲಿಂದ ನೇರವಾಗಿ ಸೈಕಲ್‌ನಲ್ಲೇ ಮುಂಬಯಿಗೆ ತೆರಳುವ ಯೋಚನೆಯಲ್ಲಿದ್ದು, ಡಿ. 27ಕ್ಕೆ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬದಲ್ಲಿ ಭಾಗಿಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾನೆ.

ಜಬಲ್ಪುರ ನಿವಾಸಿಯಾಗಿರುವ ಈ ಸಮೀರ್ ಕುಮಾರ್ ಎಷ್ಟರಮಟ್ಟಿಗೆ ಸಲ್ಮಾನ್ ಖಾನ್ ಅಭಿಮಾನಿಯೆಂದರೆ, ಈತ ಮೈ ತುಂಬಾ ತನ್ನ ನೆಚ್ಚಿನ ನಟನ ಟ್ಯಾಟೂಗಳಿವೆ! 2022ರಲ್ಲಿ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗುವ ಏಕೈಕ ಉದ್ದೇಶದಿಂದ ಈ ಸಮೀರ್ ಕುಮಾರ್ ಮುಂಬಯಿಗೆ 1,100 ಕಿ.ಮೀ. ಸೈಕಲ್ ಯಾತ್ರೆ ಕೈಗೊಳ್ಳುವ ಮೂಲಕ ಸುದ್ದಿಯಾಗಿದ್ದ.

ಇದನ್ನೂ ಓದಿ: Viral News: ಚೈನೀಸ್‌ ಭೇಲ್‌ ತಯಾರಿಸುವಾಗ ಗ್ರೈಂಡರ್‌ ಒಳಗೆ ಕೈ ಹಾಕಿದ ವ್ಯಕ್ತಿ; ಕ್ಷಣಾರ್ಧದಲ್ಲಿ ದೇಹವೇ ಛಿದ್ರ !

ಈ ಬಾರಿಯೂ ಸಮೀರ್ ಸೈಕಲ್ ಯಾತ್ರೆ ಕೈಗೊಂಡಿದ್ದು, ಆದರೆ ಈ ಸಲ ತನ್ನ ನೆಚ್ಚಿನ ನಟನಿಗೆ ಸೂಕ್ತ ಭದ್ರತೆಯ ಆಗ್ರಹದೊಂದಿಗೆ ಮುಂದುವರಿಯುತ್ತಿದ್ದಾನೆ.

ಇತ್ತೀಚಿನ ದಿನಗಳಲ್ಲಿ ಗ್ಯಾಂಗ್‌ಸ್ಟರ್‌ಗಳು ಯುವಜನಾಂಗದ ರೋಲ್ ಮಾಡೆಲ್‌ಗಳಾಗುತ್ತಿರುವ ಕುರಿತು ಸಮೀರ್‌ಗೆ ಖೇದವಿದೆ. ತನ್ನ ಈ ಪ್ರಯತ್ನವನ್ನು ಗಮನಿಸಿ ಸಂಬಂಧಿಸಿದ ಸರ್ಕಾರಗಳು ಇಂತಹ ಗ್ಯಾಂಗ್‌ಸ್ಟರ್‌ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸವನ್ನು ಸಮೀರ್ ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾನೆ ಮತ್ತು ತನ್ನ ಈ ಸೈಕಲ್ ಯಾತ್ರೆ ಸಮಾಜದಲ್ಲಿ ಖಂಡಿತವಾಗಿಯೂ ಒಂದು ಬದಲಾವಣೆಗೆ ಕಾರಣವಾಗುತ್ತದೆ ಎಂಬ ವಿಶ್ವಾಸವೂ ಸಮೀರ್‌ನದ್ದಾಗಿದೆ.