Thursday, 21st November 2024

Viral Video: ರೀಲ್ಸ್‌ ಶೋಕಿಗೆ ಜಿಂಕೆಗಳ ಹಿಂಡನ್ನು ಹೆದರಿಸಿದ ಪುಂಡರು! ವಿಡಿಯೊ ವೈರಲಾಗ್ತಿದ್ದಂತೆ ಯುವಕರಿಗೆ ಕಾದಿತ್ತು ಬಿಗ್‌ ಶಾಕ್‌

Viral Video

ಚೆನ್ನೈ: ತಮಿಳುನಾಡಿನ ಮುದುಮಲೈ ಹುಲಿ ಮೀಸಲು ಪ್ರದೇಶದಲ್ಲಿ ಆಂಧ್ರಪ್ರದೇಶದ ಮೂವರು ಯುವಕರು ಜಿಂಕೆ ಹಿಂಡಿಗೆ ತೊಂದರೆ ನೀಡಿದ್ದು, ಇದನ್ನು ಪ್ರವಾಸಿಗರೊಬ್ಬರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಈಗ ವೈರಲ್(Viral Video) ಆಗಿದೆ. ರೀಲ್ಸ್‌ ಕ್ರೇಜಿಗಾಗಿ ಯುವಕರು ಜಿಂಕೆಗಳಿಗೆ ಹೆದರಿಸಿದ್ದಕ್ಕಾಗಿ ಅರಣ್ಯ ಇಲಾಖೆ ಯುವಕರಿಗೆ 15,000 ರೂ.ಗಳ ದಂಡ ವಿಧಿಸಿದೆ.

ವಿಡಿಯೊದಲ್ಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ರೀಲ್ಸ್‌ ಮಾಡುವ ಉದ್ದೇಶದಿಂದ ಮೂವರು ಯುವಕರು ಜಿಂಕೆಗಳ ಹಿಂಡನ್ನು ನೋಡಿ ಅವುಗಳತ್ತ ಓಡಿ ಹೋಗಿದ್ದಾರೆ. ಹುಡುಗರನ್ನು ನೋಡಿ ಹೆದರಿದ ಜಿಂಕೆಗಳು ಕೂಡ ದಿಕ್ಕಾಪಾಲಾಗಿ ಓಡಿಹೋಗಿದ್ದಾವೆ.

ಈ ಘಟನೆಯ ವಿಡಿಯೊವನ್ನು ‘ಕರ್ನಾಟಕ ಪೋರ್ಟ್‌ಫೋಲಿಯೋ’ ಎಂಬ ಎಕ್ಸ್ ಪೇಜ್‍ನಲ್ಲಿ ವರದಿ ಮಾಡಿದೆ. ಮುದುಮಲೈ ಹುಲಿ ಮೀಸಲು ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ, ಅಲ್ಲಿ ಯುವಕನೊಬ್ಬ ನೋಂದಣಿ ಸಂಖ್ಯೆ AP16CV0001 ಹೊಂದಿರುವ ಕಾರಿನಿಂದ ಇಳಿದು ಅರಣ್ಯ ಪ್ರದೇಶದೊಳಗೆ ಜಿಂಕೆಗಳ ಹಿಂಡನ್ನು ಬೆನ್ನಟ್ಟುವುದು ಮತ್ತು ತೊಂದರೆ ನೀಡುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ.

ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಮೋಜು ಮಸ್ತಿ ಮತ್ತು ರೀಲ್ ಕ್ರೇಜ್‍ಗಾಗಿ ವನ್ಯಜೀವಿಗಳಿಗೆ ತೊಂದರೆ ನೀಡಿದ್ದಕ್ಕಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಯುವಕರನ್ನು ತರಾಟೆಗೆ ತೆಗೆದುಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ. ಹಾಗೂ ಅವರಿಗೆ ದಂಡ ವಿಧಿಸಿದ್ದಾರೆ.

ವರದಿ ಪ್ರಕಾರ, ಮಸಿನಗುಡಿ ಅರಣ್ಯ ಅಧಿಕಾರಿಗಳು ಮೂವರನ್ನು ಅಬ್ದುಲ್ಲಾ ಖಾನ್ (23), ಅಬ್ದುಲ್ ಅಜೀಜ್ (28) ಮತ್ತು ಇಬ್ರಾಹಿಂ ಶೇಖ್ (30) ಎಂದು ಗುರುತಿಸಲಾಗಿದ್ದು, 15,000 ರೂ. ದಂಡದ ಮೊತ್ತವನ್ನು ಪಾವತಿಸಿದ ನಂತರ ಯುವಕರನ್ನು ಬಿಡುಗಡೆ ಮಾಡಿದ್ದಾರೆ. ಅವರು ಅನುಮತಿಯಿಲ್ಲದೆ ಅರಣ್ಯ ಪ್ರದೇಶವನ್ನು ಪ್ರವೇಶಿಸಿದ್ದಾರೆ. ಅಲ್ಲದೇ ಜಿಂಕೆಗಳನ್ನು ಹೆದರಿಸಿ ನಿಯಮ ಉಲ್ಲಂಘನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪ್ರಾಣಿಗಳನ್ನು ಬೆನ್ನಟ್ಟಿ ಅವುಗಳು ಹೆದರುವಂತೆ ಜೋರಾಗಿ ಕಿರುಚಿದ್ದಾರೆ. ಹಾಗಾಗಿ ಈ ಎಲ್ಲಾ ಕಾರಣದಿಂದ ಅವರಿಗೆ ದಂಡ ವಿಧಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಗುವಿನ ಅಳು…ಮಹಿಳೆಯ ಕಿರುಚಾಟ ಕೇಳಿ ಹೊರಬಂದ್ರೆ ಅಷ್ಟೇ…ಒಂಟಿ ಮನೆಗಳೇ ಈ ಕುರುವಾ ಗ್ಯಾಂಗ್‌ನ ಟಾರ್ಗೆಟ್!

ಜಿಂಕೆಯನ್ನು ಜನರು ಅಟ್ಟಾಡಿಸಿದ ವಿಡಿಯೊವೊಂದು ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಬಾಂಗ್ಲಾದೇಶದಲ್ಲಿ ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆ ಮತ್ತು ಈ ಪ್ರದೇಶದಲ್ಲಿ ಭುಗಿಲೆದ್ದ ಧಾರ್ಮಿಕ ಭಯೋತ್ಪಾದನೆಯ ಅಶಾಂತಿಯ ಮಧ್ಯೆ, ಪ್ರತಿಭಟನಾಕಾರರ ಗುಂಪೊಂದು ಢಾಕಾದ ಮೃಗಾಲಯಕ್ಕೆ ಪ್ರವೇಶಿಸಿ ಅಲ್ಲಿ ಜನರು ಹುಚ್ಚುತನದಿಂದ ಜಿಂಕೆಯನ್ನು ಬೆನ್ನಟ್ಟಿಕೊಂಡು ಓಡಿಸಿದ್ದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಜನರ ಆಕ್ರೋಶಕ್ಕೆ ಕಾರಣವಾಗಿತ್ತು.