ಢಾಕಾ: ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಪ್ರಯಾಣಿಕರು ಸಾರ್ವಜನಿಕ ಸಾರಿಗೆಯಾದ ಬಸ್, ರೈಲಿನ ಮೇಲ್ಭಾಗದಲ್ಲಿ ಕುಳಿತುಕೊಂಡು ಸಂಚರಿಸುವುದನ್ನು ನೋಡುತ್ತೇವೆ. ಬಾಂಗ್ಲಾದೇಶದಲ್ಲಿ ಕೂಡ ಜನರು ಲೋಕಲ್ ಟ್ರೈನಿನ ಮೇಲೆ ಕುಳಿತು ಯಾವ ಭಯವಿಲ್ಲದೇ ಪ್ರಯಾಣಿಸುತ್ತಾರೆ. ಇತ್ತೀಚೆಗೆ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ ಭಾರತೀಯ ಯುವಕನೊಬ್ಬ ಚಲಿಸುವ ರೈಲಿನ ಮೇಲೆ ಕುಳಿತು ಪ್ರಯಾಣ ಬೆಳೆಸಿದ್ದಾರೆ. ಅಷ್ಟೇ ಅಲ್ಲದೇ ಕ್ಯಾಮೆರಾದಲ್ಲಿ ತನ್ನ ಸಾಹಸಮಯ ಸ್ಟಂಟ್ ಅನ್ನು ಸೆರೆಹಿಡಿದು ಅದರ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ವೈರಲ್(Viral Video) ಆಗಿದೆ.
15,000ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಜನಪ್ರಿಯ ಇನ್‌ಸ್ಟಾಗ್ರಾಂ ಕಂಟೆಂಟ್ ಕ್ರಿಯೇಟರ್ ರಾಹುಲ್ ಗುಪ್ತಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ರೈಲಿಗೆ ಸಂಬಂಧಿತ ವಿಷಯವನ್ನು ಪೋಸ್ಟ್ ಮಾಡುತ್ತಾರೆ. ಬಾಂಗ್ಲಾದೇಶದಲ್ಲಿ ಚಿತ್ರೀಕರಿಸಲಾದ ಇತ್ತೀಚಿನ ವಿಡಿಯೊದಲ್ಲಿ ಅವರು ರೈಲಿನ ಛಾವಣಿಯ ಮೇಲೆ ಮಲಗಿದ್ದಾರೆ. ಅಲ್ಲಿ ಅವರನ್ನು ರಕ್ಷಿಸಲು ಯಾವುದೇ ಸುರಕ್ಷತಾ ಸಾಧನಗಳಿರಲಿಲ್ಲ. ಅಂತಹ ಅಪಾಯಕಾರಿ ಪ್ರಯಾಣದ ನಡುವೆಯೂ ರಾಹುಲ್ ಹೆದರದೇ ಮಲಗಿದ್ದಾರೆ.
ವೈರಲ್ ಆಗಿರುವ ವಿಡಿಯೊದಲ್ಲಿ ರಾಹುಲ್ ರೈಲಿನ ಎಂಜಿನ್ ಮೇಲೆ ಆರಾಮವಾಗಿ ವಿಶ್ರಾಂತಿ ಪಡೆದಿದ್ದಾರೆ. ರೈಲು ಮುಂದೆ ಚಲಿಸುತ್ತಿದ್ದಂತೆ, ಅವರು ವಿಡಿಯೊ ಮಾಡಲು ತಮ್ಮ ಫೋನ್ ಅನ್ನು ತೆಗೆದು ವಿಡಿಯೊ ರೆಕಾರ್ಡ್ ಮಾಡುತ್ತಾ, “ನಾನು ಬಾಂಗ್ಲಾದೇಶದಲ್ಲಿ ರೈಲಿನ ಛಾವಣಿಯ ಮೇಲೆ ಇದ್ದೇನೆ” ಎಂದು ವೀಕ್ಷಕರಿಗೆ ಹೇಳಿದ್ದಾರೆ. “ಇದನ್ನು ನೀವು ಪ್ರಯತ್ನಿಸಬೇಡಿ, ಇದು ತುಂಬಾ ಅಪಾಯಕಾರಿ” ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:ಶ್ರೀ ರಜನಿ ದೇವಸ್ಥಾನದಲ್ಲಿ ರಜನಿಕಾಂತ್ ಪ್ರತಿಮೆ!
ಈ ವಿಡಿಯೊ 1 ಕೋಟಿಗೂ ಹೆಚ್ಚು ವ್ಯೂವ್ಸ್ ಬಂದಿದೆ ಹಾಗೂ ಸಿಕ್ಕಾಪಟ್ಟೆ ಜನ ಕಾಮೆಂಟ್ ಮಾಡಿದ್ದಾರೆ. “ರಾಹುಲ್‌ಗೆ ರೈಲಿನೊಳಗೆ ಸೀಟ್ ಹುಡುಕಲು ಸಾಧ್ಯವಾಗಲಿಲ್ಲವೇ?ʼʼ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ನೆಟ್ಟಿಗರು ವಿಮಾನದ ಮೇಲೆ ಕುಳಿತು ವಿಡಿಯೊ ಮಾಡುವಂತೆ ಸಲಹೆ ನೀಡಿದರೆ, ಇನ್ನೊಬ್ಬರು “ಯಮರಾಜ (ಸಾವಿನ ದೇವರು) ಇಂದು ರಜೆಯಲ್ಲಿರಬೇಕು” ಎಂದು ವ್ಯಂಗ್ಯವಾಡಿದ್ದಾರೆ.