ನವದೆಹಲಿ: ನಮ್ಮೊಳಗಿರುವ ನೋವನ್ನು ತೋಡಿಕೊಳ್ಳಲು ಹಲವಾರು ಮಾರ್ಗಗಳಿವೆ, ಬಹಳಷ್ಟು ವಿಧಾನಗಳಿವೆ. ಆದರೆ ಇಲ್ಲೊಬ್ಬರು ವಿವಾಹಿತೆ ತನ್ನ ವೈವಾಹಿಕ ಜೀವನದಲ್ಲಿನ ನೋವುಗಳನ್ನು ಮೆಹಂದಿ (mehendi) ಮೂಲಕ ಅಭಿವ್ಯಕ್ತಿಗೊಳಿಸಿದ್ದು, ಆಕೆಯ ನಡೆಗೆ ಇದೀಗ ಸೋಷಿಯಲ್ ಮೀಡಿಯಾ (Social Media) ಮಿಡಿದಿದೆ. ಈ ಪೋಸ್ಟ್ ಹಾಗೂ ಇದರೊಟ್ಟಿಗಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.
ಭಾರತೀಯ ಸಂಪ್ರದಾಯದಲ್ಲಿ ಮೆಹಂದಿಗೆ ಮಹತ್ತರವಾದ ಸ್ಥಾನವಿದೆ. ನಮ್ಮ ಮದುವೆ ಕಾರ್ಯಕ್ರಮಗಳಲ್ಲಿ ಮೆಹಂದಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮದುಮಗಳ ಅಂದಕ್ಕೆ ಇನ್ನಷ್ಟು ಮೆರುಗನ್ನು ನೀಡುವ ವಸ್ತುಗಳಲ್ಲಿ ಮೆಹಂದಿಯೂ ಒಂದು. ಹಾಗಾಗಿ ಮೆಹಂದಿ, ಪ್ರೀತಿ, ಒಗ್ಗಟ್ಟು ಮತ್ತು ಸಂತೋಷದ ಸಂಕೇತವಾಗಿದೆ. ಆದರೆ ಇಲ್ಲೊಂದು ಕಡೆ ಮೆಹಂದಿ ಮಹಿಳೆಯೊಬ್ಬರ ನೋವನ್ನು ತೋಡಿಕೊಳ್ಳುವ ಮಾಧ್ಯಮವಾಗಿ ಮೂಡಿಬಂದಿದೆ. ಮಾತ್ರವಲ್ಲದೇ, ಇದನ್ನೀಗ ‘ಡೈವೊರ್ಸ್ ಮೆಹಂದಿ’ (Divorce Mehndi) ಎಂದು ವ್ಯಾಖ್ಯಾನಿಸಲಾಗುತ್ತಿದೆ. ಈ ಆವಿಷ್ಕಾರಿ ಕಲೆಯು ಮುರಿದ ವೈವಾಹಿಕ ಸಂಬಂಧದೊಂದಿಗೆ ಮಹಿಳೆಯೊಬ್ಬರ ನೋವಿನ ಪಯಣವನ್ನು ಪರಿಣಾಮಕಾರಿಯಾಗಿ ವ್ಯಾಖ್ಯಾನಿಸಿದೆ.
ಮದುಮಗಳ ಮೆಹಂದಿಗಿಂತ ಭಿನ್ನವಾಗಿರುವ ಈ ಮೆಹಂದಿಯು, ಮಹಿಳೆಯೊಬ್ಬಳು ತನ್ನ ಮದುವೆಯ ಬಳಿಕ ವೈವಾಹಿಕ ಜೀವನದಲ್ಲಿ ಅನುಭವಿಸಿದ ನೋವು, ಮೋಸ ಮತ್ತು ಕಳೆದುಕೊಂಡ ಸ್ವಾತಂತ್ರ್ಯದ ನೋವಿನ ಕಥೆಗಳನ್ನು ಮೆಹಂದಿ ಚಿತ್ರದ ಮೂಲಕ ಪಡಿಮೂಡಿಸಲಾಗುತ್ತದೆ. ಸದ್ಯಕ್ಕೆ, ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋ ಪ್ರಕಾರ, ಊರ್ವಶಿ ವೋರಾ ಶರ್ಮ ಎಂಬವರು ತನ್ನ ಕೈಗಳಲ್ಲಿ ಬಿಡಿಸಿಕೊಂಡಿರುವ ಮೆಹಂದಿ ಚಿತ್ರಗಳು ಆಕೆಯ ರೋಚಕ ವೈವಾಹಿಕ ಪಯಣದ ಕಥೆಗಳನ್ನು ಈ ಚಿತ್ರಗಳು ಹೇಳುತ್ತಿವೆ.
ಇಲ್ಲಿ ಮೂಡಿರುವ ಮೆಹಂದಿ ವಿನ್ಯಾಸಗಳು ವೈವಾಹಿಕ ಜೀವನದ ನೈಜತೆಯನ್ನು ಬಿಂಬಿಸುವಂತಿದೆ. ಪತಿಯ ಮನೆಯಲ್ಲಿ ಸೇವಕಿಯಂತೆ ನಡೆಸಿಕೊಂಡಿದ್ದು, ಏಕಾಂಗಿತನದ ಭಾವನೆ ಮತ್ತು ತನ್ನ ಪತಿಯಿಂದ ಸಿಗದ ನೈತಿಕ ಬೆಂಬಲ ಇವನ್ನೆಲ್ಲಾ ಸೂಚ್ಯವಾಗಿ ಆದರೆ ಪರಿಣಾಮಕಾರಿಯಾಗಿ ಈ ಮೆಹಂದಿ ಚಿತ್ರಗಳು ನಮಗೆ ಹೇಳುತ್ತವೆ. ಇನ್ನು, ಪತಿ-ಪತ್ನಿ ನಡುವಿನ ತಪ್ಪು ಕಲ್ಪನೆಗಳು, ವಾದ-ವಿವಾದಗಳು ಹಾಗೂ ತಿವ್ರ ಸ್ವರೂಪದ ಖಿನ್ನತೆ ಮೆಹಂದಿ ಕಲೆಯಾಗಿ ಆಕೆಯ ಕೈಗಳಲ್ಲಿ ಅರಳಿದೆ. ಮತ್ತು ಈ ಎಲ್ಲಾ ನೋವು, ಅವಮಾನಗಳ ಫಲಿತಾಂಶವೆಂಬಂತೆ ಆಕೆ ಅಂತಿಮವಾಗಿ ತನ್ನ ವೈವಾಹಿಕ ಸಂಬಂಧವನ್ನು ಮುರಿದುಕೊಳ್ಳಲು ನಿರ್ಧರಿಸಿದ್ದಾರೆ.
ಈ ವಿಡಿಯೋದಲ್ಲಿರುವ ಭಾವನಾತ್ಮಕ ವಿಚಾರ ಸೋಷಿಯಲ್ ಮೀಡಿಯಾ ಬಳಕೆದಾರರನ್ನು ಒಮ್ಮೆಗೆ ಕಣ್ಣಂಚಲ್ಲಿ ನೀರೂರುವಂತೆ ಮಾಡಿದೆ.
ಇದನ್ನೂ ಓದಿ: Indian Automobile: ಪ್ರಯಾಣಿಕ ವಾಹನಗಳ ಮಾರಾಟಕ್ಕೆ ‘ಶುಕ್ರದೆಸೆ’ ತಂದ ನವೆಂಬರ್!; ಯಾವ ಕಂಪನಿಗಳ ಎಷ್ಟು ವೆಹಿಕಲ್ಸ್ ಸೇಲ್?
ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಕಮೆಂಟ್ ಗಳ ಮಹಾಪೂರವನ್ನೇ ಹರಿಸಿದ್ದು, ಒಬ್ಬೊಬ್ಬರು ಒಂದೊಂದು ರಿತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಮೆಹಂದಿ ಮೂಲಕ ವ್ಯಕ್ತಗೊಂಡಿರುವ ನೋವನ್ನು ನೋಡಿದಾಗ ಹೃದಯ ಕಂಪಿಸುತ್ತದೆ, ಆದರೆ ಆಕೆ ತನ್ನ ಸ್ವಾತಂತ್ರ್ಯವನ್ನು ಸಂಭ್ರಮಿಸಿದ್ದು, ಮಹಿಳಾ ಶಕ್ತಿಯ ದ್ಯೋತಕವಾಗಿದೆ’ ಎಂದು ಒಬ್ಬರು ಬರೆದುಕೊಂಡಿದ್ದಾರೆ.
‘ಇದು ನನ್ನ ಹೃದಯಕ್ಕೆ ನಾಟಿತು. ವಿಚ್ಛೇದನ ಎನ್ನುವುದು ಸುಲಭದ ಸಂಗತಿಯಲ್ಲ, ಆದರೆ ತನ್ನ ನೋವನ್ನು ಮೆಹಂದಿ ಮೂಲಕ ವ್ಯಕ್ತಪಡಿಸಿರುವುದು ಪ್ರಶಂಸನೀಯ’ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ. ‘ಇದು ಕೇವಲ ಒಂದು ಕಲೆಯಲ್ಲ ; ಇದೊಂದು ಮಹತ್ವದ ಕ್ಷಣ. ಮಹಿಳೆಯರು ತಾವು ಹೇಳಬೇಕೆಂದಿರುವುದನ್ನು ಪರಿಣಾಮಕಾರಿಯಾಗಿ ಹೇಳುತ್ತಾರೆಂಬುದಕ್ಕೆ ಇದೇ ಸಾಕ್ಷಿ’ ಎಂದು ಒಬ್ಬರ ಕಮೆಂಟ್ ಆಗಿದೆ. ‘ಕೊನೆಗೂ ಮೆಹಂದಿಗೆ ಮದುವೆ ಸಂಭ್ರಮಕ್ಕಿಂತಲೂ ತೂಕದ ಅರ್ಥವೊಂದು ಇದೀಗ ಸಿಕ್ಕಂತಾಗಿದೆ. ಇದು ನೈಜವಾಗಿದೆ’ ಎಂದು ಪ್ರಶಂಸಿದ್ದಾರೆ.
ಒಟ್ಟಿನಲ್ಲಿ, ಮಹಿಳೆಯೊಬ್ಬಳು ತನ್ನ ವೈವಾಹಿಕ ಜೀವನದ ನೋವನ್ನು ಮಹೆಂದಿ ಕಲೆ ಮೂಲಕ ತನ್ನ ಕೈಗಳಲ್ಲಿ ವ್ಯಕ್ತಪಡಿಸಿ, ಅಂತಿಮವಾಗಿ ತಾನು ವಿಚ್ಛೇದನ ಪಡೆದುಕೊಳ್ಳುವ ಮೂಲಕ ಆ ಎಲ್ಲಾ ನೋವುಗಳಿಂದ ಹೊರಬಂದು ಇದೀಗ ಸ್ವತಂತ್ರಳಾಗಿದ್ದೇನೆ ಎಂದು ಹೇಳಿಕೊಂಡಿರುವುದು ಮಹತ್ವದ ವಿಚಾರವೇ ಸರಿ.