ನೀವು ತಿಂದ ಆಹಾರದಿಂದ ಹೊಟ್ಟೆಯಲ್ಲಿ ಸಮಸ್ಯೆಯಾದಾಗ ವಾಕರಿಕೆ ಸಮಸ್ಯೆ ಕಾಡುತ್ತದೆ. ಈ ವಾಕರಿಕೆ ಸಮಸ್ಯೆ ಇದ್ದಾಗ ನಿಮಗೆ ಯಾವುದೇ ಆಹಾರವನ್ನು ತಿನ್ನಲು ಆಗುವುದಿಲ್ಲ. ಸ್ವಲ್ಪ ಆಹಾರ ತಿಂದ ಕೂಡಲೇ ವಾಕರಿಕೆ (Vomiting Problem) ಕಾಣಿಸಿಕೊಳ್ಳುತ್ತದೆ. ಹಾಗಾಗಿ ಈ ಸಮಸ್ಯೆ ಇದ್ದಾಗ ನೀವು ಕೆಲವೊಂದು ಆಹಾರಗಳನ್ನು ತಿನ್ನವುದನ್ನು ತಪ್ಪಿಸಬೇಕಾಗುತ್ತದೆ. ಹಾಗೇ ಕೆಲವೊಂದು ಆಹಾರಗಳನ್ನು ತಿಂದರೆ ಅದು ಬೇಗನೆ ನಿವಾರಣೆಯಾಗುತ್ತದೆ. ಹಾಗಾದ್ರೆ ಅಂತಹ ಪದಾರ್ಥಗಳು ಯಾವುದೆಂಬುದನ್ನು ತಿಳಿದುಕೊಳ್ಳಿ.
ವಾಕರಿಕೆ ಇದ್ದಾಗ ಈ ಆಹಾರಗಳನ್ನು ಸೇವಿಸಿ:
ಶುಂಠಿ
ಶುಂಠಿಯಲ್ಲಿ ವಾಕರಿಕೆ ವಿರೋಧಿ ಗುಣಲಕ್ಷಣಗಳಿವೆ. ಸಂಶೋಧನೆಯ ಪ್ರಕಾರ, ಶುಂಠಿಯಲ್ಲಿರುವ ಜೈವಿಕ ಸಂಯುಕ್ತಗಳು ವಾಕರಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತವೆ ಎನ್ನಲಾಗಿದೆ. ಹಾಗಾಗಿ ಶುಂಠಿಯಿಂದ ಚಹಾ ತಯಾರಿಸಿ ಕುಡಿಯಿರಿ. ಒಂದು ತುಂಡು ಶುಂಠಿ ನಿಮ್ಮ ಹೊಟ್ಟೆಯನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.
ಬಾಳೆಹಣ್ಣು
ಬಾಳೆಹಣ್ಣು ಪೊಟ್ಯಾಸಿಯಂನಿಂದ ತುಂಬಿರುತ್ತದೆ. ಇದು ನಿಮಗೆ ವಾಂತಿಯಾದಾಗ ದೇಹದಿಂದ ನಷ್ಟವಾದ ಎಲೆಕ್ಟ್ರೋಲೈಟ್‍ಗಳನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ. ಈ ಹಣ್ಣಿನ ಸಿಹಿ ಪರಿಮಳವು ನಿಮ್ಮ ಹೊಟ್ಟೆಯನ್ನು ಶಾಂತಗೊಳಿಸುತ್ತದೆ. ಜೊತೆಗೆ, ಬಾಳೆಹಣ್ಣುಗಳು ಜೀರ್ಣಿಸಿಕೊಳ್ಳಲು ಸುಲಭ.
ಅಕ್ಕಿ ಅಥವಾ ಆಲೂಗಡ್ಡೆ
ನಿಮ್ಮ ಹೊಟ್ಟೆಯಲ್ಲಿ ಸಮಸ್ಯೆ ಇದ್ದಾಗ ಇಂತಹ ಮೃದುವಾದ ಮತ್ತು ಪಿಷ್ಟಯುಕ್ತ ಆಹಾರಗಳನ್ನು ಸೇವಿಸಬೇಕು. ಅಕ್ಕಿ ಅಥವಾ ಆಲೂಗಡ್ಡೆ ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿದೆ. ಇದು ಹೊಟ್ಟೆಯನ್ನು ಶಾಂತಗೊಳಿಸಲು ಮತ್ತು ಶಕ್ತಿಯನ್ನು ಒದಗಿಸಲು ಸಹಾಯ ಮಾಡುತ್ತದೆ.
ಆ್ಯಪಲ್ ಸಾಸ್
ವಾಕರಿಕೆಯನ್ನು ದೂರವಿರಿಸಲು ಒಂದು ಚಮಚ ಆಪಲ್ ಸಾಸ್ ಅನ್ನು ಸೇವಿಸಿದರೆ ಸಾಕು. ಇದು ಮಕ್ಕಳಿಗೆ ಬಹಳ ಸಹಕಾರಿಯಾಗಿದೆ. ಈ ಮಸಾಲೆ ಸ್ವಲ್ಪ ಸಿಹಿ ಮತ್ತು ಹುಳಿ ಇದ್ದು, ಜೀರ್ಣಿಸಿಕೊಳ್ಳಲು ಸುಲಭವಾಗಿದೆ. ಇದು ಪೆಕ್ಟಿನ್ ಅನ್ನು ಸಹ ಹೊಂದಿರುತ್ತದೆ, ಇದು ನಿಮ್ಮ ಹೊಟ್ಟೆಯ ಒಳಪದರವನ್ನು ಶಾಂತಗೊಳಿಸಲು ಮತ್ತು ಜೀರ್ಣಕ್ರಿಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ನಿಮಗೆ ವಾಕರಿಕೆ ಇದ್ದಾಗ ಈ ಆಹಾರ ಸೇವಿಸಬೇಡಿ
ಕರಿದ ಅಥವಾ ಜಿಡ್ಡಿನ ಆಹಾರಗಳು
ಹೊಟ್ಟೆಯಲ್ಲಿ ಸಮಸ್ಯೆ ಇದ್ದಾಗ ಹುರಿದ ಮತ್ತು ಜಿಡ್ಡಿನ ಆಹಾರಗಳನ್ನು ತಪ್ಪಿಸಿ. ಈ ಆಹಾರಗಳನ್ನು ಜೀರ್ಣಿಸಿಕೊಳ್ಳಲು ನಿಮ್ಮ ದೇಹಕ್ಕೆ ಕಷ್ಟವಾಗುತ್ತದೆ. ಇದರಿಂದ ವಾಕರಿಕೆ ಮತ್ತಷ್ಟು ಜಾಸ್ತಿಯಾಗುತ್ತದೆ.
ಡೇರಿ ಉತ್ಪನ್ನಗಳು
ವಾಕರಿಕೆ ಇದ್ದಾಗ ಹಾಲು, ಚೀಸ್, ಮೊಸರು ಮತ್ತು ಇತರ ಡೈರಿ ಉತ್ಪನ್ನಗಳು ಹೊಟ್ಟೆಯ ಒಳಪದರವನ್ನು ಕಿರಿಕಿರಿಗೊಳಿಸಬಹುದು. ಇದರಿಂದ ಜೀರ್ಣಕಾರಿ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು.
ಮಸಾಲೆಯುಕ್ತ ಆಹಾರಗಳು
ನಿಮಗೆ ವಾಕರಿಕೆ ಇದ್ದಾಗ ಮಸಾಲೆಯುಕ್ತ ಆಹಾರಗಳನ್ನು ತಪ್ಪಿಸಿ. ಯಾಕೆಂದರೆ ವಾಕರಿಕೆಯಿಂದ ಹೊಟ್ಟೆಯ ಒಳಪದರದಲ್ಲಿ ಉರಿ ಇರುತ್ತದೆ. ಮಸಾಲೆಯುಕ್ತ ಆಹಾರ ಹೊಟ್ಟೆಯನ್ನು ಮತ್ತಷ್ಟು ಕಿರಿಕಿರಿಗೊಳಿಸುತ್ತದೆ. ಇದು ವಾಂತಿಗೆ ಕಾರಣವಾಗಬಹುದು.
ಕೆಫೀನ್
ವಾಕರಿಕೆ ಇದ್ದಾಗ ಕೆಫೀನ್ ಅನ್ನು ಸೇವಿಸಬೇಡಿ. ಕೇಪೀನ್ ಇರುವಂತಹ ತಂಪು ಪಾನೀಯಗಳು, ಚಹಾ ಮತ್ತು ಕಾಫಿ ನಿಮ್ಮ ದೇಹವನ್ನು ನಿರ್ಜಲೀಕರಣಗೊಳಿಸಬಹುದು, ಇದರ ಪರಿಣಾಮವಾಗಿ ವಾಕರಿಕೆ ಸಮಸ್ಯೆ ಉಂಟಾಗಬಹುದು.
ಆಮ್ಲೀಯ ಆಹಾರಗಳು
ಸಿಟ್ರಸ್ ಹಣ್ಣುಗಳು, ಟೊಮೆಟೊಗಳು ಅಥವಾ ವಿನೆಗರ್‍ನಂತಹ ಆಮ್ಲ ಅಧಿಕವಾಗಿರುವ ಆಹಾರಗಳು ನಿಮ್ಮ ಹೊಟ್ಟೆಯ ಒಳಪದರವನ್ನು ಕಿರಿಕಿರಿಗೊಳಿಸಬಹುದು ಮತ್ತು ನಿಮ್ಮ ವಾಕರಿಕೆಯನ್ನು ಇನ್ನಷ್ಟು ಹದಗೆಡಿಸಬಹುದು. ಈ ಆಹಾರಗಳು ನಿಮ್ಮ ಹೊಟ್ಟೆಯಲ್ಲಿ ಹೆಚ್ಚಿನ ಆಮ್ಲವನ್ನು ಉತ್ಪಾದಿಸಲು ಕಾರಣವಾಗಬಹುದು, ಹಾಗಾಗಿ ವಾಕರಿಕೆ ಇದ್ದಾಗ ಇವುಗಳನ್ನು ತಪ್ಪಿಸಿ.
ಇದನ್ನೂ ಓದಿ: ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬೇಸತ್ತು ಹೋಗಿದ್ದೀರಾ? ಹಾಗಾದ್ರೆ ಈ ಟಿಪ್ಸ್ ಟ್ರೈ ಮಾಡಿ
ಈ ಮಾಹಿತಿ ತಿಳಿದು ವಾಕರಿಕೆ ಸಮಸ್ಯೆ ಇದ್ದಾಗ ನಿಮ್ಮ ದೇಹದ ಆರೋಗ್ಯದ ಬಗ್ಗೆ ಗಮನಕೊಡಿ. ವಾಕರಿಕೆ ಸಮಸ್ಯೆಯನ್ನು ಬೇಗನೆ ವಾಸಿ ಮಾಡಿಕೊಳ್ಳಿ. ಒಂದು ಆರೋಗ್ಯಕರವಾದ ಜೀವನ ನಿಮ್ಮದಾಗಿಸಿಕೊಳ್ಳಿ.