Sunday, 15th December 2024

ಪ್ರಧಾನಿ ಬದ್ಧತೆ ಮತ್ತು ನಾಯಕತ್ವಕ್ಕಾಗಿ ಮತ ಹಾಕಿದ್ದಾರೆ: ಪ್ರಹ್ಲಾದ್ ಜೋಶಿ

ನವದೆಹಲಿ/ಜೈಪುರ: ಜನರು ಕಾಂಗ್ರೆಸ್‌ ಪಕ್ಷವನ್ನ ತಿರಸ್ಕರಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಬದ್ಧತೆ ಮತ್ತು ನಾಯಕತ್ವಕ್ಕಾಗಿ ಮತ ಹಾಕಿದ್ದಾರೆ ಎಂದು ರಾಜಸ್ಥಾನದ ಭಾರತೀಯ ಜನತಾ ಪಕ್ಷದ ಉಸ್ತುವಾರಿ ಆಗಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಬಿಜೆಪಿ ಮೂರು ರಾಜ್ಯಗಳಲ್ಲಿ ಸರ್ಕಾರ ರಚಿಸಲು ಸಿದ್ಧವಾಗಿದೆ. ಮಧ್ಯಪ್ರದೇಶದಲ್ಲಿ 230 ಕ್ಷೇತ್ರಗಳ ಪೈಕಿ 158 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ರಾಜಸ್ಥಾನದಲ್ಲಿ 199 ಕ್ಷೇತ್ರಗಳ ಪೈಕಿ 111 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಛತ್ತೀಸ್‌ಗಢದಲ್ಲಿ 90 ಕ್ಷೇತ್ರಗಳ ಪೈಕಿ 54 ಸ್ಥಾನಗಳಲ್ಲಿ ಮುಂದಿದೆ. ಜೆಪಿ ನಡ್ಡಾ ನೇತೃತ್ವದ ಪಕ್ಷವು ಮಧ್ಯಪ್ರದೇಶದಲ್ಲಿ ಅಧಿಕಾರವನ್ನು ಉಳಿಸಿಕೊಂಡಿದೆ.

“ಜನರು ಬಿಜೆಪಿ, ಸಕಾರಾತ್ಮಕ ಬದ್ಧತೆ ಮತ್ತು ಪ್ರಧಾನಿ (ನರೇಂದ್ರ ಮೋದಿಯವರ)ಯ ನಾಯಕತ್ವಕ್ಕೆ ಮತ ಹಾಕಿದ್ದಾರೆ. ಮತದಾರರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ” ಎಂದು ತಿಳಿಸಿದರು.

ಸಂಸದೀಯ ವ್ಯವಹಾರ – ಕಲ್ಲಿದ್ದಲು ಮತ್ತು ಗಣಿ ಸಚಿವ ಜೋಶಿ, “ಬೋಗಸ್ ಭರವಸೆ” ನೀಡಿದ್ದಕ್ಕಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷವನ್ನು ಮತದಾರರು ದೂರವಿಟ್ಟಿದ್ದಾರೆ ಎಂದು ತಿಳಿಸಿದರು.

“ಕಾಂಗ್ರೆಸ್ ಪಕ್ಷ ಬೋಗಸ್ ಭರವಸೆಗಳನ್ನು ನೀಡುತ್ತಾ ಬಂದಿದೆ. ಮತದಾರರು ಅದನ್ನು ಕರ್ನಾಟಕ, ಹಿಮಾಚಲ ಪ್ರದೇಶದಲ್ಲಿ ಈಗಾಗಲೇ ನೋಡಿದ್ದಾರೆ. ಹಾಗಾಗಿ ಕಾಂಗ್ರೆಸ್​ನವರೀಗ ಸೋತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಲಾಗಿದೆ. ನನಗೆ ಬಹಳ ಸಂತೋಷವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ವರಿಷ್ಠರು ಚುನಾವಣಾ ಕಣದಲ್ಲಿದ್ದ ನಾಯಕರ ಗೆಲುವಿಗಾಗಿ ವ್ಯಾಪಕ ಪ್ರಚಾರ ನಡೆಸಿದ್ದರು. ಪರಿಣಾಮ, ಮೂರು ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿದೆ. ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

ದಕ್ಷಿಣದ ತೆಲುಗು ರಾಜ್ಯ ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.