ಅಗರ್ತಲಾ: ವಕ್ಫ್ ಬೋರ್ಡ್ (Waqf Board) ಸದ್ಯ ವಿಚಾರ ದೇಶಾದ್ಯಂತ ಸಂಚಲನ ಮೂಡಿಸಿದೆ. ಈ ಮಧ್ಯೆ ತ್ರಿಪುರಾದ ಪರಿಶಿಷ್ಟ ಜಾತಿ ಕಲ್ಯಾಣ ಸಚಿವ ಸುಧಾಂಗ್ಶು ದಾಸ್ (Sudhangshu Das) ಅವರು ಮುಸ್ಲಿಮರಿಗೆ ವಕ್ಫ್ ಮಂಡಳಿ ಇರುವಂತೆ ಹಿಂದೂಗಳಿಗೆ ‘ಸನಾತನ ಮಂಡಳಿ’ ಇರಬೇಕು ಎಂದು ಹೇಳಿಕೆ ನೀಡುವ ಮೂಲಕ ವಿವಾದ ಹುಟ್ಟು ಹಾಕಿದ್ದಾರೆ. ಕ್ರಿಶ್ಚಿಯನ್ನರು ಮತ್ತು ಸಿಖ್‌ನಂತಹ ಇತರ ಸಮುದಾಯಗಳು ತಮ್ಮದೇ ಆದ ಪ್ರತ್ಯೇಕ ಮಂಡಳಿಗಳನ್ನು ಹೊಂದಿರಬೇಕು. ಅದು ಸಾಧ್ಯವಾಗದಿದ್ದರೆ ಅಂತಹ ಎಲ್ಲ ಮಂಡಳಿಗಳನ್ನು ರದ್ದುಗೊಳಿಸಬೇಕು ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ತಮ್ಮ ಅಧಿಕೃತ ಫೇಸ್‌ಬುಕ್ ಹ್ಯಾಂಡಲ್‌ನಿಂದ್ ಪೋಸ್ಟ್ ಹಂಚಿಕೊಂಡಿರುವ ಸುಧಾಂಗ್ಶು ದಾಸ್, “ಸಂವಿಧಾನದ ಪ್ರಕಾರ ಇದು ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ದೇಶವಾಗಿದೆ. ಇಲ್ಲಿ ಎಲ್ಲ ನಾಗರಿಕರಿಗೆ ಸಮಾನ ಹಕ್ಕುಗಳಿವೆ. ಆದ್ದರಿಂದ ಮುಸ್ಲಿಮರಿಗೆ ವಕ್ಫ್ ಮಂಡಳಿ ಇದ್ದರೆ, ಹಿಂದೂಗಳಿಗೆ ಸನಾತನ ಮಂಡಳಿ ಇರಬೇಕು, ಕ್ರಿಶ್ಚಿಯನ್ನರು, ಸಿಖ್ಖರು ಮತ್ತು ಇತರ ಎಲ್ಲ ಧರ್ಮಗಳಿಗೆ ಪ್ರತ್ಯೇಕ ಮಂಡಳಿ ರಚಿಸಬೇಕು. ಇಲ್ಲದಿದ್ದರೆ ಎಲ್ಲ ಧರ್ಮಗಳ ಮಂಡಳಿಗಳನ್ನು ರದ್ದುಗೊಳಿಸಬೇಕು ಮತ್ತು ಎಲ್ಲ ನಾಗರಿಕರಿಗೆ ಸಮಾನ ಹಕ್ಕುಗಳನ್ನು ಪರಿಚಯಿಸಬೇಕು” ಎಂದು ಅವರು ಬರೆದುಕೊಂಡಿದ್ದಾರೆ.
“ಇದು ಭಾರತ ಸರ್ಕಾರಕ್ಕೆ ನನ್ನ ಮನವಿ” ಎಂದು ಅವರು #HinduUnity ಹ್ಯಾಷ್‌ಟ್ಯಾಗ್ ಬಳಸಿದ್ದಾರೆ. ಸದ್ಯ ಅವರ ಈ ಪೋಸ್ಟ್ ವಿವಾದ ಹುಟ್ಟು ಹಾಕಿದೆ.
ವಿಪಕ್ಷಗಳು ಹೇಳಿದ್ದೇನು?
ಸುಧಾಂಗ್ಶು ದಾಸ್ ವಿರುದ್ದ ವಿಪಕ್ಷಗಳು ಕಿಡಿಕಾರಿವೆ. ಅವರ ಪೋಸ್ಟ್‌ಗೆ ಆಕ್ರೋಶ ವ್ಯಕ್ತಪಡಿಸಿವೆ. “ಸುಧಾಂಗ್ಶು ದಾಸ್ 2 ಬಾರಿ ಶಾಸಕರಾಗಿ, ಒಮ್ಮೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆ ಎಲ್ಲ ಪ್ರಮಾಣ ವಚನಗಳನ್ನು ಸಂವಿಧಾನದ ಹೆಸರಿನಲ್ಲಿ ಸ್ವೀಕರಿಸಿದ್ದಾರೆ. ಆದರೆ ಅವರು ಸಂವಿಧಾನವನ್ನು ಗೌರವಿಸಲು ವಿಫಲರಾಗಿದ್ದಾರೆ” ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮತ್ತು ಮಾಜಿ ಲೋಕಸಭಾ ಸಂಸದ ಜಿತೇಂದ್ರ ಚೌಧರಿ ಹೇಳಿದ್ದಾರೆ. ಸುಧಾಂಗ್ಶು ದಾಸ್ ತಮ್ಮ ಹುದ್ದೆಗೆ ಕೂಡಲೇ ರಾಜೀನಾಮೆ ಸಲ್ಲಿಸಬೇಕು ಎಂದೂ ಆಗ್ರಹಿಸಿದ್ದಾರೆ.
ವಿವಾದ ಹೊಸತೇನಲ್ಲ
ಸುಧಾಂಗ್ಶು ದಾಸ್ ಅವರಿಗೂ ವಿವಾದಕ್ಕೂ ಬಿಡಲಾರದ ನಂಟು. ಹಿಂದೆಯೂ ಅವರು ತಮ್ಮ ಹೇಳಿಕೆಯಿಂದಲೇ ಸಂಚಲನ ಸೃಷ್ಟಿಸಿರುವ ಉದಾಹರಣೆಯೂ ಇದೆ. ಸೆಪ್ಟೆಂಬರ್‌ನಲ್ಲಿ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು, ಹಿಂದೂಗಳು ಇನ್ನು ಮುಂದೆ ದೇವರು ಮತ್ತು ದೇವತೆಗಳ ಪೂಜೆ ಮಾಡುವ ನೈತಿಕ ಹಕ್ಕನ್ನು ಹೊಂದಿಲ್ಲ ಎಂದು ಹೇಳುವ ಮೂಲಕ ವಿವಾದಕ್ಕೆ ಸಿಲುಕಿದ್ದರು. ತಮ್ಮ ದೇವತೆಗಳು ಮತ್ತು ದೇವಾಲಯಗಳನ್ನು ನಾಸ್ತಿಕ ಜಿಹಾದಿಗಳಿಂದ ರಕ್ಷಿಸಲು ಸಾಧ್ಯವಾಗದ ಸಮುದಾಯಕ್ಕೆ ಪೂಜಿಸುವ ಹಕ್ಕಿಲ್ಲ ಎಂದು ಅವರು ಬರೆದುಕೊಂಡಿದ್ದರು.
1988ರಲ್ಲಿ ಜನಿಸಿದ ಸುಧಾಂಗ್ಶು ದಾಸ್ ಅವರು ಎರಡನೇ ಮಾಣಿಕ್ ಸಹಾ ಸಚಿವ ಸಂಪುಟದಲ್ಲಿ ಪರಿಶಿಷ್ಟ ಜಾತಿ, ಪಶುಸಂಗೋಪನೆ, ಮೀನುಗಾರಿಕೆ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Karnataka Waqf Controversy : ರಾಜ್ಯದಲ್ಲೂ ವಕ್ಫ್ ಆಸ್ತಿ ವಿವಾದ; ಏನು, ಎತ್ತ? Complete Details