Friday, 22nd November 2024

Wayanad By Election: ವಯನಾಡಿನಲ್ಲಿ ಆಹಾರ ಕಿಟ್‌ ವಿತರಣೆ; ಪ್ರಿಯಾಂಕಾ, ರಾಹುಲ್‌ ಗಾಂಧಿ ವಿರುದ್ಧ ಪ್ರಕರಣ ದಾಖಲು

Wayanad By Election

ತಿರುವಂತಪುರಂ: ವಯನಾಡಿನ ಲೋಕಸಭಾ ಉಪಚುನಾವಣೆಗೆ (Wayanad By Election) ಮುನ್ನ ಚುನಾವಣಾ ಆಯೋಗದ (Election Commission) ಫ್ಲೈಯಿಂಗ್ ಸ್ಕ್ವಾಡ್ ಮತ್ತು ಸ್ಥಳೀಯ ಪೊಲೀಸರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi ) ಮತ್ತು ವಯನಾಡಿನ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಅವರ ಸಹೋದರಿ ಪ್ರಿಯಾಂಕಾ ಗಾಂಧಿ (Priyanka Gandhi) ಅವರ ಚಿತ್ರ ಇರುವ ಆಹಾರ ಕಿಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ (ನ. 9) ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 173 ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಮುಂಬರುವ ಲೋಕಸಭಾ ಉಪಚುನಾವಣೆಯಲ್ಲಿ ವಯನಾಡಿನ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಪ್ರಿಯಾಂಕಾ ಗಾಂಧಿ ಇರುವ ಆಹಾರ ಪೊಟ್ಟಣಗಳು ವಯನಾಡ್ ಜಿಲ್ಲೆಯ ತಿರುನೆಲ್ಲಿಯಲ್ಲಿ ಹಂಚಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ತಕ್ಷಣ ಎಚ್ಚೆತ್ತ ಅಧಿಕಾರಿಗಳು ದಾಳಿ ನಡೆಸಿ ಸುಮಾರು 30 ಆಹಾರ ಪೊಟ್ಟಣಗಳನ್ನು, ಆಹಾರ ಕಿಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಘಟನೆಯ ನಂತರ ಕಾಂಗ್ರೆಸ್‌ ನಾಯಕರು ತಮ್ಮ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದಿಂದ ಬದುಕುಳಿದವರಿಗೆ ಹಂಚಲು ತಂದಿದ್ದ ಆಹಾರ ಕಿಟ್‌ಗಳು ಇದಾಗಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್‌ನ ಈ ನಡೆಯನ್ನು ಟೀಕಿಸಿದ ಪ್ರತಿಪಕ್ಷಗಳು, ಮತದಾರರಿಗೆ ಕಾಂಗ್ರೆಸ್‌ ಆಮಿಷವೊಡ್ಡುತ್ತಿದೆ. ಮತದಾರರ ಮೇಲೆ ಪ್ರಭಾವ ಬೀರಲು ಪ್ಯಾಕೆಟ್‌ಗಳನ್ನು ವಿತರಿಸಲಾಗಿದೆ ಎಂದು ಕಿಡಿ ಕಾರಿವೆ. ವಶ ಪಡಿಸಿಕೊಂಡಿರುವ ಆಹಾರ ಪೊಟ್ಟಣಗಳಲ್ಲಿ ಸಕ್ಕರೆ, ಅಕ್ಕಿ, ಟೀ ಪುಡಿ ಮುಂತಾದ ಪದಾರ್ಥಗಳು ಕಂಡು ಬಂದಿದೆ. ಇನ್ನು ಆಹಾರ ಕಿಟ್‌ಗಳಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಚಿತ್ರಗಳೂ ಇವೆ ಎಂದು ವರದಿಗಳು ಹೇಳಿವೆ.

ಇದನ್ನೂ ಓದಿ: Sandur By Election: ಬಿಜೆಪಿಯ ಬೆದರಿಕೆ, ಷಡ್ಯಂತ್ರ, ಕುತಂತ್ರಗಳಿಗೆ ಈ ಉಪ ಚುನಾವಣೆಯಲ್ಲಿ ಪಾಠ ಕಲಿಸಿ; ಸಿದ್ದರಾಮಯ್ಯ ಕರೆ

ಕೇರಳದಲ್ಲಿ ನಡೆಯುತ್ತಿರುವ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಪ್ರಿಯಾಂಕಾ ಗಾಂಧಿ ಮೊದಲ ಬಾರಿ ಕಣಕ್ಕಿಳಿದಿದ್ದಾರೆ. ನವೆಂಬರ್ 13ರಂದು ಇಲ್ಲಿ ಮತದಾನ ನಡೆಯಲಿದೆ. ನ. 23ರಂದು ಫಲಿತಾಂಶ ಪ್ರಕಟವಾಗಲಿದೆ.