Thursday, 24th October 2024

Wayanad Bypolls: ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ಎದುರಿಸಲು ಸಜ್ಜಾದ ಬಿಜೆಪಿಯ ನವ್ಯಾ ಹರಿದಾಸ್ ಹಿನ್ನೆಲೆ ಕುತೂಹಲಕರ!

Wayanad Bypolls

ಕೇರಳದ ವಯನಾಡಿನ ಉಪ ಚುನಾವಣೆಯಲ್ಲಿ (Wayanad Bypolls) ಕಾಂಗ್ರೆಸ್‌ನ (congress) ಪ್ರಿಯಾಂಕಾ ಗಾಂಧಿ (Priyanka Gandhi ) ಅವರನ್ನು ಎದುರಿಸಲು ಬಿಜೆಪಿಯು (BJP) ನವ್ಯಾ ಹರಿದಾಸ್ (Navya Haridas) ಅವರನ್ನು ಆಯ್ಕೆ ಮಾಡಿದೆ. ಸಾಫ್ಟ್‌ವೇರ್ ಕ್ಷೇತ್ರದಲ್ಲಿ ದುಡಿಯುತ್ತಿದ್ದ ನವ್ಯಾ ಅವರು ವೃತ್ತಿಯನ್ನು ತೊರೆದು ತಳಮಟ್ಟದ ಚುನಾವಣೆಯ ಮೂಲಕ 2015ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ್ದರು.

ಕೇರಳದ ಕೋಯಿಕ್ಕೋಡ್ ಪಟ್ಟಣದವರಾದ ನವ್ಯಾ ಅವರು 2015ರಲ್ಲಿ ರಜೆ ಪಡೆದು ವಿದೇಶದಿಂದ ಬಂದಿದ್ದರು. ಆಗಲೇ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಯಿತು. ನವ್ಯಾ ಅವರಿದ್ದ ವಾರ್ಡ್ ಮಹಿಳೆಯರಿಗೆ ಮೀಸಲಾಗಿತ್ತು. ಬಿಜೆಪಿ ಬೆಂಬಲಿಗ ಕುಟುಂಬದಿಂದ ಬಂದಿದ್ದ ನವ್ಯಾ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಇದೆಯೇ ಎಂದು ಪಕ್ಷದಿಂದ ಕೇಳಲಾಯಿತು. ಇಲ್ಲಿ ಯುಡಿಎಫ್, ಎಲ್‌ಡಿಎಫ್‌ ಬಳಿಕ ಬಿಜೆಪಿ ಮೂರನೇ ಸ್ಥಾನದಲ್ಲಿತ್ತು. ಸುಮ್ಮನೆ ನಿಲ್ಲಿ, ಗೆಲ್ಲುವ ಸಾಧ್ಯತೆ ಕಡಿಮೆ ಇದೆ. ಸೋತರೆ ವಿದೇಶಕ್ಕೆ ಮರಳಬಹುದಲ್ಲ ಎಂದು ಪಕ್ಷದ ನಾಯಕರು ಸಲಹೆ ನೀಡಿದರು.

Wayanad Bypolls

ಹೀಗಾಗಿ ನವ್ಯಾ ಅವರು ಚುನಾವಣೆಗೆ ಸಜ್ಜಾದರು. ಆದರೆ ಮತ ಎಣಿಕೆ ವೇಳೆ ಎಲ್ಲರಿಗೂ ಅಚ್ಚರಿಯಾಗಿತ್ತು. ನವ್ಯಾ ಅವರು 120 ಮತಗಳ ಅಂತರದಿಂದ ಕೋಯಿಕ್ಕೋಡ್ ಮುನ್ಸಿಪಲ್ ಕಾರ್ಪೊರೇಷನ್‌ನ ಕರಪ್ಪರಂಬ್ ವಾರ್ಡ್‌ನಲ್ಲಿ ಗೆಲುವು ಸಾಧಿಸಿದರು. ಬಳಿಕ ನಿಧಾನವಾಗಿ ರಾಜ್ಯ ರಾಜಕೀಯದ ಮೆಟ್ಟಿಲುಗಳನ್ನು ನಿಧಾನವಾಗಿ ಏರಲು ಪ್ರಾರಂಭಿಸಿದ ನಾವ್ಯ ಅವರು ಈಗ ಬಿಜೆಪಿಯಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. 2020ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾರ್ಪೊರೇಷನ್ ವಾರ್ಡ್‌ನಲ್ಲಿ 500ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ದಾಖಲಿಸಿದ ಅವರು ಅಲ್ಲಿ ತಮ್ಮ ಪಕ್ಷದ ಸ್ಥಾನವನ್ನು ಭದ್ರಪಡಿಸಿದ್ದಾರೆ. 75 ಸದಸ್ಯ ಬಲದ ಪಾಲಿಕೆಯ ಏಳು ಬಿಜೆಪಿ ಕೌನ್ಸಿಲರ್‌ಗಳಲ್ಲಿ ನವ್ಯಾ ಅವರು ಒಬ್ಬರಾಗಿದ್ದಾರೆ.

Wayanad Bypolls

2021ರ ವಿಧಾನಸಭಾ ಚುನಾವಣೆಯಲ್ಲಿ ಕೋಯಿಕ್ಕೋಡ್ ದಕ್ಷಿಣ ಭಾಗದಲ್ಲಿ ನವ್ಯಾ ಅವರನ್ನು ಮತ್ತೆ ಪಕ್ಷವು ಸವಾಲಿನ ಸ್ಪರ್ಧೆಗೆ ಆಯ್ಕೆ ಮಾಡಿತು. ಇಲ್ಲಿ ಬಿಜೆಪಿ ಮೂರನೇ ಸ್ಥಾನ ಪಡೆದರೂ ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಸುಮಾರು ಶೇ. 5ರಷ್ಟು ಹೆಚ್ಚಿನ ಮತ ಗಳಿಸಿದರು. ಮೂರು ವರ್ಷಗಳ ಬಳಿಕ ಮತ್ತೆ ಈಗ ಅವರನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಸಿಪಿಐ ರಾಷ್ಟ್ರೀಯ ಕೌನ್ಸಿಲ್ ಸದಸ್ಯ ಸತ್ಯನ್ ಮೊಕೇರಿ ಅವರ ವಿರುದ್ಧ ಬಿಜೆಪಿ ಕಣಕ್ಕಿಳಿಸಿದೆ. ಇಲ್ಲಿ 2009ರಿಂದ ಕಾಂಗ್ರೆಸ್ ವಿಜಯಿಯಾಗಿದೆ.

Rahul Gandhi: ಲಾರೆನ್ಸ್‌ ಬಿಷ್ಣೋಯ್‌ ಮುಂದಿನ ಟಾರ್ಗೆಟ್‌ ರಾಹುಲ್‌ ಗಾಂಧಿ!

ಈ ಕುರಿತು ಪ್ರತಿಕ್ರಿಯಿಸಿರುವ ನವ್ಯಾ, ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ವಿರುದ್ಧ ಸ್ಪರ್ಧಿಸಲು ನನ್ನನ್ನು ಆಯ್ಕೆ ಮಾಡಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ಇಂತಹ ಒಂದು ಅವಕಾಶ ಕೊಟ್ಟಿರುವ ಪಕ್ಷದ ರಾಜ್ಯ ಮತ್ತು ಕೇಂದ್ರ ನಾಯಕರಿಗೆ ಆಭಾರಿಯಾಗಿದ್ದೇನೆ. ಈ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ವಿರುದ್ಧ ಗೆಲ್ಲುವ ವಿಶ್ವಾಸವಿದೆ, ಯಾವುದೇ ಆತಂಕವಿಲ್ಲ. ಕ್ಷೇತ್ರದ ನಿರ್ಣಾಯಕ ಸಮಸ್ಯೆಗಳನ್ನು ಜನರ ಮುಂದೆ ಪ್ರಸ್ತಾಪಿಸುತ್ತೇನೆ. ಮುಂದೆ ಸ್ಥಳೀಯ ಜನರೇ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು.