Friday, 22nd November 2024

Wayanad By Election: ವಯನಾಡು ಭೂಕುಸಿತ ಸಂತ್ರಸ್ತರಿಗೆ ಹುಳ-ಹುಪ್ಪಟೆಗಳಿದ್ದ ಫುಡ್ ಕಿಟ್ ಪೂರೈಕೆ; ತನಿಖೆಗೆ ಸಿಎಂ ಆದೇಶ

ತಿರುವನಂತಪುರಂ: ಇತಿಹಾಸದಲ್ಲೇ ಭೀಕರವೆನ್ನಬಹುದಾದ ಭೂಕುಸಿತ ದುರಂತ (Wayanad Landslide) ಸಂಭವಿಸಿದ ವಯನಾಡಿನಲ್ಲಿ (Wayanad) ಇದೀಗ ಭೂಕುಸಿತ ಸಂತ್ರಸ್ತರಿಗೆ ವಿತರಿಸಲಾದ ಆಹಾರ ಕಿಟ್‌ಗಳ ಗುಣಮಟ್ಟದ ಬಗ್ಗೆ ಅಪಸ್ವರ ಕೇಳಿಬಂದಿದ್ದು, ಈ ಕುರಿತಾಗಿ ಸಮಗ್ರ ತನಿಖೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಆಗ್ರಹಿಸಿದ್ದಾರೆ.

ಜು. 30ರಂದು ವಯನಾಡಿನ ಚೂರಲ್ ಮಲ (Chooralmala) ಮತ್ತು ಮುಂಡಕ್ಕೈ (Mundakkai)ಯಲ್ಲಿ ಸಂಭವಿಸಿದ ಭೀಕರ ಭೂಕುಸಿತದ ಸಂತ್ರಸ್ತರಿಗೆ ವಿತರಿಸಲಾದ ಅಕ್ಕಿ ಹಾಗೂ ಇತರ ಆಹಾರ ಪದಾರ್ಥಗಳು ಎಕ್ಸ್ ಪೈರಿ ಡೇಟ್ ಮೀರಿವೆ ಮತ್ತು ಅವುಗಳಲ್ಲಿ ಹುಳಗಳಿದ್ದವು ಎಂಬ ಆರೋಪ ಕೇಳಿ ಬಂದಿತ್ತು. ಇದು ಮೆಪ್ಪಾಡಿ ಪಂಚಾಯತ್ ವ್ಯಾಪ್ತಿಗೆ ಒಳಪಡುತ್ತದೆ.ಈ ಕುರಿತಾಗಿ ಮಾಧ್ಯಮಗಳಲ್ಲಿ ವಿಸ್ತೃತ ವರದಿಗಳು ಪ್ರಕಟಗೊಂಡ ಬೆನ್ನಲ್ಲೇ ಮುಖ್ಯಂತ್ರಿ ಈ ಕುರಿತಾದ ತನಿಖೆಗೆ ಆದೇಶಿಸಿದ್ದಾರೆ. ಪಂಚಾಯತ್‌ನಿಂದಲೇ ಕಲುಷಿತ ವಸ್ತುಗಳು ಪೂರೈಕೆಗೊಂಡಿದೆಯೋ ಅಥವಾ ಬಳಿಕ ವಸ್ತುಗಳನ್ನು ಅದಲು-ಬದಲು ಮಾಡಲಾಗಿದೆಯೋ ಎಂಬ ಬಗ್ಗೆಯೂ ತನಿಖೆ ನಡೆಯಲಿದೆ.

“ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಮಗ್ರ ತನಿಖೆಗೆ ಆದೇಶಿಸಿದ್ದು, ಶೀಘ್ರವೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು” ಎಂದು ಪ್ರಕಟನೆ ತಿಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ (ನ. 7) ಸಿಪಿಐ (ಎಂ)ನ (CPI (M) ಯೂತ್ ವಿಂಗ್ ಆಗಿರುವ ಡಿವೈಎಫ್‌ಐ (DYFI) ಕಾರ್ಯಕರ್ತರು ಮೆಪ್ಪಾಡಿ ಪಂಚಾಯತ್ (Meppadi panchayat) ಕಚೇರಿ ಮುಂದೆ ಧರಣಿ ನಡೆಸಿದರು. ಅಲ್ಲದೆ ಉದ್ರಿಕ್ತ ಪ್ರತಿಭಟನಾಕಾರರು ಪಂಚಾಯತ್ ಕಚೇರಿಗೆ ಹಾನಿ ಮಾಡಲು ಯತ್ನಿಸಿದರು. ಆದರೆ ಸಕಾಲದಲ್ಲಿ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು.

ಇದೇ ವೇಳೆ ರಾಜ್ಯ ಆಹಾರ ನಿಗಮವು ವಯನಾಡು ಜಿಲ್ಲಾಡಳಿತದಿಂದ ವರದಿಯನ್ನು ಕೇಳಿದ್ದು, ಯಾವುದೇ ರೀತಿಯ ಪರೀಕ್ಷೆಗಳನ್ನು ನಡೆಸದೆ ಹೇಗೆ ಆಹಾರ ಪದಾರ್ಥಗಳನ್ನು ಪೂರೈಸಲಾಯಿತು ಎಂಬ ಕುರಿತು ವಿವರಣೆ ಕೇಳಿದೆ. ಈ ಆಹಾರ ಪದಾರ್ಥಗಳನ್ನು ಸೆಪ್ಟಂಬರ್‌ನಲ್ಲಿ ಓಣಂ ಹಬ್ಬದ ಸಂದರ್ಭದಲ್ಲಿ ವಿತರಿಸುವ ಸಲುವಾಗಿ ಎನ್.ಜಿ.ಒ. ಒಂದು ಪೂರೈಸಿತ್ತು ಮತ್ತು ಇವುಗಳನ್ನು ಹಾಗೆಯೇ ಸಂಗ್ರಹಿಸಿಡಲಾಗಿತ್ತು.

ಇದನ್ನೂ ಓದಿ: Wayanad By Election: ವಯನಾಡಿನಲ್ಲಿ ಆಹಾರ ಕಿಟ್‌ ವಿತರಣೆ; ಪ್ರಿಯಾಂಕಾ, ರಾಹುಲ್‌ ಗಾಂಧಿ ವಿರುದ್ಧ ಪ್ರಕರಣ ದಾಖಲು

ವಯನಾಡು ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಈ ಪ್ರಕರಣವು ರಾಜಕೀಯ ಬಣ್ಣವನ್ನು ಪಡೆದುಕೊಳ್ಳುತ್ತಿದೆ. ಮೆಪ್ಪಾಡಿ ಪಂಚಾಯತ್‌ನಲ್ಲಿ ಕಾಂಗ್ರೆಸ್ (Congress) ನೇತೃತ್ವದ ಯುಡಿಎಫ್ (UDF) ಬೆಂಬಲಿತ ಅಭ್ಯರ್ಥಿಗಳು ಅಧಿಕಾರದಲ್ಲಿದ್ದಾರೆ.  

ರಾಹುಲ್ ಗಾಂಧಿ (Rahul Gandhi) ಅವರ ರಾಜೀನಾಮೆಯಿಂದ ತೆರವಾಗಿರುವ ಈ ಕ್ಷೇತ್ರದಲ್ಲಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ (Priyanka Gandhi Vadra) ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದು, ಪ್ರಪ್ರಥಮ ಬಾರಿಗೆ ಸಂಸತ್ತಿಗೆ ಸ್ಪರ್ಧಿಸುತ್ತಿದ್ದಾರೆ. ಸಿಪಿಐನಿಂದ ಸತ್ಯಂ ಮೊಕೇರಿ ಮತ್ತು ಬಿಜೆಪಿಯಿಂದ (BJP) ನವ್ಯಾ ಹರಿದಾಸ್ ಕಣಕ್ಕಿಳಿದಿದ್ದಾರೆ.

ರಾಜಕೀಯ ವಿವಾದವನ್ನು ಹುಟ್ಟುಹಾಕುವುದಕ್ಕಾಗಿಯೇ ಸರ್ಕಾರವೇ ಇಲ್ಲಿನ ಪಂಚಾಯತ್‌ಗೆ ಕಲುಷಿತ ಆಹಾರವನ್ನು ಪೂರೈಸಿದೆ ಎಂದು ಕಾಂಗ್ರೆಸ್ ಶಾಸಕ ಟಿ.ಸಿದ್ದಿಕ್ ಆರೋಪಿಸಿದ್ದಾರೆ. “ಸರ್ಕಾರ ಹಾಗೂ ಆಳುವ ಪಕ್ಷದ ಈ ದ್ವಂದ್ವ ನೀತಿಯನ್ನು ನಾವು ಜನರ ಮುಂದೆ ಬಯಲು ಮಾಡುತ್ತೇವೆ” ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಇನ್ನು, ಪಂಚಾಯತ್ ಅಧ್ಯಕ್ಷ ಕೆ.ಬಾಬು ಹೇಳುವಂತೆ, ಹುಳಗಳಿದ್ದ ಅಕ್ಕಿ ನ. 1ರಂದು ಪೂರೈಕೆಯಾಗಿದ್ದು, ಜಿಲ್ಲಾಧಿಕಾರಿ ಇವನ್ನು ಭೂಕುಸಿತ ಸಂತ್ರಸ್ತರಿಗೆ ವಿತರಿಸುವಂತೆ ಸೂಚಿಸಿದ್ದರು. “ಈ ಕಲುಷಿತ ಆಹಾರ ಪದಾರ್ಥಗಳ ಸರಬರಾಜು ಮತ್ತು ಪೂರೈಕೆಯಲ್ಲಿ ನಮ್ಮದು ಯಾವುದೇ ರೀತಿಯ ಕೈವಾಡವಿಲ್ಲ” ಎಂದು ಅವರು ಹೇಳಿದ್ದಾರೆ.ಇನ್ನು ಕೈನಟ್ಟಿಯಲ್ಲಿ ಆಹಾರ ಮತ್ತು ಇತರ ವಸ್ತುಗಳ ಪೂರೈಕೆ ಕೇಂದ್ರವನ್ನು ತೆರೆಯುವಂತೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ನ. 8ರಂದು ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಇನ್ನೊಂದು ಪ್ರತ್ಯೇಕ ಬೆಳವಣಿಗೆಯಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ ಮೊದಲಾದ ಕಾಂಗ್ರೆಸ್ ನಾಯಕರ ಭಾವಚಿತ್ರ ಸಹಿತವಿದ್ದ ಆಹಾರ ಕಿಟ್‌ಗಳನ್ನು ತೋಲ್ ಪೆಟ್ಟಿಯ ಕಾಂಗ್ರಸ್ ನಾಯಕರೊಬ್ಬರ ಮನೆಯಿಂದ ಚುನಾವಣಾ ಆಯೋಗ ಮತ್ತು ರಾಜ್ಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನ. 13ರಂದು ನಡೆಯಲಿರುವ ಲೋಕಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ಅಲ್ಲಿನ ಮತದಾರರಿಗೆ ಹಂಚಲು ಈ ಕಿಟ್ ಗಳನ್ನು ಪೂರೈಸಲು ಉದ್ದೇಶಿಸಲಾಗಿತ್ತು ಎಂದು ಸಿಪಿಐ ಮತ್ತು ಬಿಜೆಪಿ ಆರೋಪಿಸಿದೆ. ಆದರೆ ಈ ಕಿಟ್ ಗಳನ್ನು ಭೂಕುಸಿತ ಸಂತ್ರಸ್ತರಿಗೆ ಹಂಚಲೆಂದು ಮೊದಲೇ ತಂದಿಡಲಾಗಿತ್ತು ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿದೆ.