ತಿರುವನಂತಪುರ: ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಸರಣಿ ಭೂಕುಸಿತ ದುರಂತದಲ್ಲಿ 308 ಮಂದಿ ಮೃತಪಟ್ಟಿದ್ದಾರೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಶುಕ್ರವಾರ ಖಚಿತಪಡಿಸಿದ್ದಾರೆ.
ಈವರೆಗೆ 195 ಮೃತದೇಹಗಳು ಹಾಗೂ 113 ದೇಹದ ಭಾಗಗಳು ಪತ್ತೆಯಾಗಿವೆ ಎಂದು ಸಚಿವ ಜಾರ್ಜ್ ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿರುವ ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್ ಮಾತನಾಡಿ, ಸುಮಾರು 300 ಮಂದಿ ಇನ್ನೂ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಇದೆ ಎಂದು ಹೇಳಿದ್ದಾರೆ.
190 ಅಡಿ ಉದ್ದದ ಬೈಲಿ ಸೇತುವೆಯನ್ನು ನಿರ್ಮಿಸಿದ್ದು, ಶುಕ್ರವಾರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯು ವೇಗ ಪಡೆದುಕೊಂಡಿದೆ. ಇದರಿಂದಾಗಿ ಭೂಕುಸಿತದಿಂದ ಹೆಚ್ಚು ಬಾಧಿತ ಪ್ರದೇಶಗಳಾದ ಚೂರಲ್ಮಲ ಮತ್ತು ಮುಂಡಕ್ಕೈ ಪ್ರದೇಶಗಳಿಗೆ ಅಗೆಯುವ ಯಂತ್ರಗಳು ಮತ್ತು ಆಂಬುಲೆನ್ಸ್ ಸೇರಿದಂತೆ ಭಾರಿ ಯಂತ್ರಗಳ ಚಲನೆಗೆ ಅವಕಾಶ ಸಿಕ್ಕಿದೆ ಎಂದು ಹೇಳಿದ್ದಾರೆ.
ಒಟ್ಟು ಆರು ವಲಯಗಳಲ್ಲಿ 40 ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ.