Friday, 22nd November 2024

ಬಟ್ಟೆ ಧರಿಸುವುದು ಹಕ್ಕಾದರೆ, ಧರಿಸದೇ ಇರುವುದು ಹಕ್ಕಿನಡಿಯೇ ಬರುತ್ತದೆ

ನವದೆಹಲಿ: ಸುಪ್ರೀಂ ಕೋರ್ಟ್‌ನ ನ್ಯಾಯಪೀಠದಲ್ಲಿ ಹಿಜಾಬ್‌ ಕುರಿತ ವಿಚಾರಣೆಯಲ್ಲಿ ಹಿಜಾಬ್​ ಬಟ್ಟೆ ಧರಿಸುವುದು ಹಕ್ಕು ಎಂದು ಅರ್ಜಿದಾರರ ಪರ ವಕೀಲ ದೇವದತ್​ ಕಾಮತ್​ ಹೇಳಿದರೆ, ಬಟ್ಟೆ ಧರಿಸದೇ ಇರುವುದೂ ಕೂಡ ಹಕ್ಕಿನ ವ್ಯಾಪ್ತಿಗೆ ಬರುತ್ತದೆ ಎಂದು ನ್ಯಾಯಪೀಠ ಹೇಳಿತು.

ಶಾಲಾ ಕಾಲೇಜುಗಳ ತರಗತಿಗಳಲ್ಲಿ ಹಿಜಾಬ್​ ಧರಿಸಲು ನಿಷೇಧಿಸಿದ ಕುರಿತು ಸಲ್ಲಿಸಲಾದ ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಎರಡನೇ ದಿನದ ವಿಚಾರಣೆ ನಡೆಸುತ್ತಿದೆ.

ಫಿರ್ಯಾದುದಾರರ ಪರ ವಾದ ಮಂಡಿಸುತ್ತಿರುವ ದೇವದತ್​ ಕಾಮತ್​ ಒಂದು ಹಂತ ದಲ್ಲಿ ಹಿಜಾಬ್​ ಧರಿಸುವುದು ಮಹಿಳೆಯರ ಹಕ್ಕಾಗಿದೆ ಎಂದರು. ಈ ವೇಳೆ ನ್ಯಾ.ಹೇಮಂತ್​ ಗುಪ್ತಾ ಅವರು ಬಟ್ಟೆ ಧರಿಸುವುದು ಹಕ್ಕಾದರೆ, ಧರಿಸದೇ ಇರುವುದು ಹಕ್ಕಿನಡಿಯೇ ಬರುತ್ತದೆ ಎಂದರು. ಬಟ್ಟೆ ಹಕ್ಕಿನ ವ್ಯಾಪ್ತಿಯಲ್ಲಿ ವಾದ ಮಂಡಿಸಿದರೆ, ತಾರ್ಕಿಕ ಅಂತ್ಯ ಕಾಣದು ಎಂದು ಪೀಠ ಇದೇ ವೇಳೆ ಹೇಳಿತು.

ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಗಾಗಿ ಒತ್ತಾಯಿಸುತ್ತಿದ್ದಾರೆ. ಉಳಿದ ಎಲ್ಲ ಸಮುದಾಯದ ವಿದ್ಯಾರ್ಥಿಗಳು ಬಟ್ಟೆಯ ಬಗ್ಗೆ ಯಾವುದೇ ಚಕಾರ ಎತ್ತುತ್ತಿಲ್ಲ. ಶಾಲೆಯ ಸಮವಸ್ತ್ರವನ್ನು ಅವರು ಪಾಲಿಸುತ್ತಿದ್ದಾರಲ್ಲವೇ ಎಂದು ಪೀಠ ಪ್ರಶ್ನಿಸಿತು.

ಅನೇಕ ವಿದ್ಯಾರ್ಥಿಗಳು ಧಾರ್ಮಿಕ ಸಂಕೇತವಾದ ರುದ್ರಾಕ್ಷಿ, ಶಿಲುಬೆ ಧರಿಸಿರುತ್ತಾರೆ ಎಂದು ವಕೀಲ ಕಾಮತ್ ಹೇಳಿದಾಗ, ರುದ್ರಾಕ್ಷಿ, ಶಿಲುಬೆಯನ್ನು ಯಾರೂ ಕೂಡ ಅಂಗಿಯ ಹಾಕಿಕೊಂಡು ಪ್ರದರ್ಶಿಸುವುದಿಲ್ಲವಲ್ಲ ಎಂದು ನ್ಯಾಯಾಧೀಶರು ಹೇಳಿದರು.

ಇದೇ ವೇಳೆ , ದೇವದತ್‌, ಪ್ರಕರಣದಲ್ಲಿ ಮೂಗುತಿ ಹಾಗೂ ಹಣೆಗೆ ಧರಿಸುವ ಬಿಂದಿ ವಿಚಾರವನ್ನೂ ಪ್ರಸ್ತಾಪಿಸಿ ಮಾತನಾಡಿದರು.

ಈ ವೇಳೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹೇಮಂತ್‌ ಗುಪ್ತಾ, ಮೂಗುತಿ ಎಂದಿಗೂ ಧಾರ್ಮಿಕವಲ್ಲ. ಹಿಂದು ಹುಡುಗಿಯರು ಧರಿಸುವ ಮಂಗಳಸೂತ್ರ ಧಾರ್ಮಿಕ ಎಂದು ಹೇಳಿದ್ದಾರೆ.

ದೇವದತ್‌ ಕಾಮತ್‌ ಮಾತನಾಡಿ, ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಕೋರ್ಟ್‌ ನೀಡಿರುವ ಒಂದು ತೀರ್ಪನ್ನು ಪ್ರಸ್ತಾಪ ಮಾಡಿದರು. ತನ್ನ ಸಾಂಸ್ಕೃತಿಕ ನಂಬಿಕೆಯ ಭಾಗವಾಗಿ ದಕ್ಷಿಣ ಆಫ್ರಿಕಾದ ಕೋರ್ಟ್‌ ಹಿಂದೂ ಹುಡುಗಿಗೆ ಶಾಲೆಗೆ ಮೂಗುತಿಯನ್ನು ಧರಿಸಿ ಬರಲು ಇತ್ತೀಚೆಗೆ ಅನುಮತಿ ನೀಡಿ ತೀರ್ಪು ಪ್ರಕಟಿಸಿದೆ. ಭಾರತದಲ್ಲಿ ತನ್ನ ನಂಬಿಕೆಯನ್ನು ಶಾಲೆಗಳಲ್ಲಿ ತೋರಿಸಲು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನೆ ಮಾಡಿದರು.

ಈ ವಾದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ನ್ಯಾ.ಹೇಮಂತ್‌ ಗುಪ್ತಾ, ಮಂಗಳಸೂತ್ರ ಎನ್ನುವುದು ಧಾರ್ಮಿಕ ನಂಬಿಕೆ ಎಂದು ಹೇಳಿದರು. ಜಗತ್ತಿನಲ್ಲಿ ಸಾಮಾನ್ಯವಾಗಿ ಎಲ್ಲಾ ಮಹಿಳೆಯರು ಮೂಗುತಿಯನ್ನು ಧರಿಸುತ್ತಾರೆ. ಭಾರತದಲ್ಲಿ ಮಾತ್ರ ಈ ಸಂಪ್ರದಾಯವಿಲ್ಲ. ಇದು ಎಂದಿಗೂ ಧಾರ್ಮಿಕ ಆಚರಣೆಯಲ್ಲ ಎಂದು ಹೇಳಿದರು.