Friday, 13th December 2024

Web Series: OTTಯಲ್ಲಿ ಭಾರೀ ವಿವಾದ ಸೃಷ್ಟಿಸಿದ ವೆಬ್‌ ಸಿರೀಸ್‌; Netflix ಬ್ಯಾನ್‌ಗೆ ಕರೆ

web series

ನವದೆಹಲಿ: ಅನುಭವ್ ಸಿನ್ಹಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ  ನೆಟ್‌ಫ್ಲಿಕ್ಸ್(Netflix) ವೆಬ್‌ ಸಿರೀಸ್‌(Web Series)  IC 814, ಅತ್ಯುತ್ತಮ ಕಥಾ ಹಂದರ, ನಟನೆ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಹಿರಿಯ ಬಾಲಿವುಡ್‌ ನಟ ನಾಸಿರುದ್ದೀನ್ ಷಾ, ಪಂಕಜ್ ಕಪೂರ್, ವಿಜಯ್ ವರ್ಮಾ, ಅರವಿಂದ್ ಸ್ವಾಮಿ, ಮತ್ತು ಇತರರನ್ನು ಒಳಗೊಂಡಂತೆ ಅನೇಕ ದಿಗ್ಗಜ ನಟರ ಅಭಿನಯ ಪ್ರೇಕ್ಷಕರನ್ನು ಆಕರ್ಷಿಸಿದೆ. ಪ್ರತಿಯೊಬ್ಬ ನಟರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇಷ್ಟಿದ್ದರೂ ಈ ವೆಬ್‌ ಸೀರೀಸ್‌  ದೇಶಾದ್ಯಂತ ಭಾರೀ ವಿವಾದವನ್ನು ಹುಟ್ಟುಹಾಕಿದೆ.

1999ರ ಕಂದಾಹಾರ್‌ ವಿಮಾನ ಅಪಹರಣ ಪ್ರಕರಣದ ಕಥಾವಸ್ತುವನ್ನಿಟ್ಟುಕೊಂಡು ಈ ವೆಬ್‌ಸಿರೀಸ್‌ ಅನ್ನು ರಚಿಸಲಾಗಿದ್ದು, ಇದನ್ನು ಬ್ಯಾನ್‌ ಮಾಡಬೇಕೆಂದು ನೆಟ್‌ಫ್ಲಿಕ್ಸ್‌ ಪ್ರೇಕ್ಷಕರು ಆಗ್ರಹಿಸಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ #BanNetflix, #BanBollywood ಎಂಬ ಹ್ಯಾಶ್‌ಟ್ಯಾಗ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

 ಏನಿದು ವಿವಾದ?

ಮಸೂದ್‌ ಅಜಾರ್‌,  ಓಮರ್‌ ಶೇಖ್‌ ಮತ್ತು ಮುಶ್ತಾಖ್‌ ಜಾರ್ಖರ್‌ ಸೇರಿದಂತೆ ಹಲವು ಉಗ್ರರ ಬಿಡುಗಡೆ ಕಾರಣವಾದ 1999ರ ಕಂದಾಹಾರ್‌ ವಿಮಾನ ಹೈಜಾಕ್‌ ಕೃತ್ಯದ ಕುರಿತು ಈ ವೆಬ್‌ ಸೀರೀಸ್‌ ಮೂಡಿಬಂದಿದ್ದು, ಇದರಲ್ಲಿ ಉಗ್ರರನ್ನು ಅಮಾಯಕರು ಎಂಬಂತೆ ಬಿಂಬಿಸಲಾಗಿದೆ ಎಂಬ ಕೂಗು ಕೇಳಿಬಂದಿದೆ. ಈ ಉಗ್ರರೇ ಕೊನೆಗೆ 2001ರಲ್ಲಿ ಸಂಸತ್‌ ಮೇಲಿನ ದಾಳಿ ಮತ್ತು 2008ರ ಮುಂಬೈ ದಾಳಿಯಲ್ಲಿ ಕೈವಾಡ ಹೊಂದಿದ್ದರು. ಇದಾಗಿಯೂ ಈ ಉಗ್ರರನ್ನು ಬಹಳ ಅಮಾಯಕರಂತೆ ಸೀರೀಸ್‌ನಲ್ಲಿ ಬಿಂಬಿಸಲಾಗಿದೆ ಎನ್ನಲಾಗಿದೆ. ಅದೂ ಅಲ್ಲದೇ ಮೂಲತಃ ಇಬ್ರಾಹಿಂ ಅಥರ್, ಶಾಹಿದ್ ಅಖ್ತರ್, ಸನ್ನಿ ಅಹ್ಮದ್, ಜಹೂರ್ ಮಿಸ್ತ್ರಿ ಮತ್ತು ಶಾಕಿರ್ ಎಂಬ ಹೆಸರಿನ ಅಪಹರಣಕಾರರನ್ನು ಸರಣಿಯಲ್ಲಿ ‘ಶಂಕರ್’ ಮತ್ತು ‘ಭೋಲಾ’ ಎಂದು ಚಿತ್ರಿಸಲಾಗಿದೆ ಎಂದು ಪ್ರೇಕ್ಷರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಯೋತ್ಪಾದನೆಗೆ ತೇಪೆ ಹಚ್ಚುವ ಕೆಲಸ ಮತ್ತು ಹಿಂದೂಗಳನ್ನು ಗುರಿಯಾಗಿಸಿ ಅಪಪ್ರಚಾರ ಮಾಡುವುದೇ ವೆಬ್‌ಸೀರೀಸ್‌ನ ಉದ್ದೇಶ ಎಂದು ಹಲವರು ವಿರೋಧ ವ್ಯಕ್ತಪಡಿಸಿದ್ದು, ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ಅವರನ್ನು ಟ್ಯಾಗ್‌ ಮಾಡಿ ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ. ಭಯೋತ್ಪಾದನೆಗೆ ಧರ್ಮವಿಲ್ಲ ಎಂದಾದ ಮೇಲೆ ಉಗ್ರರ ಹೆಸರನ್ನು ಬದಲಿಸಬೇಕಾದ ಅವಶ್ಯಕತೆ ಏನಿತ್ತು ಎಂದು ಹಲವರು ಪ್ರಶ್ನಿಸಿದ್ದಾರೆ. ಅದೂ ಅಲ್ಲದೇ ಭಾರತ ಸರ್ಕಾರ ವೈಫಲ್ಯವನ್ನು ಎತ್ತಿ ತೋರಿಸಿ ಅಪಮಾನ ಮಾಡುವ ಪ್ರಯತ್ನ ಎನ್ನಲಾಗಿದೆ. ಹಲವರು ಈ ವೆಬ್‌ ಸೀರೀಸ್‌ ಅನ್ನು ತಕ್ಷಣ ಬ್ಯಾನ್‌ ಮಾಡುವಂತೆ ಮನವಿ ಮಾಡಿದ್ದಾರೆ.