Friday, 22nd November 2024

Web series: ʻಐಸಿ 814ʼ ವಿವಾದ- ಬಿಸಿ ಮುಟ್ಟಿಸಿದ ಕೇಂದ್ರ; ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತರಲ್ಲ ಎಂದ Netflix

Web series

ನವದೆಹಲಿ: ಅನುಭವ್ ಸಿನ್ಹಾ (Anubhav Sinha) ನಿರ್ದೇಶನದಲ್ಲಿ ಮೂಡಿ ಬಂದ  ನೆಟ್‌ಫ್ಲಿಕ್ಸ್ (Netflix) ವೆಬ್‌ ಸಿರೀಸ್‌ (Web Series) ʻಐಸಿ 814- ದಿ ಕಂದಾಹಾರ್‌ ಹೈಜಾಕ್‌ʼ (IC 814 – The Kandahar Hijack) ವಿವಾದಕ್ಕೆ ಸಂಬಂಧಿಸಿದಂತೆ ಇಂದು ಕೇಂದ್ರ ಸರ್ಕಾರ ಮತ್ತು ನೆಟ್‌ಫ್ಲಿಕ್ಸ್‌ ನಡುವೆ ಸಭೆ ನಡೆದಿದೆ. ಇನ್ನು ಮುಂದೆ ರಾಷ್ಟ್ರೀಯ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡೇ ವೆಬ್‌ ಸಿರೀಸ್‌ಗಳನ್ನು ಪ್ರಸಾರ ಮಾಡುವುದಾಗಿ ನೆಟ್‌ಫ್ಲಿಕ್ಸ್‌ ಸರ್ಕಾರಕ್ಕೆ ಭರವಸೆ ನೀಡಿದೆ.

1999ರ ವಿಮಾನ ಅಪಹರಣ ಪ್ರಕರಣದ ಕಥಾವಸ್ತುವನ್ನು ಒಳಗೊಂಡ ಈ ವೆಬ್‌ ಸಿರೀಸ್‌ನಲ್ಲಿ ಆಕ್ಷೇಪಾರ್ಹ ವಿಚಾರಗಳನ್ನು ತೋರಿಸಿದ್ದಾರೆ. ಇದು ದೇಶದ ಹಿತಾಸಕ್ತಿಗೆ ಧಕ್ಕೆಯನ್ನುಂಡು ಮಾಡಿದೆ. ಹೀಗಾಗಿ ಅದನ್ನು ನಿಷೇಧಿಸಬೇಕು ಎನ್ನುವ ಕೂಗು ಬಲವಾಗಿ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಮಧ್ಯಪ್ರವೇಶಿಸಿದ ಕೇಂದ್ರ ಸರ್ಕಾರ ಕೇಂದ್ರ ನೆಟ್‌ಫ್ಲಿಕ್ಸ್‌ಗೆ ನೋಟಿಸ್‌ ಕಳುಹಿಸಿತ್ತು. ಹೀಗಾಗಿ ಇಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಜೊತೆ ನೆಟ್‌ಫ್ಲಿಕ್ಸ್‌ ಮಾತುಕತೆ ನಡೆಸಿದೆ.

ಅನುಭವ್ ಸಿನ್ಹಾ ಮತ್ತು ತ್ರಿಶಾಂತ್ ಶ್ರೀವಾಸ್ತವ ರಚಿಸಿದ ಈ ವೆಬ್ ಸಿರೀಸ್‌ ವಿಮಾನದ ಕ್ಯಾಪ್ಟನ್ ಆಗಿದ್ದ ದೇವಿ ಶರಣ್ ಮತ್ತು ಪತ್ರಕರ್ತ ಶ್ರೀಂಜಯ್ ಚೌಧರಿ ಅವರ ‘ಫ್ಲೈಟ್ ಟು ಫಿಯರ್: ದಿ ಕ್ಯಾಪ್ಟನ್ಸ್ ಸ್ಟೋರಿ’ (Flight Into Fear: The Captain’s Story) ಪುಸ್ತಕದಿಂದ ಸ್ಫೂರ್ತಿ ಪಡೆದಿದೆ. ಇದರಲ್ಲಿ ನಾಸಿರುದ್ದೀನ್ ಶಾ, ವಿಜಯ್ ವರ್ಮಾ ಮತ್ತು ಪಂಕಜ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಏನಿದು ವಿವಾದ?

ಮಸೂದ್‌ ಅಜಾರ್‌,  ಓಮರ್‌ ಶೇಖ್‌ ಮತ್ತು ಮುಶ್ತಾಖ್‌ ಜಾರ್ಖರ್‌ ಸೇರಿದಂತೆ ಹಲವು ಉಗ್ರರ ಬಿಡುಗಡೆ ಕಾರಣವಾದ 1999ರ ಕಂದಾಹಾರ್‌ ವಿಮಾನ ಹೈಜಾಕ್‌ ಕೃತ್ಯದ ಕುರಿತು ಈ ವೆಬ್‌ ಸೀರೀಸ್‌ ಮೂಡಿಬಂದಿದ್ದು, ಇದರಲ್ಲಿ ಉಗ್ರರನ್ನು ಅಮಾಯಕರು ಎಂಬಂತೆ ಬಿಂಬಿಸಲಾಗಿದೆ ಎಂಬ ಕೂಗು ಕೇಳಿಬಂದಿದೆ. ಈ ಉಗ್ರರೇ ಕೊನೆಗೆ 2001ರಲ್ಲಿ ಸಂಸತ್‌ ಮೇಲಿನ ದಾಳಿ ಮತ್ತು 2008ರ ಮುಂಬೈ ದಾಳಿಯಲ್ಲಿ ಕೈವಾಡ ಹೊಂದಿದ್ದರು. ಇದಾಗಿಯೂ ಈ ಉಗ್ರರನ್ನು ಬಹಳ ಅಮಾಯಕರಂತೆ ಸೀರೀಸ್‌ನಲ್ಲಿ ಬಿಂಬಿಸಲಾಗಿದೆ ಎನ್ನಲಾಗಿದೆ. ಅದೂ ಅಲ್ಲದೇ ಮೂಲತಃ ಇಬ್ರಾಹಿಂ ಅಥರ್, ಶಾಹಿದ್ ಅಖ್ತರ್, ಸನ್ನಿ ಅಹ್ಮದ್, ಜಹೂರ್ ಮಿಸ್ತ್ರಿ ಮತ್ತು ಶಾಕಿರ್ ಎಂಬ ಹೆಸರಿನ ಅಪಹರಣಕಾರರನ್ನು ಸರಣಿಯಲ್ಲಿ ‘ಶಂಕರ್’ ಮತ್ತು ‘ಭೋಲಾ’ ಎಂದು ಚಿತ್ರಿಸಲಾಗಿದೆ ಎಂದು ಪ್ರೇಕ್ಷರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಯೋತ್ಪಾದನೆಗೆ ತೇಪೆ ಹಚ್ಚುವ ಕೆಲಸ ಮತ್ತು ಹಿಂದೂಗಳನ್ನು ಗುರಿಯಾಗಿಸಿ ಅಪಪ್ರಚಾರ ಮಾಡುವುದೇ ವೆಬ್‌ಸೀರೀಸ್‌ನ ಉದ್ದೇಶ ಎಂದು ಹಲವರು ವಿರೋಧ ವ್ಯಕ್ತಪಡಿಸಿದ್ದು, ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ಅವರನ್ನು ಟ್ಯಾಗ್‌ ಮಾಡಿ ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ. ಭಯೋತ್ಪಾದನೆಗೆ ಧರ್ಮವಿಲ್ಲ ಎಂದಾದ ಮೇಲೆ ಉಗ್ರರ ಹೆಸರನ್ನು ಬದಲಿಸಬೇಕಾದ ಅವಶ್ಯಕತೆ ಏನಿತ್ತು ಎಂದು ಹಲವರು ಪ್ರಶ್ನಿಸಿದ್ದಾರೆ. ಅದೂ ಅಲ್ಲದೇ ಭಾರತ ಸರ್ಕಾರ ವೈಫಲ್ಯವನ್ನು ಎತ್ತಿ ತೋರಿಸಿ ಅಪಮಾನ ಮಾಡುವ ಪ್ರಯತ್ನ ಎನ್ನಲಾಗಿದೆ. ಹಲವರು ಈ ವೆಬ್‌ ಸೀರೀಸ್‌ ಅನ್ನು ತಕ್ಷಣ ಬ್ಯಾನ್‌ ಮಾಡುವಂತೆ ಮನವಿ ಮಾಡಿದ್ದಾರೆ.