Monday, 16th September 2024

ಬಂಗಾಳ ಚುನಾವಣೆ: 291 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ’ದೀದಿ’

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷವು ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಗೆ 291 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.

ಪಕ್ಷದಿಂದ 291 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಪಕ್ಷದ ವರಿಷ್ಠೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿ ದ್ದಾರೆ. ಮಮತಾ ನಿವಾಸದಲ್ಲಿ ನಡೆದ ಚುನಾವಣಾ ಸಮಿತಿ ಸಭೆ ಬಳಿಕ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಉತ್ತರ ಬಂಗಾಳದ 3 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ನಾನು ನಂದಿಗ್ರಾಮ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿರುವ ಮಮತಾ, 50 ಮಹಿಳೆಯರು, 42 ಮುಸ್ಲಿಂ ಅಭ್ಯರ್ಥಿಗಳು ಸೇರಿ 291 ಅಭ್ಯರ್ಥಿಗಳ ಪಟ್ಟಿಯಲ್ಲಿ ಸೇರಿದ್ದಾರೆ ಎಂದು ಹೇಳಿದ್ದಾರೆ.

ಟಿಎಂಸಿ ಅಭ್ಯರ್ಥಿಗಳ ಪಟ್ಟಿಯಲ್ಲಿ ನಟ ನಟಿಯರು ಸ್ಥಾನ ಪಡೆದಿದ್ದಾರೆ. ನಟಿ ಸಾಯೋನಿ ಘೋಷ್, ಅಸನ್ಸೋಲ್ ದಕ್ಷಿಣ ಕ್ಷೇತ್ರದಿಂದ, ನಟಿ ಸಯಂತಿಕಾ ಬ್ಯಾನರ್ಜಿ ಬಂಕುರಾ, ನಟಿ ಕೌಶಾನಿ ಮುಖರ್ಜಿ ಕೃಷ್ಣನಗರ ಉತ್ತರದಿಂದ, ನಟ ಚಿರಂಜೀತ್ ಚಕ್ರವರ್ತಿ ಬಾರಸತ್‌ನಿಂದ, ಮನೋಜ್ ತಿವಾರಿ ಶಿಬ್‌ಪುರದಿಂದ ಸ್ಪರ್ಧಿಸಲಿದ್ದಾರೆ. ಮಾ.9ರಂದು ನಂದಿಗ್ರಾಮಕ್ಕೆ ತೆರಳುತ್ತಿದ್ದು, ಮಾ.10ರಂದು ಹಲ್ದಿಯಾದಲ್ಲಿ ನಾಮಪತ್ರ ಸಲ್ಲಿಸುವುದಾಗಿ ಮಮತಾ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾ.27, ಏಪ್ರಿಲ್ 1, ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಮತ್ತು ಏಪ್ರಿಲ್ 29 ರಂದು ಮತದಾನ ನಡೆಯಲಿದೆ.

14 ವರ್ಷಗಳಿಂದ ಟಿಎಂಸಿ ಭದ್ರಕೋಟೆಯಾಗಿರುವ ನಂದಿಗ್ರಾಮದಲ್ಲಿ ಈಗ ಬಿಜೆಪಿ ಸೇರಿರುವ ಸುವೇಂದು ಅಧಿಕಾರಿ ಸ್ಪರ್ಧೆ ಮಾಡುತ್ತಿದ್ದರು. ಮಮತಾ ಅವರು ಇಲ್ಲಿಂದ ಕಣಕ್ಕಿಳಿಯುವ ನಿರ್ಧಾರ ಪ್ರಕಟಿಸಿದ ಬಳಿಕ ಸುವೇಂದು  ಸ್ಪರ್ಧಿಸುವ ಉತ್ಸಾಹ ತೋರಿದ್ದರು.

Leave a Reply

Your email address will not be published. Required fields are marked *