Friday, 22nd November 2024

ಪಶ್ಚಿಮ ಬಂಗಾಳಕ್ಕೆ ಆಗಸ್ಟ್‌’ನಲ್ಲಿ ಗೃಹ ಸಚಿವ ಶಾ ಭೇಟಿ

ಕೋಲ್ಕತ್ತಾ: ಪಂಚಾಯತ್ ಚುನಾವಣೆಯ ಒಂದು ತಿಂಗಳ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಸ್ಟ್‌ನಲ್ಲಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.

ಈ ಚುನಾವಣೆಯಲ್ಲಿ ಬಿಜೆಪಿಯ ಮತಗಳ ಹಂಚಿಕೆಯಲ್ಲಿ 16% ರಷ್ಟು ತೀವ್ರ ಕುಸಿತ ಕಂಡಿದೆ.

ಶುಕ್ರವಾರ ದೆಹಲಿಯಲ್ಲಿಅಮಿತ್ ಶಾ ಅವರನ್ನು ಭೇಟಿ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್, ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರದಿಂದ ಒಂದೇ ಒಂದು ಸಾವು ಸಂಭವಿಸುವುದನ್ನು ಅಮಿತ್ ಶಾ ಬಯಸುವುದಿಲ್ಲ ಎಂದಿದ್ದಾರೆ.

ಜೂನ್ 8 ರಂದು ಚುನಾವಣಾ ದಿನಾಂಕವನ್ನು ಘೋಷಿಸಿದ ನಂತರ ಪಂಚಾಯತ್ ಚುನಾವಣೆ ಸಂಬಂಧಿತ ಹಿಂಸಾಚಾರದಲ್ಲಿ 39 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಾಣ ಕಳೆದುಕೊಂಡವರಲ್ಲಿ ಹೆಚ್ಚಿನವರು ಪಶ್ಚಿಮ ಬಂಗಾಳದ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್‌ (ಟಿಎಂಸಿ)ಗೆ ಸಂಬಂಧ ಹೊಂದಿದ್ದಾರೆ.

ಅಮಿತ್ ಜಿ ಆಗಸ್ಟ್‌ನಲ್ಲಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಅವರು ಬಂಗಾಳದ ಚಾಲ್ತಿಯಲ್ಲಿರುವ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಶಾಂತಿ ಮರಳಬೇಕು ಎಂದು ಬಯಸುತ್ತಾರೆ. ಇನ್ನು ಮುಂದೆ ಯಾವುದೇ ಪಕ್ಷದಿಂದಲೂ ಒಂದು ಸಾವು ಸಂಭವಿಸಬಾರದು ಎಂದು ಅಮಿತ್ ಶಾ ಬಯಸುತ್ತಾರೆ” ಎಂದು ತಿಳಿಸಿದ್ದಾರೆ.