Thursday, 12th December 2024

ಚುನಾವಣೆ ಹಿಂಸಾಚಾರ: ಟಿಎಂಸಿ ಕಾರ್ಯಕರ್ತನ ಹತ್ಯೆ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಹಿಂಸಾಚಾರ ಮುಂದುವರಿದಿದ್ದು, ಓರ್ವ ಟಿಎಂಸಿ ಕಾರ್ಯಕರ್ತನ ಕೊಲೆ ಮಾಡಲಾಗಿ, ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಗುಂಡಿನ ದಾಳಿ ನಡೆದಿದೆ.

ಟಿಎಂಸಿ ಕಾರ್ಯಕರ್ತ ಜಿಯಾರುಲ್‌ ಮೊಲ್ಲಾ (52) ಎಂಬವರೇ ಮೃತರು. 24 ದಕ್ಷಿಣ ಪರಗಣ ಜಿಲ್ಲೆಯ ಬಸಂತಿ ಪ್ರದೇಶದಲ್ಲಿ ಇವರನ್ನು ಕೊಲೆ ಮಾಡಲಾಗಿದೆ. ಭಾನುವಾರ ತಡರಾತ್ರಿ ಮನೆಗೆ ಹಿಂದಿರುಗುವ ವೇಳೆ ಗುಂಡು ಹಾರಿಸಿ ಕೊಲ್ಲಲಾಗಿದೆ.

ಮುರ್ಷಿದಾಬಾದ್‌ನ ಸಂಸೀರ್‌ಗಂಜ್‌ನಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತ ಆರೀಫ್‌ ಶೇಖ್‌ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾನೆ. ಅವರ ಪರಿಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಂಚಾಯತ್‌ ಚುನಾವಣೆಗೆ ಪ‍್ರಚಾರ ಮಾಡುತ್ತಿದ್ದ ಗುಂಪಿನೊಂದಿಗೆ ವಾಗ್ವಾದ ವೇಳೆ ಶೇಖ್‌ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜುಲೈ 8ಕ್ಕೆ ಪಂಚಾಯತ್ ಚುನಾವಣೆ ನಿಗದಿಯಾಗಿದ್ದು, ಸರಣಿ ಹಿಂಸಾಚಾರ ಪ್ರಕರಣಗಳು ನಡೆಯುತ್ತಿವೆ.