ನವದೆಹಲಿ: ಕೇಂದ್ರ ಕ್ರೀಡಾ ಸಚಿವಾಲಯವು ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಹೊಸದಾಗಿ ಚುನಾಯಿತ ಸಂಸ್ಥೆಯನ್ನು ಅಮಾನತುಗೊಳಿಸಿದೆ.
ರಾಷ್ಟ್ರೀಯ ಕುಸ್ತಿ ಫೆಡರೇಶನ್ ನ ಜಂಗಿ ಕುಸ್ತಿ ಮುಂದುವರಿದಿದೆ. ಇತ್ತೀಚೆಗಷ್ಟೇ ಚುನಾವಣೆ ನಡೆದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ಅವರು ಗೆಲುವು ಸಾಧಿಸಿದ್ದರು. ಇದರ ಬೆನ್ನಲ್ಲೇ ಬ್ರಿಜ್ ಭೂಷಣ್ ವಿರುದ್ಧ ಪ್ರತಿಭಟನೆ ಮಾಡಿದ್ದ ಕುಸ್ತಿಪಟುಗಳು ಅಸಮಾಧಾನ ಹೊರ ಹಾಕಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಸಂಜಯ್ ಸಿಂಗ್ ನೇತೃತ್ವದ ಹೊಸ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಸಂಸ್ಥೆಯನ್ನು ಕ್ರೀಡಾ ಸಚಿವಾಲಯವು ಅಮಾನತುಗೊಳಿಸಿದೆ.
ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳನ್ನು ಕುಸ್ತಿ ಫೆಡರೇಶನ್ ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಉಲ್ಲೇಖಿಸಿ ಸಚಿವಾಲಯವು ಡಿಸೆಂಬರ್ 24 ಭಾನುವಾರದಂದು ತನ್ನ ನಿರ್ಧಾರವನ್ನು ಪ್ರಕಟಿಸಿದೆ.
ಕ್ರೀಡಾ ಸಚಿವಾಲಯವು ಅಧಿಕೃತ ಪ್ರಕಟಣೆಯಲ್ಲಿ, ರಾಷ್ಟ್ರೀಯ ಸ್ಪರ್ಧೆಗಳ ಪ್ರಕಟಣೆಯು ತರಾತುರಿಯಲ್ಲಿತ್ತು ಮತ್ತು ಸರಿಯಾದ ಪ್ರಕ್ರಿಯೆಯನ್ನು ಅನು ಸರಿಸಿಲ್ಲ ಎಂದು ಹೇಳಿದೆ.
ಹೊಸದಾಗಿ ಆಯ್ಕೆಯಾದ ಸಂಸ್ಥೆಯ ಅಧ್ಯಕ್ಷ ಸಂಜಯ್ ಕುಮಾರ್ ಸಿಂಗ್ ಡಿ.21 ರಂದು ಜೂನಿಯರ್ ರಾಷ್ಟ್ರೀಯ ಸ್ಪರ್ಧೆಗಳು ಈ ವರ್ಷಾಂತ್ಯದ ಮೊದಲು ಪ್ರಾರಂಭವಾಗಲಿದೆ ಎಂದು ಘೋಷಿಸಿದರು. ಇದು ನಿಯಮಗಳಿಗೆ ವಿರುದ್ಧವಾಗಿದೆ ಮತ್ತು ಕುಸ್ತಿಪಟುಗಳು ತಯಾರಾಗಲು ಕನಿಷ್ಠ 15 ದಿನಗಳ ಸೂಚನೆ ಅಗತ್ಯವಿದೆ ಎಂದು ಸಚಿವಾಲಯ ವಿವರಿಸಿದೆ.