ರಾಜ್ಯದ ರೈತರಿಗೆ ಹೆಚ್ಚುವರಿ ಆದಾಯ ಸಿಗುವಂತೆ ಮಾಡುವ ಉದ್ದೇಶದಿಂದ ಹಣ್ಣುಗಳ ಆಧಾರಿತ ವೈನ್ ಮಾರಾಟಕ್ಕೆ ಅವಕಾಶ ನೀಡುವ ನಿರ್ಧಾರ ತೆಗೆದು ಕೊಳ್ಳಲಾಗಿದೆ ಎಂದು ಕೌಶಲ್ಯಾಭಿವೃದ್ಧಿ ಸಚಿವ ನವಾಬ್ ಮಲ್ಲಿಕ್ ತಿಳಿಸಿದ್ದಾರೆ.
100 ಚದರ ಮೀಟರ್ ಅಥವಾ ಅದಕ್ಕಿಂತ ಹೆಚ್ಚಿನ ವಿಸ್ತೀರ್ಣ ಹೊಂದಿರುವ ಮತ್ತು ಮಹಾರಾಷ್ಟ್ರದ ಅಂಗಡಿಗಳು ಮತ್ತು ಸಂಸ್ಥೆಗಳ ಕಾಯ್ದೆಯಡಿ ನೋಂದಾಯಿಸ ಲ್ಪಟ್ಟಿರುವ ಸೂಪರ್‌ಮಾರ್ಕೆಟ್‌ಗಳು ಮತ್ತು ವಾಕ್-ಇನ್-ಸ್ಟೋರ್‌ಗಳಲ್ಲಿ “ಶೆಲ್ಫ್-ಇನ್-ಶಾಪ್” ವಿಧಾನವನ್ನು ಅಳವಡಿಸಿಕೊಳ್ಳಲಾಗುವುದು.
ರಾಷ್ಟ್ರದಲ್ಲಿನ ಒಟ್ಟು ವೈನ್ ಉದ್ಯಮದಲ್ಲಿ ಶೇ.65ರಷ್ಟು ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಕಂಡು ಬರುತ್ತದೆ. ಅವುಗಳಲ್ಲಿ ಹೆಚ್ಚಿನವು ನಾಸಿಕ್, ಸಾಂಗ್ಲಿ, ಪುಣೆ, ಸೋಲಾಪುರ, ಬುಲ್ಧಾನ ಮತ್ತು ಅಹಮದ್‌ನಗರಗಳಲ್ಲಿ ಇದೆ.
ಪೂಜಾ ಸ್ಥಳಗಳು ಅಥವಾ ಶಿಕ್ಷಣ ಸಂಸ್ಥೆಗಳ ಬಳಿ ಇರುವ ಸೂಪರ್‌ಮಾರ್ಕೆಟ್‌ಗಳಲ್ಲಿ ವೈನ್ ಮಾರಾಟ ಮಾಡುವಂತಿಲ್ಲ. ಇದಲ್ಲದೆ, ನಿಷೇಧ ಜಾರಿಯಲ್ಲಿರುವ ಜಿಲ್ಲೆಗಳಲ್ಲಿ ವೈನ್ ಮಾರಾಟವನ್ನು ಅನುಮತಿಸಲಾಗುವುದಿಲ್ಲ. ಸೂಪರ್ ಮಾರ್ಕೆಟ್‌ಗಳು ವೈನ್ ಮಾರಾಟಕ್ಕೆ 5,000 ರೂಪಾಯಿ ಶುಲ್ಕವನ್ನು ಪಾವತಿಸ ಬೇಕಾಗುತ್ತದೆ ಎಂದು ಸರ್ಕಾರ ಹೇಳಿದೆ.
ಸರ್ಕಾರದ ಕ್ರಮದ ವಿರುದ್ಧ ಭಾರತೀಯ ಜನತಾ ಪಕ್ಷ ಸೇರಿದಂತೆ ವಿಪಕ್ಷಗಳ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿವೆ. ರಾಜ್ಯ ಸರ್ಕಾರವೇ ಮದ್ಯ ಮಾರಾಟಕ್ಕೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿವೆ.