Monday, 18th November 2024

Winter Season Care: ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಪೋಷಕಾಂಶಗಳನ್ನು ಸೇವಿಸಿ

Winter Season Care

ಚಳಿಗಾಲವೆಂದರೆ (Winter Season Care) ಒಬ್ಬೊಬ್ಬರಿಗೆ ಒಂದೊಂದು ಕಾರಣಕ್ಕೆ ಇಷ್ಟ. ಕೆಲವರಿಗೆ ಹೊದ್ದು ಮಲಗುವುದಕ್ಕೆ, ಇನ್ನು ಕೆಲವರಿಗೆ ಸುಂದರ ಜಾಕೆಟ್‌ಗಳನ್ನು ತೊಟ್ಟು ಸಂಭ್ರಮಿಸುವುದಕ್ಕೆ, ಮತ್ತೆ ಕೆಲವರಿಗೆ ಖಾರದ ತಿನಿಸುಗಳನ್ನು ಮೆಲ್ಲುವುದಕ್ಕೆ, ಕರಂಕುರುಂ ತಿನ್ನುವುದಕ್ಕೆ, ಬಿಸಿ ಕಾಫಿಯೊ ಸೂಪೋ ಹೀರುವುದಕ್ಕೆ… ಇಂಥ ಯಾವುದಕ್ಕಾದರೂ ನಮ್ಮ ಆರೋಗ್ಯ (health) ಸರಿಯಿದ್ದರೆ ಋತುಮಾನಗಳನ್ನು ಆನಂದಿಸಬಹುದು. ಆದರೆ ಆರೋಗ್ಯ ಕೈಕೊಟ್ಟರೆ? ಆಗ ಎಲ್ಲ ಕಾಲವೂ ಕೇಡುಗಾಲವೇ.

ಆರೋಗ್ಯ ರಕ್ಷಣೆಗೆ ಅಗತ್ಯವಾಗಿ ಬೇಕಾದಂಥ ಪೋಷಕಾಂಶಗಳು ನಮಗೆ ದೊರೆಯುತ್ತಿವೆ ಎಂಬುದು ಖಾತ್ರಿಯಾದರೆ ಉತ್ತಮ ಆರೋಗ್ಯವೂ ಖಾತ್ರಿಯಾದಂತೆ. ಹಾಗಾದರೆ ಚಳಿಗಾಲದಲ್ಲಿ ನಮ್ಮ ಪ್ರತಿರೋಧಕ ಶಕ್ತಿ ಜಾಗೃತವಾಗಿ ಇರುವಂತೆ ಮಾಡುವ ಪೋಷಕಾಂಶಗಳು ಮತ್ತು ಆಹಾರಗಳು ಯಾವುವು?

Winter Season Care

ವಿಟಮಿನ್‌ ಸಿ

ಚಳಿಗಾಲದಲ್ಲಿ ನಮಗೆ ಅಗತ್ಯವಾಗಿ ಬೇಕಾದಂಥ ಸತ್ವಗಳಲ್ಲಿ ವಿಟಮಿನ್‌ ಸಿ ಮುಖ್ಯವಾಗಿದ್ದು, ಶರೀರದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಇದು ಅತ್ಯಗತ್ಯ. ಜೊತೆಗೆ ಚಳಿಗಾಲದಲ್ಲಿ ಸಮಸ್ಯೆಯಾಗುವ ಇನ್ನೊಂದು ಭಾಗವೆಂದರೆ ಚರ್ಮ. ಇದರ ರಕ್ಷಣೆಗೂ ಸಿ ಜೀವಸತ್ವದ ಆವಶ್ಯಕತೆ ಅಧಿಕವಾಗಿದೆ.

ಇದರ ಮೂಲಗಳೇನು?

ಸೀಬೆ ಹಣ್ಣು, ಕಿವಿ, ಪಪ್ಪಾಯ, ನಿಂಬೆ ರಸ, ಕಿತ್ತಳೆ, ಬೆರ್ರಿಗಳು, ಬ್ರೊಕೊಲಿ, ಕ್ಯಾಪ್ಸಿಕಂ ಮುಂತಾದವುಗಳಲ್ಲಿ ವಿಟಮಿನ್‌ ಸಿ ಹೇರಳವಾಗಿದೆ. ಇವುಗಳ (ವಿಟಮಿನ್‌ ಸಿ ಸೇರಿದಂತೆ) ಉತ್ಕರ್ಷಣ ನಿರೋಧಕಗಳು ಸೋಂಕುಗಳೊಂದಿಗೆ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.

Winter Season Care

ಜಿಂಕ್

ಜಿಂಕ್ ಮಾತ್ರ ಗೊತ್ತಿರುವವರಿಗೆ ಜಿಂಕ್‌ ಅಥವಾ ಸತು ಸ್ವಲ್ಪ ಹೊಸತೆನಿಸಬಹುದು. ಸತುವಿನ ಕೊರತೆಯಿಂದ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಚಳಿಗಾಲದಲ್ಲಿ ವೈರಸ್‌ಗಳು ದಾಳಿ ಇಡಲು ಇಷ್ಟು ಸಾಲದೇ? ದೇಹದ ಕೋಶಗಳ ಬೆಳವಣಿಗೆಗೆ ಮತ್ತು ರಿಪೇರಿಗೆ ಅಗತ್ಯವಾದ ಪೋಷಕಾಂಶವಿದು. ಹಾಗಾಗಿ ಜಿಂಕ್‌ ನಮ್ಮ ಆಹಾರದಲ್ಲಿ ಇರುವಂತೆ ನಿಗಾ ವಹಿಸುವುದು ಮುಖ್ಯ.

ಮೂಲಗಳೇನು?

ಆಹಾರದಿಂದ ಜಂಕ್‌ ಕಡಿಮೆ ಮಾಡಿದರೆ ಜಿಂಕ್‌ ದೇಹಕ್ಕೆ ಒದಗಿಸುವುದು ಕಷ್ಟವಲ್ಲ. ಬೇಳೆ ಮತ್ತು ಇಡಿಕಾಳುಗಳು, ನಾನಾ ರೀತಿಯ ಬೀಜಗಳು, ಡೈರಿ ಉತ್ಪನ್ನಗಳು, ಲೀನ್‌ ಮೀಟ್‌, ಇಡೀ ಧಾನ್ಯಗಳು- ಇಂಥ ಎಲ್ಲಾ ಆಹಾರಗಳಲ್ಲೂ ಸತು ದೊರೆಯುತ್ತದೆ.

Winter Season Care

ಕಬ್ಬಿಣಾಂಶ

ಈ ಖನಿಜಕ್ಕೆ ದೇಹದಲ್ಲಿ ಬಹಳಷ್ಟು ಕೆಲಸಗಳಿವೆ ಮಾಡುವುದಕ್ಕೆ. ಕೆಂಪು ರಕ್ತ ಕಣಗಳನ್ನು ಉತ್ಪಾದನೆ ಮಾಡುವುದರಿಂದ ಹಿಡಿದು ಆಮ್ಲಜನಕವನ್ನು ದೇಹದೆಲ್ಲೆಡೆ ಸಾಗಿಸುವವರೆಗೆ ಎಲ್ಲದಕ್ಕೂ ಕಬ್ಬಿಣ ಅಗತ್ಯ. ಇದರ ಕೊರತೆಯಾದರೆ ರಕ್ತಹೀನತೆ ಗಂಟು ಬೀಳುತ್ತದೆ. ಆದರೆ ಕಬ್ಬಿಣದಂಶ ಹೇರಳವಾಗಿರುವಂಥ ಬಹಳಷ್ಟು ಆಹಾರಗಳು ನಮಗೆ ಲಭ್ಯವಿವೆ ಸುಲಭದಲ್ಲಿ.

ಮೂಲಗಳೇನು?

ಪಾಲಕ್‌ನಂಥ ಹಸಿರು ಸೊಪ್ಪು, ಕೆಂಪು ಹರಿವೆ, ಬೀಟ್‌ರೂಟ್‌, ನುಗ್ಗೆಕಾಯಿ, ಹಲವು ರೀತಿಯ ಬೀಜಗಳು, ಕಾಳುಗಳು, ಮೀನುಗಳು, ತೋಫು, ಕಿನೊವಾ ಮುಂತಾದವುಗಳಲ್ಲಿ ಕಬ್ಬಿಣದಂಶ ಧಾರಾಳವಾಗಿ ದೊರೆಯುತ್ತದೆ.

Winter Season Care

ಸೂಕ್ಷ್ಮ ಪೋಷಕಾಂಶಗಳು

ಮೊಟ್ಟೆ ಮತ್ತು ಕೊಬ್ಬಿನ ಮೀನುಗಳಲ್ಲಿ ಸೂಕ್ಷ್ಮ ಪೋಷಕಾಂಶಗಳು ಸಾಂದ್ರವಾಗಿವೆ. ಇವು ಹಲವು ರೀತಿಯಲ್ಲಿ ದೇಹಕ್ಕೆ ಉಪಕಾರಿಯಾಗಿವೆ. ವಿಟಮಿನ್‌ ಡಿ, ಬಿ6, ಬಿ12 ಮುಂತಾದ ಜೀವಸತ್ವಗಳು ಎಲ್ಲಾ ಆಹಾರಗಳಲ್ಲೂ ಸುಲಭವಾಗಿ ದೊರೆಯುವುದು ಕಷ್ಟ. ಹಾಗಾಗಿ ಊಟದ ತಟ್ಟೆಯಲ್ಲಿ ನೈಸರ್ಗಿಕವಾಗಿ ನಾನಾ ಬಣ್ಣವನ್ನು ಹೊಂದಿದ ಆಹಾರಗಳಿಗೆ ಆದ್ಯತೆ ನೀಡಿ.

ಮೂಲಗಳೇನು?

ತರಹೇವಾರಿ ಬೀಜ, ಮೀನು, ಮೊಟ್ಟೆಯಂಥ ತಿನಿಸುಗಳು ಅಗತ್ಯವಾಗುತ್ತವೆ. ಮೊಟ್ಟೆಯಲ್ಲಿ ಉತ್ತಮ ಗುಣಮಟ್ಟದ ಪ್ರೊಟೀನ್‌, ಸೆಲೆನಿಯಂ, ಜಿಂಕ್‌, ಕಬ್ಬಿಣ, ತಾಮ್ರದ ಸತ್ವಗಳು ದೊರೆಯುತ್ತವೆ.

Winter Season Care: ಚಳಿಗಾಲದ ಶೀತ-ಜ್ವರದಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ?

ಮೀನುಗಳಲ್ಲಿ ಒಮೇಗಾ 3 ಕೊಬ್ಬಿನಾಮ್ಲ ಮತ್ತು ವಿಟಮಿನ್‌ ಡಿ ಅಂಶ ಭರಪೂರ ದೊರೆಯುತ್ತದೆ. ಸೊಪ್ಪು ಎಂದರೆ ಹಸಿರು ಸೊಪ್ಪುಗಳಷ್ಟೇ ಅಲ್ಲ, ಕೆಂಪು ಹರಿವೆ, ಕೆಂಪು ಪಾಲಕ್‌ನಂಥವು, ಕೋಸುಗಡ್ಡೆಯಲ್ಲಿ ಬಿಳಿ, ಹಸಿರು, ನೇರಳೆ ಮುಂತಾದ ಬಣ್ಣದವು, ದೊಣ್ಣೆ ಮೆಣಸಿನಲ್ಲಿ ಹಸಿರು, ಕೆಂಪು, ಹಳದಿ… ಹೀಗೆ ಹಲವು ಬಣ್ಣಗಳು ಊಟದಲ್ಲಿ ಸೇರಿರಲಿ.