Saturday, 23rd November 2024

Winter Season Care: ವಿಂಟರ್‌ ಬ್ಲೂ; ಚಳಿಗಾಲದ ಜಡತೆಯನ್ನು ಕಳೆಯುವುದು ಹೇಗೆ?

Winter Season Care

ಕಾಲಕ್ಕೆ ತಕ್ಕಂತೆ ನಡೆಯಬೇಕು ಎನ್ನುವ ಮಾತಿದೆ. ಇನ್ನೀಗ ಬರಲಿರುವುದು ಚಳಿಗಾಲ (Winter Season Care). ಸೂಪ್‌ ಕುಡಿದು, ಸ್ವೆಟರ್‌ ಹಾಕಿ ಬೆಚ್ಚಗಿದ್ದರಾಯಿತು ಎನ್ನುವಂತಿಲ್ಲ. ಕಾರಣ, ಚಳಿಗಾಲದಲ್ಲಿ ಬೆಚ್ಚಗಿರುವುದು ಅಗತ್ಯವಾದರೂ, ಅದೊಂದೇ ನಮ್ಮ ಅಗತ್ಯ ಎನ್ನುವಂತಿಲ್ಲ.

ಹಗಲು ಚುಟುಕಾಗಿ, ರಾತ್ರಿ ದೀರ್ಘವಾಗಿ, ಬಿಸಿಲು ತಾಗಿದಷ್ಟಕ್ಕೂ ಹಾಯೆನಿಸುವಂಥ ಚಳಿ ಮುಸುಕುತ್ತಿದ್ದಂತೆ ಏನೋ ಖಾಲಿತನ. ಮಳೆಗಾಲದಲ್ಲಿ ಮಾತ್ರವಲ್ಲ, ಚಳಿಗಾಲದಲ್ಲೂ ಹೊರಗಿನ ವಾತಾವರಣಕ್ಕೆ ಪ್ರತಿಯಾಗಿ ನಮ್ಮೊಳಗಿನ ವಾತಾವರಣ ಬದಲಾಗುತ್ತದೆ. ಬೆಳಗಾಗುತ್ತಿದ್ದಂತೆ ಏಳುವುದೇ ಬೇಡ ಎನ್ನುವ ಆಲಸ್ಯ, ಶಕ್ತಿಗುಂದಿದ ಭಾವ, ಮೂಡ್‌ ಸರಿಯಿಲ್ಲದೆ ಎಲ್ಲದರಲ್ಲೂ ನಿರಾಸಕ್ತಿ, ಜೊತೆಗೆ ಪದೇಪದೆ ಕಾಡುವ ಸೋಂಕುಗಳು. ಇದನ್ನೇ ವಿಂಟರ್‌ ಬ್ಲೂ (Winter Blue) ಅಥವಾ ಚಳಿಗಾಲದ ಜಡತೆ ಎಂದು ಕರೆಯಲಾಗುತ್ತದೆ. ಇವೆಲ್ಲ ಋತುಮಾನಕ್ಕೆ ಅನುಗುಣವಾಗಿ ಕಾಣಿಸಿಕೊಳ್ಳುವ ತೊಂದರೆಗಳು. ಇಂಥವುಗಳನ್ನು ನಿಭಾಯಿಸುವುದು ಹೇಗೆ?

ಚಳಿಗಾಲ ಪೂರಾ ದೈಹಿಕವಾಗಿ, ಮಾನಸಿಕವಾಗಿ ಮುದುಡಿಕೊಂಡೇ ಇರಬೇಕೆಂದಿಲ್ಲ. ಆಹಾರ ಮತ್ತು ಜೀವನಶೈಲಿಯಲ್ಲಿ ಕಾಲಕ್ಕೆ ಸರಿಯಾದ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಚಳಿಗಾಲವನ್ನು ಚೇತೋಹಾರಿಯಾಗಿ ಕಳೆಯಲು ಸಾಧ್ಯವಿದೆ. ಇದಕ್ಕೆ ಪೂರಕವಾದ ಸತ್ವಗಳು ಮತ್ತು ಆಹಾರಗಳು ಯಾವುವು ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳೋಣ.

Winter Season Care

ಒಮೇಗಾ 3 ಕೊಬ್ಬಿನಾಮ್ಲ

ಮಾನಸಿಕವಾಗಿ ಚೈತನ್ಯವನ್ನು ಕಾಪಾಡಿಕೊಳ್ಳುವಲ್ಲಿ ಈ ಪೋಷಕಾಂಶ ಅತಿ ಮುಖ್ಯವಾದದ್ದು. ಖಿನ್ನತೆ, ಮಾನಸಿಕ ಒತ್ತಡ, ದುಗುಡ, ಆತಂಕದಂಥ ತೊಂದರೆಗಳನ್ನು ನಿವಾರಿಸುವಲ್ಲಿ ಇದರ ಕೊಡುಗೆ ಅಪಾರ. ಅವಕಾಡೊ, ವಾಲ್‌ನಟ್‌, ಅಗಸೆಬೀಜ, ಪಾಲಕ್‌ನಂಥ ಸೊಪ್ಪುಗಳು, ಕೊಬ್ಬಿರುವ ಮೀನುಗಳು ನಮಗೆ ಅಗತ್ಯವಿರುವ ಒಮೇಗಾ 3 ಕೊಬ್ಬಿನಾಮ್ಲವನ್ನು ಪೂರೈಸಬಲ್ಲವು.

ಹಸಿರು ಸಸ್ಯಾದಿಗಳು

ಫೋಲೇಟ್‌ ಮತ್ತು ಇತರ ಬಿ ವಿಟಮಿನ್‌ಗಳು ಸಮೃದ್ಧವಾಗಿ ಒದಗಿದರೆ ದೇಹಕ್ಕೆ ಅಗತ್ಯವಾದ ಸೆರೋಟೋನಿನ್‌ ಉತ್ಪಾದನೆ ಕುಂಠಿತವಾಗುವುದಿಲ್ಲ. ಸೆರೋಟೋನಿನ್‌ ಚೋದಕವನ್ನು ಹ್ಯಾಪಿ ಹಾರ್ಮೋನ್‌ ಎಂದೇ ಕರೆಯಲಾಗುತ್ತದೆ. ಹಾಗಾಗಿ ಹಸಿರು ಬಣ್ಣದ ಯಾವುದೇ ಸೊಪ್ಪು ಮತ್ತು ತರಕಾರಿಗಳು ಚಳಿಗಾಲದಲ್ಲಿ ಹೆಚ್ಚಾಗಿ ಬೇಕು. ಇವುಗಳು ನೀಡುವಂಥ ಪ್ರಬಲ ಉತ್ಕರ್ಷಣ ನಿರೋಧಕಗಳು ಚಳಿಗಾಲದ ಸೋಂಕುಗಳ ವಿರುದ್ಧ ರಕ್ಷಣೆಯನ್ನೂ ಒದಗಿಸುತ್ತವೆ.

ಪ್ರೊಬಯಾಟಿಕ್‌ ಆಹಾರಗಳು

ನಮ್ಮ ಹೊಟ್ಟೆಯನ್ನು ಮತ್ತೊಂದು ಮೆದುಳು ಎಂದೇ ವ್ಯಾಖ್ಯಾನಿಸಲಾಗುತ್ತದೆ. ಶರೀರದ ಆರೋಗ್ಯವನ್ನು ವೃದ್ಧಿಸುವಲ್ಲಿ ನಮ್ಮ ಹೊಟ್ಟೆಯಲ್ಲಿರುವ ಸೂಕ್ಷ್ಮಾಣುಗಳ ಕೆಲಸ ಮಹತ್ವದ್ದು. ಮೂಡ್‌ ಸುಧಾರಿಸುವ, ಪ್ರತಿರೋಧಕ ಸಾಮರ್ಥ್ಯ ಹೆಚ್ಚಿಸುವ ಮತ್ತು ನರಗಳ ಕ್ಷಮತೆಯನ್ನು ಹೆಚ್ಚಿಸುವ ಕೆಲಸವನ್ನಿವು ಅಚ್ಚುಕಟ್ಟಾಗಿ ಮಾಡುತ್ತವೆ. ಹಾಗಾಗಿ ಅವುಗಳ ಸಂಖ್ಯೆಯನ್ನು ವೃದ್ಧಿಸಿಕೊಳ್ಳಬೇಕು. ಮೊಸರು, ಮಜ್ಜಿಗೆಯಂಥ ಹುದುಗು ಬಂದ ಅಥವಾ ಪ್ರೊಬಯಾಟಿಕ್‌ ಆಹಾರಗಳನ್ನು ಸೇವಿಸುವುದು ಅಗತ್ಯ.

Winter Season Care

ಸಿಟ್ರಸ್‌ ಹಣ್ಣುಗಳು

ಚಳಿಗಾಲದಲ್ಲಿ ದೊರೆಯುವ ಕೊಂಚ ಹುಳಿಯಾದ ಹಣ್ಣುಗಳಲ್ಲಿ ವಿಟಮಿನ್‌ ಸಿ ಅಂಶ ತುಂಬಿರುತ್ತದೆ. ಈ ಸತ್ವಗಳು ನಮಗೆ ಮಾಡುವ ಉಪಕಾರ ಅಷ್ಟಿಷ್ಟೇ ಅಲ್ಲ. ಚಳಿಗಾಲವನ್ನು ಸುಲಲಿತವಾಗಿ ಕಳೆಯಬೇಕೆಂದರೆ ಈ ಪೋಷಕಾಂಶವಿಲ್ಲದೇ ಸಾಧ್ಯವೇ ಇಲ್ಲ. ಹಾಗಾಗಿ ನಿಂಬೆ ರಸ ಬಳಸಿದ ಸೂಪ್‌, ಚಹಾ ಮುಂತಾದವನ್ನು ಸೇವಿಸಿ. ದ್ರಾಕ್ಷಿ, ಕಿತ್ತಳೆ, ನೆಲ್ಲಿಕಾಯಿ ಮುಂತಾದ ಫಲಗಳನ್ನು ಮರೆಯದೇ ತಿನ್ನಿ. ಇವೆಲ್ಲವೂ ಆರೋಗ್ಯಕ್ಕೆ ಪೂರಕ.

ಗಡ್ಡೆ-ಗೆಣಸು

ಹಲವು ರೀತಿಯ ಗಡ್ಡೆ, ಗೆಣಸುಗಳಿಗೆ ಇದೇ ಪರ್ವಕಾಲ. ವರ್ಷವಿಡೀ ತಿನ್ನುವ ಈರುಳ್ಳಿ, ಗಜ್ಜರಿ, ಬೀಟ್‌ರೂಟ್‌ನಂಥ ಗಡ್ಡೆಗಳ ಜೊತೆಗೆ ಗೆಣಸು, ಮರಗೆಣಸು, ಕೋಸುಗಡ್ಡೆ, ನವಿಲುಕೋಸು ಮುಂತಾದವು ನಮಗೆ ಬೇಕು. ಇವುಗಳಿಂದ ದೊರೆಯುವಂಥ ನಾರು ಮತ್ತು ಸಂಕೀರ್ಣ ಪಿಷ್ಟಗಳು ನಮ್ಮ ಶಕ್ತಿಯನ್ನು ಬೇಗನೇ ಕುಂದದಂತೆ ಕಾಪಿಡುತ್ತವೆ. ಇದರಿಂದ ಆಯಾಸ, ನಿರಾಸಕ್ತಿ ಕಾಡದಂತೆ ದಿನವಿಡೀ ಲವಲವಿಕೆಯಿಂದ ಇರಬಹುದು.

ಬೀಜಗಳು

ಚಳಿಗಾಲದಲ್ಲಿ ಏನನ್ನಾದರೂ ಕರುಂಕುರುಂ ತಿನ್ನಬೇಕೆನಿಸಿದಾಗ, ನಿಮ್ಮಿಷ್ಟದಂತೆ ಹುರಿದಿಟ್ಟುಕೊಂಡ ಬೀಜಗಳನ್ನು ಬಾಯಿಗೆಸೆದುಕೊಳ್ಳಿ. ಇದರಿಂದ ಬೇಡದ ಜಂಕ್‌ ತಿಂದು ಆರೋಗ್ಯ ಹಾಳಾಗುವುದು ತಪ್ಪುತ್ತದೆ ಮತ್ತು ಅಗತ್ಯ ಶಕ್ತಿ ದೇಹ ಸೇರುತ್ತದೆ. ಬಾದಾಮಿ, ಗೋಡಂಬಿ, ಕುಂಬಳಕಾಯಿ ಬೀಜ, ಸೂರ್ಯಕಾಂತಿ ಬೀಜ, ಹೆಂಪ್‌, ಪಿಸ್ತಾ ಮುಂತಾದ ಹತ್ತಾರು ಬೀಜಗಳನ್ನು ಸೇರಿಸಿ, ಬೇಕಾದ ವ್ಯಂಜನಗಳ ಜೊತೆಗೆ ಟ್ರೇಲ್‌ ಮಿಕ್ಸ್‌ ರೀತಿ ಮಾಡಿಕೊಳ್ಳಿ. ಇದರಿಂದ ಬಗೆಬಗೆಯ ಖನಿಜಗಳು ದೇಹಕ್ಕೆ ದೊರೆಯುತ್ತವೆ. ಕ್ಯಾಲ್ಸಿಯಂನಂಥವು ಚಳಿಗಾಲದಲ್ಲಿ ಮೂಳೆಗಳನ್ನು ಗಟ್ಟಿಯಾಗಿಟ್ಟು, ನೋವುಗಳಿಂದ ಮುಕ್ತಿ ನೀಡುತ್ತದೆ. ಮೆಗ್ನೀಶಿಯಂ ಒತ್ತಡ ನಿವಾರಣೆಗೆ ಸಹಕಾರಿ.

Constipation Problem: ದೀರ್ಘಕಾಲ ಮಲ ವಿಸರ್ಜನೆ ಮಾಡದೇ ಹಿಡಿದಿಟ್ಟುಕೊಂಡರೆ ಏನಾಗುತ್ತದೆ?

ನೀರು

ಬೇಸಿಗೆಯಲ್ಲಿ ನೀರು ಕುಡಿಯುವಂತೆ ದೇಹವೇ ದಾಹವನ್ನು ಬಡಿದೆಬ್ಬಿಸುತ್ತದೆ. ಆದರೆ ಚಳಿಗಾಲದಲ್ಲಿ ಬಾಯಾರಿಕೆ ಕಡಿಮೆ ಹೌದಾದರೂ ನೀರು ಬೇಕೇಬೇಕು. ತರಹೇವಾರಿ ಹರ್ಬಲ್‌ ಚಹಾಗಳು, ರುಚಿಕಟ್ಟಾದ ಸೂಪ್‌ಗಳು, ಆರೋಗ್ಯಕರ ಕಷಾಯಗಳು… ಇವುಗಳನ್ನೆಲ್ಲ ಹೇರಳವಾಗಿ ಕುಡಿಯುತ್ತಾ ಇದ್ದರೆ ಚಳಿಗಾಲ ಕಳೆದಿದ್ದೇ ತಿಳಿಯುವುದಿಲ್ಲ.