Wednesday, 4th December 2024

Dating Apps: ಡೇಟಿಂಗ್‌, ವಿವಾಹ ಆ್ಯಪ್‌ಗಳಲ್ಲಿ ಮಹಿಳೆಯರನ್ನು ಸಮೀಪಿಸುವ ಗಂಡಸರಲ್ಲಿ ಶೇ.80 ಫೇಕ್‌!

dating apps

ಬೆಂಗಳೂರು: ನಿಜಜೀವನದ ಪರೋಡಿಗಳ ಕಾಟ ಬೇಡ; ಆನ್‌ಲೈನ್‌ನಲ್ಲಿ ಡೇಟಿಂಗ್‌ ಆ್ಯಪ್‌ (Dating Apps) ಅಥವಾ ಮ್ಯಾಟ್ರಿಮೊನಿ ವೆಬ್‌ಸೈಟ್‌ಗಳಲ್ಲಿ ಒಳ್ಳೆಯ ಜೋಡಿ ಹುಡುಕಿಕೊಳ್ಳೋಣ ಎಂದು ಹೊರಡುವ ಮಹಿಳೆಯರು ನೀವಾಗಿದ್ದರೆ ಸ್ವಲ್ಪ ತಾಳಿ; ಅಲ್ಲೂ ಫೇಕುಗಳ ಕಾಟವಿದೆ. ಎಷ್ಟಿದೆ ಎಂದರೆ, ಆನ್‌ಲೈನ್‌ ಡೇಟಿಂಗ್‌ (Online dating) ಹಾಗೂ ವಿವಾಹ ಸಂಬಂಧ (Matrimony) ಕುದುರಿಸುವ ಅಪ್ಲಿಕೇಶನ್‌ಗಳಲ್ಲಿ ಸುಮಾರು 80% ಫೇಕ್‌ ಪ್ರೊಫೈಲ್‌ಗಳ (Fake Profiles) ಕಾಟವನ್ನು ಹೆಣ್ಣುಮಕ್ಕಳು ಎದುರಿಸುತ್ತಾರಂತೆ. ಇದು ಆನ್ಲೈನ್‌ ಸಮೀಕ್ಷೆಯೊಂದರಲ್ಲಿ (Online Survey) ಕಂಡುಬಂದ ವಾಸ್ತವ.

ಹೆಚ್ಚುತ್ತಿರುವ ಡಿಜಿಟೈಸ್ಡ್ ಜಗತ್ತಿನಲ್ಲಿ ಡೇಟಿಂಗ್ ಮತ್ತು ಮ್ಯಾಟ್ರಿಮೋನಿಯಲ್ ಅಪ್ಲಿಕೇಶನ್‌ಗಳು ಸಂಬಂಧ ಬೆಸೆಯಲು ಅನಿವಾರ್ಯವಾಗಿವೆ. ಸಂಬಂಧಗಳ ರೂಪುಗೊಳ್ಳುವಿಕೆಯಲ್ಲಿ ಇವು ಕ್ರಾಂತಿಯನ್ನೇ ಮಾಡಿವೆ. ಇವು ಎಲ್ಲ ಭೌಗೋಳಿಕ ಅಂತರ ಮತ್ತು ಸಾಮಾಜಿಕ ನಿರ್ಬಂಧಗಳನ್ನೆಲ್ಲ ಮೀರಿವೆ. ಸಮಾನ ಮನಸ್ಕರೊಂದಿಗೆ ಸಂಪರ್ಕ ಸಾಧಿಸಲು ಸುಲಭವಾಗಿದೆ. ಆದರೆ ಮಹಿಳೆಯರು ಇಲ್ಲಿ ಎದುರಿಸುತ್ತಿರುವ ಸವಾಲುಗಳು ಅನೂಹ್ಯವಾಗಿವೆ.

“78 ಪ್ರತಿಶತ ಮಹಿಳೆಯರು ಡೇಟಿಂಗ್ ಅಥವಾ ಮ್ಯಾಟ್ರಿಮೋನಿ ಅಪ್ಲಿಕೇಶನ್‌ಗಳಲ್ಲಿ ನಕಲಿ ಪ್ರೊಫೈಲ್‌ಗಳನ್ನು ಎದುರಿಸುತ್ತಾರೆ. ಇದರಿಂದಾಗಿ ಶೇಕಡಾ 48ರಷ್ಟು ಜನರು ಮಾನಸಿಕ ಆರೋಗ್ಯದ ಸಮಸ್ಯೆಗೆ ಈಡಾಗುತ್ತಿದ್ದಾರೆ” ಎಂದು ಸಮೀಕ್ಷೆಯ ಫಲಿತಾಂಶ ತಿಳಿಸಿದೆ. ಜೂಲಿಯೊ, ಎಕ್ಸ್‌ಕ್ಲೂಸಿವ್ ಸಿಂಗಲ್ಸ್ ಕ್ಲಬ್, ಜಾಗತಿಕ ಸಾರ್ವಜನಿಕ ಅಭಿಪ್ರಾಯ ಕಂಪನಿಯಾದ YouGov ಸಹಭಾಗಿತ್ವದಲ್ಲಿ ಸಮೀಕ್ಷೆ ನಡೆಸಲಾಗಿದೆ. ದೇಶದ 8 ದೊಡ್ಡ ನಗರಗಳಿಂದ 1,000 ಅವಿವಾಹಿತರನ್ನು ಮಾತನಾಡಿಸಿ ಈ ಸಮೀಕ್ಷೆ ಮಾಡಲಾಗಿದೆ.

ಈ ವರದಿಯು ಪ್ರೊಫೈಲ್‌ಗಳ ಹೊಂದಾಣಿಕೆ, ಸುರಕ್ಷತೆ ಮತ್ತು ಪ್ರೊಫೈಲ್‌ಗಳ ನೈಜತೆಯ ಬಗ್ಗೆ ಕಾಳಜಿ, ಡೇಟಿಂಗ್ ಅಪ್ಲಿಕೇಶನ್ ಆಯಾಸ, ಡೇಟಿಂಗ್ ಮತ್ತು ಮ್ಯಾಟ್ರಿಮೋನಿ ಅಪ್ಲಿಕೇಶನ್‌ಗಳನ್ನು ಬಳಸುವಾಗ ಅನುಭವಿಸುವ ಮಾನಸಿಕ ಆರೋಗ್ಯ ಸಮಸ್ಯೆಗಳು ಇತ್ಯಾದಿಗಳ ಕುರಿತು ಸಾಕಷ್ಟು ಒಳನೋಟಗಳನ್ನು ನೀಡಿದೆ. ಡೇಟಿಂಗ್ ಮತ್ತು ಮ್ಯಾಟ್ರಿಮೋನಿ ಅಪ್ಲಿಕೇಶನ್‌ಗಳು ಯುವಜನರಲ್ಲಿ ಜನಪ್ರಿಯವಾಗಿವೆ.

ಆದರೆ, ಡೇಟಿಂಗ್ ಅಥವಾ ಮ್ಯಾಟ್ರಿಮೋನಿ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಬಳಸಿದ ಮೂವರಲ್ಲಿ ಇಬ್ಬರು, ತಮ್ಮ ಸಂಭಾವ್ಯ ಸಂಗಾತಿಗಳೊಂದಿಗೆ ಎಂದಿಗೂ ವೈಯಕ್ತಿಕವಾಗಿ ಭೇಟಿಯಾಗಲಿಲ್ಲವಂತೆ. ಇದು ಡಿಜಿಟಲ್‌ ಜಗತ್ತಿನ ನಿಜ ಜೀವನದ ಸಂಪರ್ಕಗಳ ಕೊರತೆಯನ್ನು ಬಿಂಬಿಸುತ್ತದೆ. ಇದಕ್ಕೆ ಹಲವಾರು ಕಾರಣಗಳಿದ್ದರೂ, ಉತ್ತಮ ಪ್ರೊಫೈಲ್‌ಗಳನ್ನು ಹುಡುಕಲು ಅಸಮರ್ಥತೆ ಮುಖ್ಯವಾಗಿದೆ.

78 ಪ್ರತಿಶತ ಮಹಿಳೆಯರು ಈ ಪ್ಲಾಟ್‌ಫಾರ್ಮ್‌ಗಳಲ್ಲಿ ನಕಲಿ ಪ್ರೊಫೈಲ್‌ಗಳನ್ನು ಎದುರಿಸಿದ್ದಾರೆ. ಹೀಗಾಗಿ ಮಹಿಳೆಯರು ತಮ್ಮ ಪ್ರೊಫೈಲ್‌ಗಳಿಗೆ ಹೆಚ್ಚಿನ ಗೌಪ್ಯತೆ ಮತ್ತು ಉತ್ತಮ ನಿಯಂತ್ರಣವನ್ನು ಅಪೇಕ್ಷಿಸಿದ್ದಾರೆ. 74 ಪ್ರತಿಶತ ಪುರುಷರು ಮತ್ತು ಮಹಿಳೆಯರು, ತಮ್ಮ ಪ್ರೊಫೈಲ್‌ಗಳು ಅವರು ಆಯ್ಕೆ ಮಾಡಿದವರಿಗೆ ಮಾತ್ರ ಗೋಚರಿಸಬೇಕು ಎಂದು ಹೇಳುತ್ತಾರೆ.

82 ಶೇಕಡ ಮಹಿಳೆಯರು, ಸುರಕ್ಷತೆಯ ಅಗತ್ಯದಿಂದಾಗಿ ಡೇಟಿಂಗ್ ಅಥವಾ ಮ್ಯಾಟ್ರಿಮೋನಿಯಲ್ ಪ್ಲಾಟ್‌ಫಾರ್ಮ್‌ಗಳಿಗೆ ಸರ್ಕಾರಿ ಐಡಿ ಪರಿಶೀಲನೆ ಅಗತ್ಯ ಎಂದು ಭಾವಿಸುತ್ತಾರೆ. ಈ ಅಪ್ಲಿಕೇಶನ್‌ಗಳಲ್ಲಿ ನಡೆದಿರುವ ಹಗರಣಗಳನ್ನು ನೆನಪಿಸುತ್ತಾರೆ.

ಆನ್‌ಲೈನ್‌ ಡೇಟಿಂಗ್‌ ಹಾಗೂ ಮ್ಯಾಟ್ರಿಮೋನಿಯಲ್‌ ಪ್ರಕ್ರಿಯೆ ಪ್ರಯಾಸದಾಯಕ ಮತ್ತು ಭಾವನಾತ್ಮಕವಾಗಿ ದಣಿಸುತ್ತದೆ. ಹೀಗಾಗಿ ಬಳಕೆದಾರರು ಭಾವನಾತ್ಮಕ ಮತ್ತು ಮಾನಸಿಕ ಪರಿಣಾಮಗಳನ್ನು ಎದುರಿಸಬೇಕಾಗುತ್ತಿದೆ. ಪ್ರತಿಕ್ರಿಯಿಸಿದವರಲ್ಲಿ ಅರ್ಧದಷ್ಟು ಜನ, ಡೇಟಿಂಗ್ ಅಥವಾ ಮ್ಯಾಟ್ರಿಮೋನಿ ಪ್ಲಾಟ್‌ಫಾರ್ಮ್‌ಗಳ ಬಳಕೆಯಿಂದ ಮಾನಸಿಕ ತೊಂದರೆ ಅನುಭವಿಸುತ್ತಿದ್ದಾರಂತೆ.

4 ಮಹಿಳೆಯರಲ್ಲಿ 3 ಮಂದಿ ಡೇಟಿಂಗ್ ಅಥವಾ ಮ್ಯಾಟ್ರಿಮೋನಿ ಅಪ್ಲಿಕೇಶನ್‌ಗಳ ಮಾನಸಿಕ ಅಪಾಯಗಳತ್ತ ಬೊಟ್ಟು ಮಾಡುತ್ತಾರೆ. ಇವು ಭಾವನಾತ್ಮಕವಾಗಿ ಅತಿಯಾದ ಹೊರೆ ಹೊರಿಸುತ್ತವೆ. ಅಂತ್ಯವಿಲ್ಲದ ಹುಡುಕಾಟದ ಬದಲಿಗೆ ಸರಿಯಾದ ಪ್ರೊಫೈಲ್‌ಗಳನ್ನು ಹುಡುಕಲು ಸಹಾಯ ಮಾಡುವ ಕಸ್ಟಮೈಸ್ಡ್‌ ಮ್ಯಾಚ್‌ಮೇಕರ್ ಅನ್ನು ಹೊಂದಲು 3ರಲ್ಲಿ 2 ಜನ ಇಷ್ಟಪಡುತ್ತಾರೆ.

ಈ ಸುದ್ದಿ ಓದಿ: ಸಲ್ಮಾನ್‌ ಖಾನ್‌ ಜೊತೆ ಪೂಜಾ ಡೇಟಿಂಗ್‌…!