ಲಖನೌ: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಮಹಿಳಾ ಸುರಕ್ಷತೆ ಬಹುದೊಡ್ಡ ಸವಾಲಿನ ಸಂಗತಿಯಾಗಿದೆ. ಇದೀಗ ಉತ್ತರಪ್ರದೇಶದಲ್ಲಿ ಮಹಿಳಾ ಸುರಕ್ಷತಾ ಕ್ರಮವನ್ನು(Women’s safety measures) ಸುಧಾರಿಸುವ ನಿಟ್ಟಿನಲ್ಲಿ ಹತ್ತು ಹಲವು ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಮಹಿಳಾ ಆಯೋಗ(Uttar Pradesh State Women Commission) ಮುಂದಾಗಿದೆ. ಅದರಲ್ಲಿ ಆಯೋಗದ ಪ್ರಸ್ತಾಪಿಸಿರುವ ಕೆಲವು ಸುರಕ್ಷತಾ ಕ್ರಮಗಳು ದೇಶದ ಗಮನ ಸೆಳೆದಿವೆ. ಪುರುಷ ಟೈಲರ್‌ಗಳು ಮಹಿಳೆಯರ ಅಳತೆ ತೆಗೆದುಕೊಳ್ಳುವುದನ್ನು, ಜಿಮ್‌ಗಳು ಮತ್ತು ಯೋಗ ಸೆಷನ್‌ಗಳಲ್ಲಿ ಮಹಿಳೆಯರಿಗೆ ತರಬೇತಿ ನೀಡುವುದನ್ನು ನಿರ್ಬಂಧಿಸುವುದು ಹೀಗೆ ಹಲವು ಸುರಕ್ಷತಾ ಕ್ರಮಗಳನ್ನು ಪ್ರಸ್ತಾಪಿಸಿದೆ.
ಸಾರ್ವಜನಿಕ ಮತ್ತು ವಾಣಿಜ್ಯ ಸ್ಥಳಗಳಲ್ಲಿ ಮಹಿಳಾ ಭದ್ರತೆಯನ್ನು ಹೆಚ್ಚಿಸಲು ಶಾಲಾ ಬಸ್‌ಗಳಲ್ಲಿ ಮಹಿಳಾ ಭದ್ರತಾ ಸಿಬ್ಬಂದಿಯನ್ನು ಇರಿಸಲು ಮತ್ತು ಮಹಿಳಾ ಬಟ್ಟೆ ಅಂಗಡಿಗಳಲ್ಲಿ ಮಹಿಳಾ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಆಯೋಗವು ಸೂಚಿಸಿದೆ. ಅಕ್ಟೋಬರ್ 28 ರಂದು ಲಕ್ನೋದಲ್ಲಿ ನಡೆದ ಸಭೆಯಲ್ಲಿ ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸುವ ಕ್ರಮಗಳನ್ನು ಚರ್ಚಿಸಲಾಯಿತು. ಅಲ್ಲಿ ಆಯೋಗದ ಸದಸ್ಯರು ಮಹಿಳೆಯರ ಸುರಕ್ಷತೆಯನ್ನು ಸುಧಾರಿಸುವ ಉದ್ದೇಶದಿಂದ ವಿವಿಧ ಉಪಕ್ರಮಗಳನ್ನು ಸರ್ಕಾರ ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ಆಯೋಗದ ಸದಸ್ಯರಾದ ಮನೀಶಾ ಅಹ್ಲಾವತ್ ಪ್ರತಿಕ್ರಿಯಿಸಿದ್ದು, ಇದು ಪ್ರಾಥಮಿಕ ಚರ್ಚೆ ಅಷ್ಟೇ. ಈ ಪ್ರಸ್ತಾವನೆಗಳ ಕಾರ್ಯಸಾಧ್ಯತೆಯನ್ನು ಇನ್ನೂ ನಿರ್ಧರಿಸಲಾಗಿಲ್ಲ. ಅನುಮೋದಿಸಿದ ನಂತರ, ಈ ಪ್ರಸ್ತಾವನೆಗಳ ಅನುಷ್ಠಾನಕ್ಕಾಗಿ ಕರಡು ನೀತಿಯನ್ನು ರಚಿಸಲು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಆದಾಗ್ಯೂ, ಶಾಮ್ಲಿ ಜಿಲ್ಲಾ ಪರೀಕ್ಷಾಧಿಕಾರಿ ಹಮೀದ್ ಹುಸೇನ್ ಅವರು ಮಹಿಳಾ ಜಿಮ್‌ಗಳು, ನಾಟಕ ಮತ್ತು ಯೋಗ ಕೇಂದ್ರಗಳಲ್ಲಿ ಮಹಿಳಾ ತರಬೇತುದಾರರು ಅಥವಾ ಶಿಕ್ಷಕರನ್ನು ನೇಮಿಸುವುದು ಮತ್ತು ಮೇಲ್ವಿಚಾರಣೆಗಾಗಿ ಡಿವಿಆರ್ ಸಾಮರ್ಥ್ಯಗಳೊಂದಿಗೆ ಸಿಸಿಟಿವಿ ವ್ಯವಸ್ಥೆಗಳನ್ನು ಸ್ಥಾಪಿಸಲು ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಿದ್ದಾರೆ. ಶಾಲಾ ಬಸ್‌ಗಳಲ್ಲಿ ಈಗ ಮಹಿಳಾ ಭದ್ರತಾ ಸಿಬ್ಬಂದಿ ಅಥವಾ ಶಿಕ್ಷಕಿ ಇರಬೇಕು ಮತ್ತು ಸಿಸಿಟಿವಿ ಕ್ಯಾಮೆರಾ ಕಣ್ಗಾವಲು, ಮಹಿಳೆಯರ ಅಳತೆ ತೆಗೆದುಕೊಳ್ಳಲು ಬೂಟಿಕ್‌ಗಳು ಮಹಿಳಾ ಟೈಲರ್‌ಗಳನ್ನು ನೇಮಿಸಿಕೊಳ್ಳಬೇಕು ಎಂದು ಹುಸೇನ್ ಹೇಳಿದರು.
ಏತನ್ಮಧ್ಯೆ, ಶಾಮ್ಲಿಯಲ್ಲಿರುವ ಕೋಚಿಂಗ್ ಸೆಂಟರ್‌ಗಳು ಈಗ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಮತ್ತು ಮಹಿಳೆಯರಿಗೆ ಸರಿಯಾದ ವಿಶ್ರಾಂತಿ ಕೊಠಡಿಯನ್ನು ಹೊಂದಿರಬೇಕು. ಮಹಿಳೆಯರ ಉಡುಪುಗಳನ್ನು ಮಾರಾಟ ಮಾಡುವ ಮಳಿಗೆಗಳಿಗೆ ಸಹಾಯಕ್ಕಾಗಿ ಮಹಿಳಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುವಂತೆ ತಿಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Viral Video: ದೇಗುಲದೊಳಗೇ ಹಿಂದೂ ಯುವತಿಯೊಂದಿಗೆ ಚಕ್ಕಂದ! ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಅನ್ಯಕೋಮಿನ ಯುವಕ; ವಿಡಿಯೋ ಫುಲ್ ವೈರಲ್