ವಿಶ್ವದಾದ್ಯಂತ ಇಂದು ಮಧುಮೇಹ ದಿನವನ್ನು (World Diabetes Day 2024) ಆಚರಿಸಲಾಗುತ್ತಿದೆ. ಜಗತ್ತಿನೆಲ್ಲೆಡೆ ಹತ್ತರಲ್ಲಿ ಒಬ್ಬರು ಮಧುಮೇಹದೊಂದಿಗೆ ಬದುಕುತ್ತಿದ್ದಾರೆ. ವರ್ಷಂಪ್ರತಿ 67 ಲಕ್ಷ ಮಂದಿ ಮಧುಮೇಹ ಸಂಬಂಧಿ ಆರೋಗ್ಯ ಸಮಸ್ಯೆಗಳಿಗೆ ಜೀವ ತೆರುತ್ತಿದ್ದಾರೆ. ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆಯೇ ಭಯ ಹುಟ್ಟಿಸುತ್ತಿದೆ ಎಂದಾದರೆ ಅಂತಾರಾಷ್ಟ್ರೀಯ ಮಧುಮೇಹ ಪ್ರತಿಷ್ಠಾನದ ಅಂದಾಜಿನಂತೆ 2030ರ ವೇಳೆಗೆ 64 ಕೋಟಿಗೂ ಹೆಚ್ಚಿನ ಜನ ಮಧುಮೇಹದೊಂದಿಗೆ ಬದುಕುವಂತಾಗಲಿದೆ.
ಇದಕ್ಕಿಂತ ಇನ್ನೂ ದೊಡ್ಡ ಸಮಸ್ಯೆಯೆಂದರೆ ತಮಗೆ ಮಧುಮೇಹ ಇದೆ ಎಂಬುದನ್ನು ಅರಿಯದೆಯೇ ಬದುಕುವವರ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಮಧುಮೇಹ ಚಿಕಿತ್ಸೆಯಲ್ಲಿನ “ತಡೆಗಳನ್ನು ತೊಡೆದು, ಅಂತರಗಳನ್ನು ಬೆಸೆಯುವ” ಘೋಷ ವಾಕ್ಯದೊಂದಿಗೆ ನವೆಂಬರ್ 14ರಂದು ವಿಶ್ವದೆಲ್ಲೆಡೆ ಆಚರಿಸಲಾಗುವ ಮಧುಮೇಹದ ಅರಿವಿನ ದಿನದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ನಮ್ಮ ಆಹಾರದ ಮೂಲಕ ದೊರೆಯುವ ಗ್ಲೂಕೋಸ್ ಅಂಶವನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳುವುದಕ್ಕೆ ಶರೀರ ವಿಫಲವಾದಾಗ ಬರುವಂಥ ಕಾಯಿಲೆ ಮಧುಮೇಹ. ಇದರಿಂದ ಇನ್ನೂ ಬಹಳಷ್ಟು ತೊಂದರೆಗಳು ಉಂಟಾಗುತ್ತದೆ. ಅಂದರೆ ಹೃದಯದ ತೊಂದರೆ, ನರ ಸಂಬಂಧಿ ದೋಷಗಳು, ದೃಷ್ಟಿ ಮತ್ತು ಮೂತ್ರಪಿಂಡದ ಸಮಸ್ಯೆ, ಚರ್ಮದ ತೊಂದರೆ… ಹೀಗೆ ಒಂದರ ಹಿಂದೊಂದು ಸಮಸ್ಯೆಗಳು ಹೆಚ್ಚಾಗುತ್ತಲೇ ಹೋಗುತ್ತವೆ.
ಮೊದಲಿನಂತೆ ಮಧುಮೇಹ ಎಂಬುದು ವಯಸ್ಸಾದವರ ಕಾಯಿಲೆಯಾಗಿ ಉಳಿದಿಲ್ಲ. ಮಕ್ಕಳಲ್ಲಿ, ಹದಿಹರೆಯದವರಲ್ಲಿ ಸಹ ಇನ್ಸುಲಿನ್ ಪ್ರತಿರೋಧದ ಸಮಸ್ಯೆ ವ್ಯಾಪಕವಾಗಿ ಕಾಣುತ್ತಿದೆ. ಗರ್ಭಾವಸ್ಥೆಯಿಂದಲೇ ಮಧುಮೇಹ ಕಾಡುವ ತಾಯಂದಿರಿಗೆ ಹುಟ್ಟುವ ಪ್ರತಿ ಆರು ಮಕ್ಕಳಲ್ಲಿ ಒಬ್ಬರಿಗೆ ಮಧುಮೇಹ ಅಂಟುತ್ತಿದೆಯೆಂಬ ಸಂಖ್ಯೆಯಂತೂ ಗಾಬರಿ ಹುಟ್ಟಿಸುವಂಥದ್ದು. ಹಾಗಾಗಿಯೇ, ವಿಶ್ವದೆಲ್ಲೆಡೆ ಆರೋಗ್ಯ ನಿರ್ವಹಣೆಗೆ ಒಟ್ಟಾಗಿ ಖರ್ಚಾಗುವ ಸಂಪನ್ಮೂಲದ ಪೈಕಿ ಶೇ. 10ರಷ್ಟು ಕೇವಲ ಮಧುಮೇಹ ನಿರ್ವಹಣೆಗೆ ವ್ಯಯವಾಗುತ್ತಿದೆ.
ನಿರ್ವಹಣೆಗೆ ದಾರಿಗಳೇನು?
ಸಕ್ಕರೆ ಮತ್ತು ಪಿಷ್ಟದ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ. ಬದಲಿಗೆ ಸಂಕೀರ್ಣ ಪಿಷ್ಟಗಳು, ನಾರು, ಪ್ರೊಟೀನ್, ನೀರು, ಖನಿಜಗಳು ಮತ್ತು ಜೀವಸತ್ವಗಳನ್ನು ಒಳಗೊಂಡ ಪೂರ್ಣ ಸಮತೋಲಿತ ಆಹಾರ ಸೇವನೆಯತ್ತ ಗಮನ ಕೊಡಿ. ಅತಿಯಾದ ಉಪ್ಪು, ಜಿಡ್ಡು ಮತ್ತು ಸಂಸ್ಕರಿತ ಆಹಾರಗಳು ಆರೋಗ್ಯವನ್ನು ಹಾಳು ಮಾಡುತ್ತವೆ.
ಸೋಡಾ ಮತ್ತಿತರ ಬಾಟಲಿಯ ಪೇಯಗಳು, ಮೈದಾಭರಿತ ಆಹಾರಗಳು, ಕೃತಕ ಬಣ್ಣಗಳ ಸಿಹಿ ತಿನಿಸುಗಳು ಮಧುಮೇಹವನ್ನು ಕೈಬೀಸಿ ಕರೆಯುತ್ತವೆ. ಧೂಮಪಾನ ಮತ್ತು ಆಲ್ಕೋಹಾಲ್ ಸೇವನೆಯಿಂದಲೂ ಇನ್ಸುಲಿನ್ ಪ್ರತಿರೋಧ ಹೆಚ್ಚುತ್ತದೆ ಎಂಬುದನ್ನು ಮರೆಯುವಂತಿಲ್ಲ.
ಇವೆಲ್ಲವುಗಳ ಬದಲಿಗೆ ಒಂದೇ ಬಾರಿಗೆ ಅತಿಯಾಗಿ ತಿನ್ನಬೇಡಿ. ಸಣ್ಣ ಪ್ರಮಾಣದ ಆಹಾರವನ್ನು ನಿಯಮಿತವಾಗಿ ಸೇವಿಸಿ. ಆಹಾರದ ಗಾತ್ರಕ್ಕಿಂತ ಗುಣಮಟ್ಟಕ್ಕೆ ಆದ್ಯತೆ ನೀಡಿ. ಋತುಮಾನದಲ್ಲಿ ದೊರೆಯುವ ಹಣ್ಣು ತರಕಾರಿಗಳು ಸದಾ ಕಾಲ ನಮ್ಮ ಆರೋಗ್ಯ ಕಾಯುವ ಕೆಲಸವನ್ನು ಮಾಡುವಂಥವು. ಜೊತೆಗೆ ಇಡೀ ಧಾನ್ಯಗಳು, ಸಿರಿ ಧಾನ್ಯಗಳು, ಮೊಳಕೆ ಕಾಳುಗಳು, ಬೇಳೆಗಳು, ಡೇರಿ ಉತ್ಪನ್ನಗಳು, ಬೀಜ-ಕಾಯಿಗಳ ಸೇವನೆಯನ್ನು ತಪ್ಪಿಸಬೇಡಿ. ವಾರಕ್ಕೆ ಏನಿಲ್ಲವೆಂದರೂ ಐದು ದಿನ- ತಲಾ 30 ನಿಮಿಷಗಳ ವ್ಯಾಯಾಮ ಮಾಡಿಯೇ ತೀರುವುದಾಗಿ ನಿಶ್ಚಯ ಮಾಡಿಕೊಳ್ಳಿ, ಅದನ್ನು ಜಾರಿಗೊಳಿಸಿ.
ರಾತ್ರಿ ಬೇಗ ಮಲಗಿ ಬೆಳಗ್ಗೆ ಏಳುವಷ್ಟರಲ್ಲಿ ಬರುವ ರೋಗವಲ್ಲ ಮಧುಮೇಹ. ಇದಕ್ಕೆ ಸಿದ್ಧತೆ ದೀರ್ಘಕಾಲದಿಂದಲೇ ದೇಹದಲ್ಲಿ ನಡೆದಿರುತ್ತದೆ. ಈ ರೋಗ ಕಾಣಿಸಿಕೊಂಡ ಎಲ್ಲರಿಗೂ ವಂಶವಾಹಿಯಿಂದ ಬಂದಿರಲೇಬೇಕೆಂದೂ ಇಲ್ಲ. ಹೆಚ್ಚಿನ ಬಾರಿ ಇದು ಅಂಟುವುದೇ ಜೀವನಶೈಲಿಯಿಂದ. ತಪ್ಪಾದ ಆಹಾರ ಪದ್ಧತಿ, ವ್ಯಾಯಾಮವಿಲ್ಲದ ಜೀವನ, ಒತ್ತಡದ ಬದುಕು, ನಿದ್ದೆಗೆಡುವಂಥ ಕೆಲಸ, ಅವಿಶ್ರಾಂತ ದುಡಿಮೆ- ಇಂಥವೆಲ್ಲಾ ಮಧುಮೇಹವನ್ನು ಬಳುವಳಿಯಾಗಿ ನೀಡುತ್ತವೆ.
Hair Care Tips: ಟೊಮೆಟೊವನ್ನು ಈ ರೀತಿ ಬಳಸಿ; ಕೂದಲು ಉದುರುವುದನ್ನು ನಿಲ್ಲಿಸಿ!
ಈ ರೋಗವನ್ನು ಸಂಪೂರ್ಣ ಹತೋಟಿಯಲ್ಲಿ ಇರಿಸಿಕೊಂಡು ಎಲ್ಲರಂತೆ ಆರೋಗ್ಯಕರ ಜೀವನ ನಡೆಸಲು ಖಂಡಿತಾ ಸಾಧ್ಯವಿದೆ. ಸೂಕ್ತವಾದ ಆಹಾರಪದ್ಧತಿ, ಸರಿಯಾದ ವ್ಯಾಯಾಮ, ಕಣ್ತುಂಬ ನಿದ್ದೆ, ಒತ್ತಡ ನಿಯಂತ್ರಣದಂಥವು ಈ ದಿಸೆಯಲ್ಲಿ ಉತ್ತಮ ಫಲ ನೀಡುತ್ತವೆ.