ನವದೆಹಲಿ: ಯುವ ಕುಸ್ತಿಪಟು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ, ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ರ ನ್ಯಾಯಾಂಗ ಬಂಧನವನ್ನು ಜುಲೈ 9ರವರೆಗೆ ವಿಸ್ತರಿಸಿದೆ.
ಸುಶೀಲ್ ಕುಮಾರ್ ಕೊಲೆ ಮತ್ತು ಅಪಹರಣದ ಆರೋಪ ಎದುರಿಸುತ್ತಿದ್ದು, 14 ದಿನಗಳ ನ್ಯಾಯಾಂಗ ಬಂಧನ ಅವಧಿ ಮುಕ್ತಾಯಗೊಂಡಿದ್ದರಿಂದ ಶುಕ್ರವಾರ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಯುವ ಕುಸ್ತಿಪಟು ಸಾಗರ್ ರಾಣಾ ಮೇಲೆ ಮೇ 4ರಂದು ಸುಶೀಲ್ ಕುಮಾರ್ ಸೇರಿದಂತೆ ಅವರ ನಾಲ್ವರು ಸಹಚರರು ಹಲ್ಲೆ ನಡೆಸಿದ್ದರು. ಪರಿಣಾಮ ಸಾಗರ್ ರಾಣಾ ಮೃತಪಟ್ಟಿದ್ದು, ಇಬ್ಬರಿಗೆ ಮಾರಣಾಂತಿಕ ಗಾಯಗಳಾಗಿತ್ತು.
ಸುಶೀಲ್ ಕುಮಾರ್ ಈ ಹತ್ಯೆಯ ‘ಮುಖ್ಯ ಅಪರಾಧಿ ಮತ್ತು ಮಾಸ್ಟರ್ ಮೈಂಡ್’ ಎಂದು ಪೊಲೀಸರು ಆರೋಪಿಸಿದ್ದಾರೆ. ಸುಶೀಲ್ ಕುಮಾರ್ ಮತ್ತು ಸಹ ಆರೋಪಿ ಅಜಯ್ ಕುಮಾರ್ ಸೆಹ್ರಾವತ್ ರನ್ನು ಮೇ 23ರಂದು ಬಂಧಿಸಲಾಯಿತು. ಘಟನೆಗೆ ಸಂಬಂಧಿಸಿದಂತೆ ಸುಶೀಲ್ ಕುಮಾರ್ ಸೇರಿದಂತೆ ಒಟ್ಟು 10 ಜನರನ್ನು ಈವರೆಗೆ ಬಂಧಿಸಲಾಗಿದೆ.