ಚೆನ್ನೈ: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಜೀವಕ್ಕೆ ಆಪತ್ತು ಇರುವ ಹಿನ್ನಲೆ ಅವರಿಗೆ ವೈ ಪ್ಲಸ್ ಭದ್ರತೆಯನ್ನು ಒದಗಿಸಲಾಗಿದೆ.
ಕರ್ನಾಟಕದಲ್ಲಿ ದಿಟ್ಟ ಅಧಿಕಾರಿ ಎಂದು ಹೆಸರು ಮಾಡಿದ್ದ ಅಣ್ಣಾಮಲೈ, ಪೊಲೀಸ್ ವೃತ್ತಿ ಜೀವನಕ್ಕೆ ರಾಜೀನಾಮೆ ನೀಡಿದ ಬಳಿಕ ತಮಿಳುನಾಡು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ತಮಿಳು ನಾಡು ಬಿಜೆಪಿ ಘಟಕದ ಉಪಾಧ್ಯಕರಾಗಿರುವ ಅವರು ಸದ್ಯ ವಿಧಾನಸಭಾ ಚುನಾವಣೆ ಹಿನ್ನಲೆ ಭರ್ಜರಿ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಈ ನಡುವೆ ಅವರ ಜೀವಕ್ಕೆ ಬೆದರಿಕೆ ಇರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಕೆಲವು ತಿಂಗಳಿನಿಂದ ನನಗೆ ಬೆದರಿಕೆ ಕರೆಗಳು ಬರುತ್ತಿದೆ. ಈ ಹಿನ್ನಲೆ ಭದ್ರತೆಯನ್ನು ಪೊಲೀಸರು ನೀಡಿದ್ದಾರೆ ಎಂದು ಮಾಜಿ ಐಪಿಎಸ್ ಅಧಿಕಾರಿ , ಬಿಜೆಪಿ ನಾಯಕ ಅಣ್ಣಾ ಮಲೈ ತಿಳಿಸಿದ್ದಾರೆ. ಅಣ್ಣಾಮಲೈಗೆ ಕೆಲ ಮಾವೋವಾದಿ ಮತ್ತು ಪಿಎಫ್ಐ ಗುಂಪುಗಳಿಂದ ಬೆದರಿಕೆ ಬರುತ್ತಿದೆ ಎಂದು ವರದಿ ಮಾಡಿದೆ. ಅಣ್ಣಾಮಲೈ ಅವರಿಗೆ ವೈ ಪ್ಲಸ್ ಭದ್ರತೆ ನೀಡಿರುವ ಹಿನ್ನಲೆ ಅವರ ಭದ್ರತೆಗೆ 11 ಜನ ಕಮಾಂಡೋಗಳು ಮತ್ತು ಇಬ್ಬರು ಗನ್ ಮ್ಯಾನ್, ಅವರ ನಿವಾಸಕ್ಕೆ ಒಬ್ಬರು ಭದ್ರತೆ ನಿಯೋಜಿಸಲಾಗಿದೆ.
ಕರ್ನಾಟಕದ ಸಿಂಗಂ ಎಂದೇ ಗುರುತಿಸಿ ಕೊಂಡಿದ್ದ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ನೇರ ದಿಟ್ಟ ಆಡಳಿತದಿಂದ ಜನ ಮನ್ನಣೆ ಪಡೆದಿ ದ್ದರು. 10 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಬಳಿಕ ಅವರು ಮೇ 2019ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಬಳಿಕ ಬಿಜೆಪಿ ಪಕ್ಷ ಸೇರಿದ ಅವರು ತಮಿಳುನಾಡಿನಲ್ಲಿ ಸಕ್ರಿಯ ರಾಜಕಾರಣಿಯಾಗಿ ಗುರಿತಿಸಿಕೊಳ್ಳುತ್ತಿದ್ದಾರೆ.