Thursday, 12th December 2024

ಕೇಂದ್ರ ಮಾಹಿತಿ ಆಯೋಗಕ್ಕೆ ಯಶ್‌ವರ್ಧನ್‌ ಕುಮಾರ್ ಸಿನ್ಹಾ ಮುಖ್ಯ ಆಯುಕ್ತ

ನವದೆಹಲಿ: ಹಾಲಿ ಮಾಹಿತಿ ಆಯುಕ್ತ ಯಶ್‌ವರ್ಧನ್‌ ಕುಮಾರ್ ಸಿನ್ಹಾ ಅವರನ್ನು ಕೇಂದ್ರ ಮಾಹಿತಿ ಆಯೋಗದ ಮುಖ್ಯ ಆಯುಕ್ತರಾಗಿ ನೇಮಕ ಮಾಡಲಾಗಿದೆ ಎಂದು ಶನಿವಾರ ಪ್ರಕಟಣೆ ತಿಳಿಸಿದೆ.

ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಯಶ್‌ವರ್ಧನ್‌ ಕುಮಾರ್‌ ಸಿನ್ಹಾ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ಹಿಂದೆ ಮುಖ್ಯ ಆಯುಕ್ತರಾಗಿದ್ದ ಬಿಮಲ್ ಜುಲ್ಕಾ ಅವರ ಅಧಿಕಾರಾವಧಿ ಆಗಸ್ಟ್‌ 26ಕ್ಕೆ ಕೊನೆಗೊಂಡಿತ್ತು. ಇದಾದ ಎರಡು ತಿಂಗಳವರೆಗೆ ಹುದ್ದೆ ಖಾಲಿ ಇತ್ತು. ಮಾಜಿ ರಾಜತಾಂತ್ರಿಕ ಅಧಿಕಾರಿ ಸಿನ್ಹಾ ಅವರು, 2019ರ ಜನವರಿ 1ರಂದು ಮಾಹಿತಿ ಆಯುಕ್ತ ರಾಗಿ ನೇಮಕವಾಗಿದ್ದರು. ಅವರು ಬ್ರಿಟನ್ ಮತ್ತು ಶ್ರೀಲಂಕಾದಲ್ಲಿ ಭಾರತದ ಹೈಕಮಿಷನರ್‌ ಆಗಿ ಸೇವೆ ಸಲ್ಲಿಸಿದ್ದಾರೆ.

ಮುಖ್ಯ ಮಾಹಿತಿ ಆಯುಕ್ತರಾಗಿ ನೇಮಕಗೊಂಡಿರುವ ಸಿನ್ಹಾ ಅವರ ಅಧಿಕಾರಾವಧಿ ಮೂರು ವರ್ಷಗಳು. ಸಿಐಸಿ ಮತ್ತು ಮಾಹಿತಿ ಆಯುಕ್ತರನ್ನು ಐದು ವರ್ಷಗಳ ಅವಧಿಗೆ ಅಥವಾ 65 ವರ್ಷ ತುಂಬುವವರೆಗೆ ನೇಮಕ ಮಾಡಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೂವರು ಸದಸ್ಯರ ಸಮಿತಿ ಸಿನ್ಹಾ ಅವರನ್ನು ಈ ಹುದ್ದೆಗೆ ಶಿಫಾರಸು ಮಾಡಿತ್ತು. ಸಮಿತಿಯಲ್ಲಿ ಪ್ರಧಾನಿ ಅವರ ಜತೆಗೆ, ಲೋಕಸಭೆಯ ಕಾಂಗ್ರೆಸ್‌ ಮುಖಂಡ ಅಧೀರ್ ರಂಜನ್ ಚೌಧರಿ ಮತ್ತು ಗೃಹ ಸಚಿವ ಅಮಿತ್ ಶಾ ಸದಸ್ಯರಾಗಿದ್ದಾರೆ.