Monday, 16th December 2024

Year Ender 2024: ಲೋಕಸಭಾ ಚುನಾವಣೆಯಿಂದ ಅರವಿಂದ ಕೇಜ್ರಿವಾಲ್‌ ರಾಜೀನಾಮೆವರೆಗೆ; ಈ ವರ್ಷದ ಟಾಪ್‌ 10 ರಾಜಕೀಯ ಘಟನಾವಳಿಗಳಿವು

Year Ender 2024

ಹೊಸದಿಲ್ಲಿ: 2024ರ ಕೊನೆಯ ಭಾಗದಲ್ಲಿದ್ದೇವೆ. ಈಗ ಹಿಂದಿರುಗಿ ನೋಡಿದಾಗ ಈ ವರ್ಷ ಭಾರತೀಯ ರಾಜಕೀಯ ರಂಗ ಹಲವು ಬೆಳವಣಿಗೆಗೆ ಸಾಕ್ಷಿಯಾಗಿರುವುದು ಕಂಡು ಬಂದಿದೆ. ಲೋಕಸಭಾ ಚುನಾವಣೆ, ಮಹಾರಾಷ್ಟ್ರ, ಹರಿಯಾಣ, ಒಡಿಶಾ, ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ ಇತ್ಯಾದಿ 2024ರಲ್ಲಿ ದೇಶಾದ್ಯಂತ ಸದ್ದು ಮಾಡಿವೆ. ಈ ವರ್ಷದ ಪ್ರಮುಖ 10 ರಾಜಕೀಯ ಘಟನೆಗಳ ವಿವರ ಇಲ್ಲಿದೆ (Year Ender 2024).

ಲೋಕಸಭಾ ಚುನಾವಣೆ

2024ರ ಏ. 19ರಿಂದ ಜೂ. 1ರವರೆಗೆ 7 ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಿತು. ಸತತ 3ನೇ ಬಾರಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಮರಳಿದರೂ ಕಮಲ ಪಡೆ ಅಂದುಕೊಳ್ಳುವಷ್ಟು ಸೀಟು ಪಡೆದುಕೊಳ್ಳಲಿಲ್ಲ. ʼಅಬ್‌ ಕಿ ಬಾರ್ 400 ಪಾರ್ʼ ಎಂದೇ ಬಿಜೆಪಿ ಹೇಳಿಕೊಂಡು ಪ್ರಚಾರ ನಡೆಸಿತ್ತು. ಬಿಜೆಪಿಯೊಂದೇ 400 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಕೇಸರಿ ಪಡೆಯ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಫಲಿತಾಂಶ ಹೊರಬಂದಾಗ ಬಿಜೆಪಿಗೆ ಬಹುದೊಡ್ಡ ಆಘಾತ ಎದುರಾಗಿತ್ತು. ಬಿಜೆಪಿ ಬಿಟ್ಟು ಎನ್‌ಡಿಎಗೆ ಕೂಡ 400 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಬಿಜೆಪಿ 240 ಸೀಟು ಗಳಿಸಿಲಷ್ಟೇ ಶಕ್ತವಾಯಿತು. 543 ಲೋಕಸಭಾ ಕ್ಷೇತ್ರಗಳ ಪೈಕಿ ಎನ್‌ಡಿಎ 292 ಕಡೆ ಜಯಗಳಿಸಿ ಸರಳ ಬಹುಮತ ಪಡೆದು ಮತ್ತೆ ಸರ್ಕಾರ ರಚಿಸಿತು. ಸತತ 3ನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಆಯ್ಕೆಯಾದರು. ಇತ್ತ ವಿಪಕ್ಷಗಳ ʼಇಂಡಿಯಾʼ ಒಕ್ಕೂಟ 234 ಕ್ಷೇತ್ರಗಳನ್ನು ಗೆದ್ದುಕೊಂಡಿತು.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ

ಇಡೀ ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ಮತ್ತೆ ಆಡಳಿತದ ಚುಕ್ಕಾಣಿ ಹಿಡಿಯಿತು. 288 ಸ್ಥಾನಗಳ ಪೈಕಿ ಮಹಾಯುತಿ ಮೈತ್ರಿಕೂಟ 235 ಸ್ಥಾನಗಳಲ್ಲಿ ಜಯ ಗಳಿಸಿ ಐತಿಹಾಸಿಕ ಸಾಧನೆ ಮಾಡಿತು. ಈ ಪೈಕಿ ಬಿಜೆಪಿ 132 ಸ್ಥಾನಗಳನ್ನು ಗೆಲ್ಲುವ ಮೂಲಕ ಮುನ್ನಡೆ ಸಾಧಿಸಿತು. ಶಿಂಧೆ ಅವರ ಶಿವ ಸೇನೆ 57 ಸ್ಥಾನಗಳನ್ನು ಗೆದ್ದರೆ, ಅಜಿತ್ ಪವಾರ್ ಅವರ ಎನ್‌ಸಿಪಿ 41 ಸ್ಥಾನಗಳನ್ನು ಪಡೆದುಕೊಂಡಿತು. ಇನ್ನು ಕಾಂಗ್ರೆಸ್‌ ನೇತೃತ್ವದ ಮಹಾ ವಿಕಾಸ್ ಅಘಾಡಿ 54 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇದರಲ್ಲಿ ಶಿವಸೇನೆ (ಉದ್ಧವ್) 20 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 16 ಮತ್ತು ಎನ್‌ಸಿಪಿ (ಶರದ್) 10 ಸ್ಥಾನಗಳನ್ನು ಗೆದ್ದುಕೊಂಡಿತು. ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಫಡ್ನವೀಸ್‌ ಮತ್ತು ಉಪಮುಖ್ಯಮಂತ್ರಿಗಳಾಗಿ ಅಜಿತ್‌ ಪವಾರ್‌ ಮತ್ತು ಏಕನಾಥ ಶಿಂಧೆ ಆಯ್ಕೆಯಾದರು.

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ

ಸುಮಾರು 1 ದಶಕಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆಯಿತು. ರಾಜ್ಯದ ವಿಶೇಷ ಸ್ಥಾನಮಾನ ಆರ್ಟಿಕಲ್‌ 370 ಹಿಂಪಡೆದ ನಂತರ ಮೊದಲ ಚುನಾವಣೆ ಇದಾಗಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡ ಒಮರ್‌ ಅಬ್ದುಲ್ಲಾ ನೇತೃತ್ವದ ನ್ಯಾಷನಲ್‌ ಕಾನ್ಫರೆನ್ಸ್‌ 90 ಸೀಟುಗಳ ಪೈಕಿ ಬರೋಬ್ಬರಿ 49 ಸ್ಥಾನಗಳನ್ನು ಪಡೆದುಕೊಂಡಿತು. ಇನ್ನು ಬಿಜೆಪಿ 29 ಮತ್ತು ಪಿಡಿಪಿ 3 ಕಡೆ ಜಯ ಗಳಿಸಿತು. ಮುಖ್ಯಮಂತ್ರಿಯಾಗಿ ಒಮರ್‌ ಅಬ್ದುಲ್ಲಾ ನೇಮಕಗೊಂಡರು.

ಹರಿಯಾಣ ವಿಧಾನಸಭಾ ಚುನಾವಣೆ

ರಾಜಕೀಯವಾಗಿ ಮಹತ್ವ ಪಡೆದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಮಾಲ್‌ ಮಾಡಿದ ಬಿಜೆಪಿ 3ನೇ ಬಾರಿಗೆ ಅಧಿಕಾರ ಹಿಡಿಯಿತು. ರಾಜ್ಯದ 90 ವಿಧಾನಸಭಾ ಸ್ಥಾನಗಳ ಪೈಕಿ ಬಿಜೆಪಿ 48ರಲ್ಲಿ ಜಯಗಳಿಸಿದರೆ, ಕಾಂಗ್ರೆಸ್ 37 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತು. ಬಿಜೆಪಿ ನಾಯಕ ನಯಾಬ್ ಸಿಂಗ್ ಸೈನಿ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.

ಹೇಮಂತ್‌ ಸೊರೆನ್‌ ಬಂಧನ ಮತ್ತು ಜಾರ್ಖಂಡ್‌ ವಿಧಾನಸಭಾ ಚುನಾವಣೆ

ಜಾರ್ಖಂಡ್‌ನಲ್ಲಿ ಈ ವರ್ಷ ಕೆಲವು ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆದವು. ಜಾರ್ಖಂಡ್‌ ಮುಕ್ತಿ ಮೋರ್ಛಾ ನಾಯಕ, ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ ಅವರನ್ನು ವರ್ಷಾರಂಭದಲ್ಲಿ ಅಕ್ರಮದ ಆರೋಪದ ಮೇಲೆ ಬಂಧಿಸಲಾಯಿತು. ಜಾಮೀನು ಪಡೆದು ಹೊರಬಂದ ಅವರು ಬಳಿಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರು. ಚುನಾವಣೋತ್ತರ ಸಮೀಕ್ಷೆಯನ್ನೆಲ್ಲ ತಲೆಕೆಳಗಾಗಿಸಿ ಜೆಎಂಎಂ ಜಾರ್ಖಂಡ್‌ನಲ್ಲಿ ಮತ್ತೆ ಅಧಿಕಾರಕ್ಕೆ ಮರಳಿತು. ಜೆಎಂಎಂ ನೇತೃತ್ವದ ʼಇಂಡಿಯಾʼ ಮೈತ್ರಿಕೂಟವು 81 ಸ್ಥಾನಗಳಲ್ಲಿ ಒಟ್ಟು 56 ಸ್ಥಾನಗಳನ್ನು ಗೆದ್ದುಕೊಂಡಿತು. ಆ ಮೂಲಕ ಹೇಮಂತ್‌ ಸೊರೆನ್‌ ಮತ್ತೆ ಸಿಎಂ ಆಗಿ ಆಯ್ಕೆಯಾದರು.

ಅರವಿಂದ್‌ ಕೇಜ್ರಿವಾಲ್‌ ರಾಜೀನಾಮೆ

ಈ ವರ್ಷ ದಿಲ್ಲಿಯಂತೂ ರಾಜಕೀಯ ಹೈಡ್ರಾಮಕ್ಕೆ ಸಾಕ್ಷಿಯಾಯಿತು. ದಿಲ್ಲಿ ಮುಖ್ಯಮಂತ್ರಿಯಾಗಿದ್ದ ಆಮ್‌ ಆದ್ಮಿ ಪಾರ್ಟಿಯ ನಾಯಕ ಅರವಿಂದ್‌ ಕೇಜ್ರಿವಾಲ್‌ ಅವರನ್ನು ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜಾರಿ ನಿರ್ದೇಶನಾಲಯ (Enforcement Directorate)ದ ತಂಡ ಮಾರ್ಚ್‌ನಲ್ಲಿ ಬಂಧಿಸಿತ್ತು. ಜಾಮೀನು ಮೂಲಕ ಹೊರಬಂದ ಅವರು ಸೆ. 17ರಂದು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು. ಸಚಿವೆಯಾಗಿದ್ದ ಅತಿಶಿ ಸಿಎಂ ಆಗಿ ಆಯ್ಕೆಯಾದರು.

ಮಣಿಪುರ ಸಂಘರ್ಷ

ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸೆ ಈ ವರ್ಷ ಇನ್ನಷ್ಟು ವಿವಾದಗಳನ್ನು ಹುಟ್ಟುಹಾಕಿತು. ಈ ಹಿಂಸೆಯಲ್ಲಿ ನೂರಾರು ಜನರು ಸಾವನ್ನಪಿದ್ದು ಹಾಗೂ ಹಿಂಸೆ ಎಲ್ಲಾ ಕಡೆ ವ್ಯಾಪಿಸಿದ್ದು ಪ್ರಮುಖ ಸುದ್ದಿಯಾಗಿದೆ. ಇಲ್ಲಿ ಹಿಂಸೆಯನ್ನು ಸರಿಯಾಗಿ ನಿಯಂತ್ರಿಸುವಲ್ಲಿ ಅಲ್ಲಿನ ರಾಜ್ಯ ಸರಕಾರದ ವಿಫಲವಾಗಿದೆ ಎನ್ನುವ ಟೀಕೆ ವ್ಯಾಪಕವಾಗಿ ಕೇಳಿ ಬಂದಿದೆ. ಈ ಹಿಂಸಾಚಾರವನ್ನು ಸರಿಯಾಗಿ ನಿಭಾಯಿಸುವಲ್ಲಿ ವಿಫಲವಾದ ಮಣಿಪುರ ಪೊಲೀಸ್ ವ್ಯವಸ್ಥೆಯ ಕುರಿತಾಗಿ ಸುಪ್ರೀಂ ಕೋರ್ಟ್ ಅಸಮಧಾನ ವ್ಯಕ್ತಪಡಿಸಿ ಮಧ್ಯ ಪ್ರವೇಶ ಮಾಡಬೇಕಾದ ಸ್ಥಿತಿಯೂ ನಿರ್ಮಾಣಗೊಂಡಿತು.

ಚೊಚ್ಚಲ ಪ್ರಯತ್ನದಲ್ಲೇ ಸಂಸದೆಯಾದ ಪ್ರಿಯಾಂಕಾ ಗಾಂಧಿ

ಗಾಂಧಿ ಕುಟುಂಬ ಮತ್ತೊಬ್ಬ ಸದಸ್ಯೆ ಕೂಡ ಈ ವರ್ಷ ಸಂಸತ್‌ ಪ್ರಶೀಸಿದರು. ಹೌದು, ಕೆಲವು ವರ್ಷಗಳಿಂದ ಸಕ್ರಿಯ ರಾಜಕೀಯದಲ್ಲಿದ್ದ ಕಾಂಗ್ರೆಸ್‌ ನಾಯಕಿ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಕೇರಳದ ವಯನಾಡು ಲೋಕಸಭಾ ಉಪ ಚುನಾವಣೆಯಲ್ಲಿ ಅವರು ದಾಖಲೆಯ ಅಂತರದಿಂದ ಗೆದ್ದು ಮೊದಲ ಪ್ರಯತ್ನದಲ್ಲೇ ಸಂಸದೆಯಾಗಿ ಆಯ್ಕೆಗೊಂಡರು.

ಉತ್ತರ ಪ್ರದೇಶದಲ್ಲಿ ಮತ್ತೆ ಗೆಲುವಿನ ನಗೆ ಬೀರಿದ ರಾಹುಲ್‌ ಗಾಂಧಿ

ಈ ವರ್ಷದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೇರಳದ ವಯನಾಡು ಮತ್ತು ಉತ್ತರ ಪ್ರದೇಶದ ರಾಯ್‌ ಬರೇಲಿಯಲ್ಲಿ ಸ್ಪರ್ಧಿಸಿ ಎರಡೂ ಕಡೆ ಜಯ ಗಳಿಸಿದರು. ಕಳೆದ ಬಾರಿ ಉತ್ತರ ಪ್ರದೇಶದಲ್ಲಿ ಸೋತಿದ್ದ ಅವರು ಅಲ್ಲಿ ಗೆಲುವು ದಾಖಲಿಸಿದರು. ಈ ಪೈಕಿ ವಯನಾಡಿಗೆ ರಾಜೀನಾಮೆ ಸಲ್ಲಿಸಿ, ರಾಯ್‌ ಬರೇಲಿ ಸ್ಥಾನವನ್ನು ಉಳಿಸಿಕೊಂಡರು.

ನವೀನ್ ಪಟ್ನಾಯಕ್ ಸೋಲು

ಒಡಿಶಾದ ಜನಪ್ರಿಯ ರಾಜಕಾರಣಿ ಎಂದೇ ಕರೆಯಲ್ಪಡುವ ನವೀನ್ ಪಟ್ನಾಯಕ್ ಅವರು ಈ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ಆ ಮೂಲಕ ಅವರ 24 ವರ್ಷಗಳ ಸುದೀರ್ಘ ಆಡಳಿತವನ್ನು ಕೊನೆಗೊಂಡಿತು. ಒಡಿಶಾ ವಿಧಾನಸಭೆಯ ಒಟ್ಟು 147 ಸ್ಥಾನಗಳಲ್ಲಿ 78 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಪಟ್ನಾಯಕ್‌ ನೇತೃತ್ವದ ಬಿಜೆಡಿ ಕೇವಲ 51 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ಬಿಜೆಪಿಯ ಮೋಹನ್ ಚರಣ್ ಮಾಝಿ ಅವರನ್ನು ಒಡಿಶಾದ ಮುಖ್ಯಮಂತ್ರಿಯಾಗಿ ನೇಮಕಗೊಂಡರು.

ಈ ಸುದ್ದಿಯನ್ನೂ ಓದಿ: 2024 Political Recap: 2024ರಲ್ಲಿ ಹೇಗಿತ್ತು ಇಂಡಿಯನ್ ಪಾಲಿಟಿಕ್ಸ್ – ಇಲ್ಲಿದೆ ಮಹತ್ತರ ಘಟನೆಗಳ ಸುದ್ದಿ ವಿಶ್ಲೇಷಣೆ