Saturday, 14th December 2024

ಟಿಎಂಸಿ ಪಕ್ಷದ ಉಪಾಧ್ಯಕ್ಷರಾಗಿ ಯಶವಂತ್ ಸಿನ್ಹಾ ನೇಮಕ

ಕೋಲ್ಕತ್ತ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರನ್ನು ಸೋಮವಾರ ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಟಿಎಂಸಿ ಸೇರಿದ ಎರಡು ದಿನಗಳೊಳಗೆ ಯಶವಂತ್ ಸಿನ್ಹಾ ಅವರಿಗೆ ಟಿಎಂಸಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯತ್ವ ನೀಡಲಾಗಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿದ್ದ ಮಾಜಿ ಬಿಜೆಪಿ ನಾಯಕ ಯಶವಂತ್ ಸಿನ್ಹಾ, ಶನಿವಾರ ಟಿಎಂಸಿ ಪಕ್ಷ ಸೇರಿದ್ದರು. ನಂದಿಗ್ರಾಮದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ನಡೆದ ಅಪರಿಚಿತರ ದಾಳಿಯ ಘಟನೆಯು ತಮ್ಮನ್ನು ಮತ್ತೆ ರಾಜಕೀಯಕ್ಕೆ ಮರಳಲು ಪ್ರೇರೇಪಿಸಿತ್ತು ಎಂದು ಹೇಳಿದ್ದರು. 83 ವರ್ಷದ ಯಶವಂತ ಸಿನ್ಹಾ 2018ರಲ್ಲಿ ಬಿಜೆಪಿ ಪಕ್ಷವನ್ನು ತೊರೆದಿದ್ದರು.

ಮಾ.10ರಂದು ನಂದಿಗ್ರಾಮದಲ್ಲಿ ಚುನಾವಣೆ ಅಭಿಯಾನದ ವೇಳೆ ಅಪರಿಚಿತರು ತಳ್ಳಿದ ಪರಿಣಾಮ ಮಮತಾ ಬ್ಯಾನರ್ಜಿ ಎಡ ಗಾಲಿಗೆ ನೋವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಚುನಾವಣಾ ಆಯೋಗಕ್ಕೆ ಈ ಕುರಿತು ದೂರು ನೀಡಲಾಗಿದ್ದರೂ ಮಮತಾ ಮೇಲಿನ ದಾಳಿಯ ಆರೋಪವನ್ನು ಚುನಾವಣಾ ಆಯೋಗವು ತಳ್ಳಿ ಹಾಕಿದೆ.

ಕ್ಷಣ ಕ್ಷಣ ಸುದ್ದಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ.

https://www.facebook.com/Vishwavanidaily