Sunday, 17th November 2024

Yogi Adityanath: ಪ್ರವಾದಿ ಪೈಗಂಬರ್‌ ಅವಹೇಳನ; ಎಚ್ಚರಿಕೆ ಕೊಟ್ಟ ಸಿಎಂ ಯೋಗಿ

Yogi adityanath

ಲಕ್ನೋ: ಪ್ರವಾದಿ ಮೊಹಮ್ಮದ್ ಪೈಗಂಬರರ (Prophet Mohammad) ವಿರುದ್ಧ ಧರ್ಮಗುರು ಯತಿ ನರಸಿಂಹಾನಂದ(Yati Narsinghanand) ಅವರ ವಿವಾದಾತ್ಮಕ ಹೇಳಿಕೆ(Controversial statement) ಬಗ್ಗೆ ಭಾರೀ ಪರ ವಿರೋಧ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಅವರು ಈ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಯಾವುದೇ ಧರ್ಮ ಅಥವಾ ನಂಬಿಕೆಯ ಸಂತರು ಮತ್ತು ಪುರೋಹಿತರ ವಿರುದ್ಧ ಅವಹೇಳನಕಾರಿ ಹೇಳಿಕೆಗಳು ಸ್ವೀಕಾರಾರ್ಹವಲ್ಲ ಮತ್ತು ಅದಕ್ಕೆ ಕಾರಣರಾದವರನ್ನು ಶಿಕ್ಷಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತಿಯೊಂದು ನಂಬಿಕೆ ಮತ್ತು ಪಂಥವನ್ನು ಗೌರವಿಸಬೇಕು ಎಂಬ ಅಂಶವನ್ನು ಒತ್ತಿ ಹೇಳಿದ ಯೋಗಿ ಆದಿತ್ಯನಾಥ್, “ಯಾವುದೇ ವ್ಯಕ್ತಿ ನಂಬಿಕೆಯನ್ನು ಹಾಳುಮಾಡಿದರೆ, ಮಹಾಪುರುಷರು, ದೇವತೆಗಳು, ಪಂಥ ಇತ್ಯಾದಿಗಳ ನಂಬಿಕೆಯ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದರೆ, ಅವರನ್ನು ಕಾನೂನಿನ ವ್ಯಾಪ್ತಿಗೆ ತರಲಾಗುವುದು ಮತ್ತು ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಎಲ್ಲಾ ಪಂಗಡಗಳು, ಧರ್ಮಗಳ ಜನರು ಪರಸ್ಪರ ಗೌರವ ತೋರಬೇಕು ಎಂದು ಕರೆ ನೀಡಿದ್ದಾರೆ.

ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿ, ಡಿಜಿಪಿ ಹಾಗೂ ಇತರ ಅಧಿಕಾರಿಗಳೊಂದಿಗೆ ಕಾನೂನು ಸುವ್ಯವಸ್ಥೆ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಈ ಹೇಳಿಕೆ ನೀಡಿದ್ದಾರೆ. ಇನ್ನು ಪ್ರತಿಭಟನೆಯ ಹೆಸರಿನಲ್ಲಿ ಅರಾಜಕತೆ, ವಿಧ್ವಂಸಕತೆ ಅಥವಾ ಬೆಂಕಿ ಹಚ್ಚುವುದನ್ನು ಸಹಿಸಲಾಗುವುದಿಲ್ಲ. ಈ ಕೃತ್ಯ ಎಸಗುವವರು ಅದಕ್ಕೆ ಸೂಕ್ತ ಬೆಲೆ ತೆರಬೇಕಾಗುತ್ತದೆ ಎಂದು ಆದಿತ್ಯನಾಥ್ ಹೇಳಿದ್ದಾರೆ.

ಏನಿದು ವಿವಾದ?

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯತಿ ನರಸಿಂಹಾನಂದ ಅವರು, ಪ್ರತಿ ದಸರಾಕ್ಕೆ ರಾವಣನನ್ನು ಸುಡುವುದಾದರೆ ಇನ್ನು ಮುಂದೆ ಮೊಹಮ್ಮದ್‌ ಪೈಗಂಬರರ ಮೂರ್ತಿಯನ್ನು ಸುಟ್ಟು ಹಾಕಿ ಎಂದು ಕರೆ ನೀಡಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲಾಗುತ್ತಿದ್ದಂತೆ ಮುಸ್ಲಿಂ ಸಮುದಾಯದಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಈ ಸುದ್ದಿಯನ್ನೂ ಓದಿ: Stone pelting: ಭಾರೀ ಕಲ್ಲು ತೂರಾಟ; 21 ಪೊಲೀಸರಿಗೆ ಗಂಭೀರ ಗಾಯ