ಮುಂಬೈ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath ) ಅವರಿಗೆ ಬೆದರಿಕೆ ಹಾಕಿದ್ದು 10 ದಿನಗಳೊಳಗೆ ಸಿಎಂ ಸ್ಥಾನದಿಂದ ಕೆಳಗಿಳಿಯದಿದ್ದರೆ ಬಾಬಾ ಸಿದ್ಧಿಕಿ ಕೊಲೆ ಮಾಡಿದ ರೀತಿಯಲ್ಲಿ ನಿಮ್ಮನ್ನೂ ಕೊಲೆ (Death Threat) ಮಾಡುತ್ತೇವೆ ಎಂದು ಬೆದರಿಕೆ ಸಂದೇಶಕ್ಕೆ ಸಂಬಂಧಿಸಿದಂತೆ 24 ವರ್ಷದ ಯುವತಿಯನ್ನು ಬಂಧಿಸಲಾಗಿದೆ.
ಬಂಧಿತ ಮಹಿಳೆಯನ್ನು ಫಾತಿಮಾ ಖಾನ್ ಎಂದು ಗುರುತಿಸಲಾಗಿದೆ. ಮಾಹಿತಿ ತಂತ್ರಜ್ಞಾನದಲ್ಲಿ(Information Technology) ಬಿಎಸ್ಸಿ ಮಾಡಿರುವ ಫಾತಿಮಾ ಖಾನ್ ತನ್ನ ಕುಟುಂಬ ಸದಸ್ಯರೊಂದಿಗೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸ್‌ನಗರ ಪ್ರದೇಶದಲ್ಲಿ ನೆಲೆಸಿದ್ದಾಳೆ ಎಂಬುದು ತಿಳಿದಿದೆ. ತನಿಖೆಯಲ್ಲಿ ಆಕೆ ಮಾನಸಿಕ ರೋಗದಿಂದ ಬಳಲುತ್ತಿದ್ದಾಳೆ ಎಂದು ತಿಳಿದು ಬಂದಿದೆ.
ಆರೋಪಿ ಫಾತಿಮಾ ಮುಂಬೈ ನಗರ ಪೊಲೀಸ್ ಟ್ರಾಫಿಕ್ ಕಂಟ್ರೋಲ್ ರೂಂಗೆ ಬೆದರಿಕೆ ಸಂದೇಶ ಕಳುಹಿಸಿದ್ದಳು. ಸಂದೇಶದಲ್ಲಿ “ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬೆದರಿಕೆ ಹಾಕಿದ್ದು 10 ದಿನಗಳೊಳಗೆ ಸಿಎಂ ಸ್ಥಾನದಿಂದ ಕೆಳಗಿಳಿಯದಿದ್ದರೆ ಬಾಬಾ ಸಿದ್ಧಿಕಿ ಕೊಲೆ ಮಾಡಿದ ರೀತಿಯಲ್ಲಿ ನಿಮ್ಮನ್ನೂ ಕೊಲೆ ಮಾಡುತ್ತೇವೆ ಎಂದು ಕಳುಹಿಸಿದ್ದಳು.
ಅಕ್ಟೋಬರ್ 12 ರಂದು ಎನ್‌ಸಿಪಿ ನಾಯಕ ಬಾಬಾ ಸಿದ್ಧಿಕಿ ಅವರನ್ನು ಅವರ ಮಗನ ಕಚೇರಿಯೆದುರೇ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ಕೊಲೆಯ ಹೊಣೆಯನ್ನು ಹೊತ್ತು ಕೊಂಡಿದೆ. ಕೊಲೆಗೆ ಸಂಬಂಧಿಸಿದಂತೆ ಈಗಾಗಲೇ ಹಲವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬಾಬಾ ಸಿದ್ದಿಕಿ ಹತ್ಯೆಯ ಬಳಿಕ ಸಲ್ಮಾನ್ ಖಾನ್‌ಗೆ ಹಲವು ಜೀವ ಬೆದರಿಕೆ ಬಂದಿವೆ. ತಾನು ಬಿಷ್ಣೋಯ್ ಗ್ಯಾಂಗ್ ಸದಸ್ಯ ಎಂದು ಹೇಳಿಕೊಂಡು ಮುಂಬೈ ಟ್ರಾಫಿಕ್ ಪೊಲೀಸರ ಸಹಾಯವಾಣಿಗೆ ಬೆದರಿಕೆ ಸಂದೇಶ ಕಳುಹಿಸಿದ್ದವನ್ನು ಪೊಲೀಸರು ಬಂಧಿಸಿದ್ದಾರೆ. ಆತ ಸಂದೇಶದಲ್ಲಿ , ಸಲ್ಮಾನ್ ಖಾನ್ ಬಿಷ್ಣೋಯ್ ಸಮಾಜದವರಿಗೆ ಕ್ಷಮೆ ಕೇಳಬೇಕು ಹಾಗೂ ಐದು ಕೋಟಿ ರೂ. ಪರಿಹಾರ ನೀಡಬೇಕು. ಸಲ್ಮಾನ್ ಒಂದು ವೇಳೆ ನೀಡದಿದ್ದರೆ ಬಾಬಾ ಸಿದ್ದಿಕಿಗೆ ಆದ ಗತಿಯೇ ಈತನಿಗೂ ಆಗಲಿದೆ ಎಂದು ಹೇಳಿದ್ದ.
ನಂತರ ಜಾರ್ಖಂಡನ ವ್ಯಕ್ತಿಯೊಬ್ಬ ಬೆದರಿಕೆ ಹಾಕಿ ಎರಡು ಕೋಟಿ ರೂ. ಗೆ ಬೇಡಿಕೆ ಇಟ್ಟಿದ್ದ. ಈ ಎಲ್ಲಾ ಘಟನೆಯ ನಂತರ ಸಲ್ಮಾನ್ ಖಾನ್‌ಗೆ ಭದ್ರತೆ ಹೆಚ್ಚಿಸಿದ್ದು, ಬೆಂಗಾವಲು ಪಡೆಯನ್ನು ನೀಡಲಾಗಿದೆ. ಅವರ ನಿವಾಸದ ಬಳಿ ಕಮಾಂಡೋ ಸೆಂಟರ್ ತೆಗೆದು ನಿಗಾ ವಹಿಸಲಾಗಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.
ಹಲವು ಬಾರಿ ಸಲ್ಮಾನ್ ಖಾನ್ ಹತ್ಯೆಯ ಸಂಚು ನಡೆದಿದ್ದು, ಲಾರೆನ್ಸ್ ಬಿಷ್ಣೋಯ್ ಹಾಗೂ ಅವನ ಸಹಚರರು ನಿರಂತರವಾಗಿ ಸಲ್ಮಾನ್ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ಹಮ್ ಸಾಥ್ ಸಾಥ್ ಹೇ ಚಿತ್ರದ ಚಿತ್ರೀಕರಣದ ವೇಳೆ ರಾಜಸ್ಥಾನದಲ್ಲಿ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬ ಆರೋಪ ಸಲ್ಮಾನ್ ಖಾನ್ ಮೇಲಿದ್ದು, ರಾಜಸ್ಥಾನ ಹೈ ಕೋರ್ಟ್ ಐದು ವರ್ಷದ ಶಿಕ್ಷೆಯನ್ನು ಪ್ರಕಟ ಮಾಡಿತ್ತು ನಂತರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಜಾಮೀನಿನ ಮೇಲೆ ಹೊರ ಬಂದರು. ಕೃಷ್ಣಮೃಗವನ್ನು ದೇವರ ಸಮಾನ ಎಂದು ಪೂಜಿಸುವ ಬಿಷ್ಣೋಯ್ ಸಮಾಜದವರ ಕೋಪಕ್ಕೆ ಗುರಿಯಾಗಿದ್ದಾರೆ.