ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂಪುಟ ವಿಸ್ತರಣೆಗೆ ಮುಂದಾಗಿ ದ್ದಾರೆ. ಭಾನುವಾರ ಸಂಜೆ 5.30ಕ್ಕೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದೆ.
ಚುನಾವಣೆ ಹತ್ತಿರ ಬರುತ್ತಿದ್ದಂತೆ ಯೋಗಿ ಆದಿತ್ಯನಾಥ್ ಅವರು ಚುನಾವಣಾ ಲಾಭಕ್ಕಾಗಿ ಈ ತಂತ್ರಗಾರಿಕೆ ನಡೆಸಿದ್ದಾರೆ ಎನ್ನಲಾಗಿದೆ. ಸುಮಾರು 10 ಮಂದಿ ಶಾಸಕರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇತ್ತೀಚೆಗೆ ಬಿಜೆಪಿ ಸೇರಿದ್ದ ರಾಹುಲ್ ಗಾಂಧಿಗೆ ಆಪ್ತರಾಗಿದ್ದ ಮಾಜಿ ಕಾಂಗ್ರೆಸ್ ನಾಯಕ ಜಿತಿನ್ ಪ್ರಸಾದ್ ಅವರು ಸಂಪುಟ ಸೇರಲಿದ್ದಾರೆ ಎನ್ನಲಾಗಿದೆ. ಬ್ರಾಹ್ಮಣ ಸಮುದಾಯದ ಪ್ರಮುಖ ನಾಯಕ ಜಿತಿನ್ ಪ್ರಸಾದ್ ಅವರ ಸೇರ್ಪಡೆ ಚುನಾವಣಾ ದೃಷ್ಟಿಯಿಂದ ಬಿಜೆಪಿಗೆ ದೊಡ್ಡ ಮುನ್ನಡೆ ಒದಗಿಸಲಿದೆ ಎನ್ನಲಾಗಿದೆ. ಬಿಜೆಪಿ ಮಿತ್ರ ಪಕ್ಷ ನಿಶಾದ್ ಪಾರ್ಟಿಯ ಸಂಜಯ್ ನಿಶಾದ್ ಕೂಡಾ ಯೋಗಿ ಸಂಪುಟ ಸೇರಲಿದ್ದಾರೆ.
2017ರ ಚುನಾವಣೆಯಲ್ಲಿ ಬಿಜೆಪಿ 325 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಸಮಾಜವಾದಿ ಮಿತ್ರ ಪಕ್ಷಗಳು 54 ಮತ್ತು ಬಿಎಸ್ ಪಿ 19 ಸೀಟು ಗೆದ್ದುಕೊಂಡಿತ್ತು.