Sunday, 15th December 2024

ಯುಪಿ ವಿಧಾನಸಭೆ ಚುನಾವಣೆ: ಯೋಗಿಗೆ ಆಜಾದ್‌ ಸ್ಪರ್ಧೆ ಒಡ್ಡಲಿದ್ದಾರೆ…

ಲಖನೌ: ದಲಿತ ನಾಯಕ, ಆಜಾದ್‌ ಸಮಾಜ ಪಾರ್ಟಿ (ಎಎಸ್‌ಪಿ) ಮುಖ್ಯಸ್ಥ ಚಂದ್ರಶೇಖರ್‌ ಆಜಾದ್‌ ಅವರು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿರುದ್ಧ ಗೋರಖ್‌ಪುರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಆಜಾದ್‌ ಅವರ ಸ್ಪರ್ಧೆ ಕುರಿತು ರಾಷ್ಟ್ರೀಯ ಕೋರ್ ಕಮಿಟಿ ಸದಸ್ಯ ಮೊಹಮ್ಮದ್ ಅಕಿಬ್ ಖಚಿತಪಡಿಸಿದ್ದು, ಪಕ್ಷದ ನೋಂದಾಯಿತ ಹೆಸರು ಆಜಾದ್ ಸಮಾಜ ಪಕ್ಷ ಎಂದು ತಿಳಿಸಿರುವುದಾಗಿ ವರದಿ ಮಾಡಿದೆ.

35 ವರ್ಷದ ಚಂದ್ರಶೇಖರ್‌ ಅವರು ಭೀಮ್ ಆರ್ಮಿ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. 2020ರ ಮಾರ್ಚ್‌ನಲ್ಲಿ ಆಜಾದ್‌ ಸಮಾಜ ಪಾರ್ಟಿಯನ್ನು ಆರಂಭಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಫೆಬ್ರುವರಿ 10ರಿಂದ ಮಾರ್ಚ್‌ 7ರವರೆಗೆ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯ ಲಿದೆ. ಗೋರಖ್‌ಪುರ ಕ್ಷೇತ್ರದಲ್ಲಿ ಮಾರ್ಚ್‌ 3ರಂದು ಮತದಾನ ನಡೆಯಲಿದ್ದು, ಮಾರ್ಚ್‌ 10ರಂದು ಫಲಿತಾಂಶ ಪ್ರಕಟವಾಗಲಿದೆ.

ಆಜಾದ್, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಮಾತುಕತೆ ನಡೆಸುತ್ತಿದ್ದರು. ಆದರೆ, ಫಲ ನೀಡಿಲ್ಲ. ‘ಸಮಾಜವಾದಿ ಪಕ್ಷವು ನಮಗೆ 100 ಸ್ಥಾನಗಳನ್ನು ನೀಡಿದರೂ ಅವರೊಂದಿಗೆ ಹೋಗುವುದಿಲ್ಲ. ಬಿಜೆಪಿಯನ್ನು ತಡೆಯುವ ನಿಟ್ಟಿನಲ್ಲಿ ಚುನಾವಣೆಯ ನಂತರ ಇತರೆ ಪಕ್ಷಗಳಿಗೆ ನಾವು ನೆರವಾಗಬಹುದು’ ಎಂದು ಹೇಳಿರುವುದಾಗಿ ವರದಿಯಾಗಿತ್ತು.