ಲಕ್ನೋ: ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ವಿಜಯ ಸಾಧಿಸಿದ ಯೋಗಿ ಆದಿತ್ಯನಾಥ್ ಅವರು ಸತತ ಎರಡನೇ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಮಾ.25ರಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಯೋಗಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಹಲವರು ಕೇಂದ್ರ ಸಚಿವರು ಭಾಗ ವಹಿಸಲಿದ್ದಾರೆ.
ಸ್ಟೇಡಿಯಂ ನಲ್ಲಿ 50 ಸಾವಿರ ಜನರು ಸೇರುವ ಸಾಮರ್ಥ್ಯವಿದ್ದು, 200 ಮಂದಿ ವಿವಿಐಪಿ ಅತಿಥಿಗಳು ಸೇರಲಿದ್ದಾರೆ ಎಂದು ವರದಿ ಯಾಗಿದೆ.
ಮೋದಿ, ಶಾ ಜೊತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಹಲವು ಪ್ರಭಾವಿ ವ್ಯಕ್ತಿಗಳು ಮಾರ್ಚ್ 25ರ ಸಂಜೆ 4 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 255 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಮಿತ್ರ ಪಕ್ಷ ಗಳೊಂದಿಗೆ ಬಿಜೆಪಿ 273 ಕ್ಷೇತ್ರಗಳ ಬಲ ಹೊಂದಿದ್ದು, ಎಸ್ ಪಿ ಮಿತ್ರ ಕೂಟ 125 ಕ್ಷೇತ್ರಗಳನ್ನು ಗೆದ್ದುಕೊಂಡಿದೆ.