Thursday, 12th December 2024

ಯುವ ಸಾಹಸಿಯ ಹೊಸ ದಾರಿ ಯಶೋಮಾರ್ಗವಾಗಲಿ

ವಾರದ ತಾರೆ: ಕುಪ್ಪುಸ್ವಾಮಿ ಅಣ್ಣಾಮಲೈ

ವಿಶೇಷ ಲೇಖನ: ವಿರಾಜ್ ಕೆ.ಅಣಜಿ

ಕೆಲವೊಬ್ಬರ ಬಗ್ಗೆೆ ಏನೇ ಬರೆದರೂ ಇದೆಲ್ಲ ಎಲ್ಲರಿಗೂ ಗೊತ್ತಿರುವ ಸಂಗತಿಯಲ್ಲವೇ ಎನಿಸುತ್ತದೆ, ನಿಲ್ಲಿಸಿದರೆ ಇನ್ನಷ್ಟು ಬರೆಯಬೇಕಿತ್ತಲ್ಲ ಎಂದು ಮನಸು ಕಿವುಚುತ್ತದೆ. ಈ ರೀತಿ ಭಾವ ಮೂಡಿಸಿದವರು ರಿಯಲ್ ಐಕಾನ್, ಸೇಫ್ ಜೋನ್ ಬಿಟ್ಟು ಕಡಪ: ಬದ್ವೇಲು ವಿಧಾನಸಭಾ ಕ್ಷೇತ್ರದ ಮಾಜಿ ಹೊಸದೊಂದು ಸಾಹಸಕ್ಕೆ ಧುಮುಕಿದ್ದ ಖಾಕಿ ಸಿಂಘಂ ಕುಪ್ಪುಸ್ವಾಮಿ ಅಣ್ಣಾಮಲೈ.

ಆ ಮೂರು ಘಟನೆಗಳು: ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಧಾರಾಕಾರ ಮಳೆ ಲೆಕ್ಕಿಸದೇ, ಕೆಸರಲ್ಲಿ ಸಿಲುಕಿದ್ದ ವಾಹನ ಗಳನ್ನು ಮೇಲೆತ್ತಲು ಯೋಧನಂತೆ ಹೊರಾಡುತ್ತಿದ್ದರು.

ಎರಡನೇಯದ್ದು, ಹೇಳದೇ ಕೇಳದೇ ರಸ್ತೆ ತಡೆಯಲು ನಿಮಗ್ಯಾರು ಪರ್ಮಿಷನ್ ಕೊಟ್ಟಿದ್ದು, ಏನ್ ತಿಳ್ಕೊಂಡಿದ್ದೀಯ ಪೊಲೀಸ್
ಅಂದ್ರೆ, ಹಲ್ಲು ಉದುರುಸ್ತಿನಿ, ಕಾನೂನು ಮೀರಿದ್ರೆ ಹುಷಾರ್ ಎಂದು ಸಿಂಹದಂತೆ ಘರ್ಜನೆ ಮಾಡುತ್ತಿದ್ದರು.

ಕೊನೆಯದ್ದು, ಒಂದು ದೊಡ್ಡ ಗುಂಪು ಏರು ದನಿಯಲ್ಲಿ ಮಾತನಾಡುವಾಗ, ಅವರೆದುರಿಗೆ ಧೈರ್ಯವಾಗಿ ನಿಂತು, ರೀ, ನಿಮ್ಮ
ಆ ಗೋರಿಗೆ ಏನಾದ್ರೂ ಆದ್ರೆ ನಾನ್ ಸರಿ ಮಾಡಿಸಿಕೊಡ್ತೀನಿ. ಆದ್ರೆ, ನನ್ ಪೊಲೀಸ್ ಸಿಬ್ಬಂದಿಗೆ ಜನರ ಗುಂಪಿಂದ ಏನಾದ್ರೂ
ಆಗಿದ್ದಿದ್ರೆ, ಅವರ ಮನೆಲಿ ನಾನು ಏನ್ ಹೇಳ್ಬೇಕಿತ್ತು? ನನ್ನ ಪೊಲೀಸ್ ಸಿಬ್ಬಂದಿ ಜೀವಕ್ಕೆ ನನ್ನಷ್ಟೇ ಬೆಲೆಯಿದೆ ತಿಳ್ಕೊೊಳ್ಳಿ, ಆ
ದನಿಯಲ್ಲಿ ಘರ್ಜನೆಯಿತ್ತು.

ಆ ದನಿ ಭಾರತೀಯ ಪೊಲೀಸ್ ಸೇವೆಯ ಅಧಿಕಾರಿ ಕೆ. ಅಣ್ಣಾಮಲೈ ಅವರದ್ದು. ಕೆಲವರು ತಾವಿದ್ದ ಕ್ಷೇತ್ರದಿಂದ ದೂರ ಸರಿದರೂ ಕೂಡ ಅವರೆಡೆಗೆ ಅಭಿಮಾನದ ತುಂತುರು ನಿಂತಿರುವುದೇ ಇಲ್ಲ. ಎಸ್.ಪಿ. ಸಾಂಗ್ಲಿಯಾನ, ಶಂಕರ ಬಿದರಿ, ಮಧುಕರ ಶೆಟ್ಟಿ ಯಂಥ ಹಲವು ಅಧಿಕಾರಿಗಳು ಈಗ ಸೇವೆಯಲ್ಲಿ ಇಲ್ಲದಿದ್ದರೂ ಅವರನ್ನು ಮಾಜಿ ಎನ್ನಲು ಅಭಿಮಾನ ಒಪ್ಪುವುದಿಲ್ಲ. ಅಂತಹದ್ದೇ ಸ್ಥಾನಕ್ಕೆ ಬರೀ 8 ವರ್ಷಗಳ ಸೇವೆಯಲ್ಲಿ ಏರಿದವರು ಅಣ್ಣಾಮಲೈ. ಪೊಲೀಸ್ ಪದವಿಯಿಂದ ಮಾಜಿ ಆಗಿದ್ದರೂ, ಬೆಸ್ಟ್‌ ಪೊಲೀಸ್ ಎಂದು ಜನರ ಮನದಲ್ಲಿ ಅಜರಾಮರ.

ಒಬ್ಬ ಪೊಲೀಸ್ ಅಧಿಕಾರಿ, ಬರೀ ಏಳೆಂಟು ವರ್ಷದ ಅವಧಿಯಲ್ಲಿ ಕರ್ನಾಟಕದಲ್ಲಿ ಜನಪ್ರಿಯರಾಗಿದ್ದು ವಿರಳವೇ. ಅಣ್ಣಾಮಲೈ ಮೂಲತ ತಮಿಳುನಾಡಿನವರು. ಆದರೆ, ತಮ್ಮ ಐಪಿಎಸ್ ವೃತ್ತಿ ಜೀವನ ಆರಂಭಿಸಿದ್ದು ಕರ್ನಾಟಕದಿಂದ. 2013ರಲ್ಲಿ ಕಾರ್ಕಳ ಉಪ ವಿಭಾಗದ ಎಎಸ್‌ಪಿಯಾದರು. ನಂತರ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಎಸ್‌ಪಿ ಆದರು. ನೇರ ಮತ್ತು ಕಠಿಣ ಅಧಿಕಾರಿ ಎಂಬುದು ಅವರು ಗಳಿಸಿದ್ದ ಗೌರವ. ಅವರ ವರ್ಗಾವಣೆಯಾದರೆ, ಜನರು ಪ್ರತಿಭಟನೆ ಮಾಡಿ, ಇವರು ಇಲ್ಲೇ ಇರಲಿ ಎಂದು ಹಟ ಮಾಡುವಷ್ಟು ಜನಸ್ನೇಹಿ ಪೊಲೀಸ್ ಆಫೀಸರ್ ಅವರಾಗಿದ್ದರು.

ಅಣ್ಣಾಮಲೈ ಐಪಿಎಸ್ ಆಗಿದ್ದು, ಸುಮ್ಮನೇ ಚಾನ್ಸ್ ‌ನಿಂದಲ್ಲ. ಬದಲಾಗಿ ಬಿಇ ಮುಗಿಸಿ ಐಐಎಂನಲ್ಲಿ ಓದುವಾಗ 2008ರಲ್ಲಿ  ಮುಂಬೈನಲ್ಲಿ ನಡೆದಿದ್ದ ಉಗ್ರದಾಳಿಯ ಘಟನೆಯ ಪ್ರಭಾವದಿಂದ. ಎಂಎನ್‌ಸಿ ಒಂದರಲ್ಲಿ ಗಟ್ಟಿ ಸಂಬಳ ಹಿಡಿದು ಸೆಟಲ್ ಆಗಬೇಕು ಎಂದುಕೊಳ್ಳುವವರ ಮಧ್ಯೆೆ, ನಾನು ನನ್ನ ದೇಶಕ್ಕೇನಾದರೂ ಮಾಡಬೇಕು ಎಂದು ನಿರ್ಧರಿಸಿದ್ದರು. ಅದರ ಹಟದಿಂದಲೇ 2013ರಲ್ಲಿ ಯುಪಿಎಸ್‌ಸಿಒ ಪರೀಕ್ಷೆ ಪಾಸ್ ಮಾಡಿ ಕರ್ನಾಟಕ ಕೇಡರ್‌ನಲ್ಲಿ ಐಪಿಎಸ್ ಸೇವೆಗೆ ಸೇರಿಕೊಂಡಿದ್ದರು. ಖಾಕಿ ಧರಿಸಿದ ಕ್ಷಣದಿಂದಲೂ ದಕ್ಷತೆ, ಪ್ರಾಮಾಣಿಕತೆ, ಸ್ನೇಹಪರತೆ ಎಂಬ ಲಾಂಛನ ಧರಿಸಿದ್ದರು.

ಆದರೆ, ಅವರೊಳಗಿದ್ದ ಒಬ್ಬ ಸಾಹಸಿ, ಇನ್ನಷ್ಟು ಕನಸುಗಳನ್ನು ಹುಟ್ಟುಹಾಕುತ್ತಲೇ ಇದ್ದ. ಈ ಕಾಲಘಟ್ಟದಲ್ಲೇ ನಡೆದ ಎರಡು
ಘಟನೆಗಳು ಅಣ್ಣಾಮಲೈಗೆ ತನ್ನ ಬದುಕಿನ ಮುಂದಿನ ಸಾಹಸಕ್ಕೆ ಅಣಿ ಮಾಡಿದ್ದವು. 2018ರಲ್ಲಿ ಕೈಲಾಸ ಮಾನಸ ಸರೋವರ್
ಯಾತ್ರೆ ಮಾಡಿದ್ದಾಗ ಅಂತರಂಗದ ದನಿ ಮಾತನಾಡಿತ್ತು. ಈಗ ನಿಂತ ದಡವಷ್ಟೇ ನಿನ್ನ ಬದುಕಲ್ಲ, ಇನ್ನೋನೋ ಹೊಸ ಸಾಹಸ,
ಮೈಲಿಗಲ್ಲಿನತ್ತ ನಿನ್ನ ಪ್ರಯಾಣವಿದೆ ಎಂಬುದರ ಮನವರಿಕೆ ಮಾಡಿಕೊಟ್ಟಿತ್ತು.

ಡಿಸೆಂಬರ್‌ನಲ್ಲಿ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿಯವರು ಅಕಾಲಿಕ ಮರಣ, ಅಣ್ಣಾಮಲೈ ಮನಸ್ಸನ್ನು ಬಿಕ್ಕುವಂತೆ ಮಾಡಿತ್ತು. ಇನ್ನು ಸಾಕು, ಐಪಿಎಸ್‌ನಲ್ಲೇ ಜೀವನ ಮುಗಿಸಲಾರೆ, ಬದುಕನ್ನು ಜನರಿಗಾಗಿ ಇನ್ನಷ್ಟು ತೆರೆದುಕೊಳ್ಳುವೆ ಎಂದು ನಿರ್ಧರಿಸಿದರು. ಬೆಂಗಳೂರಿನ (ದಕ್ಷಿಣ) ವಿಭಾಗದ ಉಪ ಪೊಲೀಸ್ ಆಯುಕ್ತ(ಡಿಸಿಪಿ)ಯಾಗಿದ್ದಾಗ, ನೇರ ಸಿಎಂ ಬಳಿ ರಾಜೀನಾಮೆ ನೀಡಿದಾಗ, ಕರ್ನಾಟಕವೇ ಶಾಕ್ ಆಗಿತ್ತು, ಭಾರತವೇ ಅಚ್ಚರಿಗೊಂಡಿತ್ತು. ನನ್ನ ಈ ನಿರ್ಧಾರವನ್ನು ಯೋಚಿಸಿಯೇ ತೆಗೆದು ಕೊಂಡಿದ್ದೇನೆ, ಒಂದಷ್ಟು ಸಮಯವನ್ನು ಕುಟುಂಬಕ್ಕೆ ನೀಡುತ್ತೇನೆ.

ನಂತರ ದೇಶಕ್ಕಾಗಿ, ನನ್ನ ಜನರಿಗಾಗಿ ಹೊಸ ರೂಪದಲ್ಲಿ ಬರುತ್ತೇನೆ ಎಂದು ಅಣ್ಣಾಮಲೈ ಅಂದು ಹೇಳಿಕೊಂಡಿದ್ದರು.
ಎಲ್ಲವನ್ನೂ ಅಳೆದು ತೂಗಿ, ತನ್ನ ಜೀವನದ ಉದ್ದೇಶದ ಸಾಕಾರಕ್ಕಾಗಿ ಅಂತಿಮವಾಗಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ನರೇಂದ್ರ ಮೋದಿ ಅವರ ಕೆಲಸ, ದೂರದೃಷ್ಟಿ ನೋಡಿ ಬಿಜೆಪಿ ಸೇರುತ್ತಿದ್ದೇನೆ, ಅಧಿಕಾರವಿಲ್ಲದೇ ಜನಸೇವೆ ಮಾಡುವುದು ಹೇಗೆ
ಎಂಬ ಅರಿವಿದೆ ಎಂದು ವಿನಮ್ರತೆ ತೋರಿದ್ದಾರೆ.

ಪ್ರಸ್ತತ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ತಮಿಳುನಾಡು ಬಿಜೆಪಿ ಉಪಾಧ್ಯಕ್ಷರಾಗಿ, ಅರಾವಕುರಿಚಿ ಯಿಂದ ಎನ್‌ಡಿಎ ಮೈತ್ರಿಕೂಟದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು, ಮತದಾನದ ದಿನಗಣನೆ ಆರಂಭವಾಗಿದೆ.
ಸುಳ್ಳಿನ ಕಂತೆಗಳನ್ನು ಜನರಿಗೆ ನೀಡಲಾರೆ, ನನ್ನ ಬದುಕಿನ ಉದ್ದೇಶದಿಂದ ದಾರಿ ತಪ್ಪಲಾರೆ ಎಂಬುದು ಅಣ್ಣಾಮಲೈ ಮಾತು, ಅವರಿಗೆ ಶುಭವಾಗಲಿ, ಗೆಲುವಾಗಲಿ. Let this tribe grow.