Friday, 20th September 2024

ವೈಎಸ್​ಆರ್​ಸಿಪಿ ಪಕ್ಷದಿಂದ ಲೋಕಸಭೆ, ವಿಧಾನಸಭೆ ಅಭ್ಯರ್ಥಿಗಳ ಪಟ್ಟಿ ರಿಲೀಸ್​

ಡಪ: ಆಂಧ್ರಪ್ರದೇಶದ ಆಡಳಿತರೂಢ ವೈಎಸ್​ಆರ್​ಸಿಪಿ ಪಕ್ಷವು ಲೋಕಸಭೆ ಮತ್ತು ವಿಧಾನಸಭೆ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್​ ಮಾಡಿದೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ಎಲ್ಲಾ 25 ಲೋಕಸಭಾ ಕ್ಷೇತ್ರಗಳು ಮತ್ತು 175 ವಿಧಾನ ಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ. ಕಡಪ ಜಿಲ್ಲೆಯ ಇಡುಪಲಪಾಯಿದಲ್ಲಿರುವ ಸಿಎಂ ಜಗನ್ ಮೋಹನ್​ ರೆಡ್ಡಿ ಅವರ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ್ ರೆಡ್ಡಿ ಅವರ ಸಮಾಧಿ ಬಳಿ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಪಟ್ಟಿಯನ್ನು ಬಿಡುಗಡೆ ಮಾಡಿದರು.

ವೈಎಸ್‌ಆರ್‌ಸಿಪಿ ಪಕ್ಷದ 32 ಹಾಲಿ ಶಾಸಕರು ಮತ್ತು 14 ಹಾಲಿ ಸಂಸದರಿಗೆ ಈ ಬಾರಿ ಟಿಕೆಟ್​ ನಿರಾಕರಿಸಲಾಗಿದೆ.

ವೈಎಸ್‌ಆರ್‌ಸಿಪಿ ಪ್ರಕಟಿಸಿದ ಪಟ್ಟಿಯಲ್ಲಿ ಎಸ್‌ಸಿ-29, ಎಸ್‌ಟಿ-7 ಮತ್ತು ಬಿಸಿ-48 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. ವಿಧಾನಸಭೆಯಲ್ಲಿ 19 ಮಹಿಳೆಯರು ಹಾಗೂ 7 ಅಲ್ಪಸಂಖ್ಯಾತರು ಸ್ಪರ್ಧಿಸಲಿದ್ದಾರೆ.

ಚಂದ್ರಬಾಬು ನಾಯ್ಡು ಸಾರಥ್ಯದ ತೆಲುಗು ದೇಶಂ ಪಕ್ಷ, ಪವನ್ ಕಲ್ಯಾಣ್ ನೇತೃತ್ವದ ಜನ ಸೇನಾ ಪಕ್ಷದ ಜೊತೆಗೆ ಬಿಜೆಪಿ ಮೈತ್ರಿ ಬಹುತೇಕ ಖಚಿತವಾಗಿದೆ.

ಅಂಧ್ರ ಪ್ರದೇಶ ಮುಖ್ಯಮಂತ್ರಿ ವೈ. ಎಸ್. ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಪಕ್ಷವು ಆಂಧ್ರ ಪ್ರದೇಶದಲ್ಲಿ ಅಧಿಕಾರದಲ್ಲಿದೆ. 2019ರಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷವು ಆಂಧ್ರದಲ್ಲಿ ಭಾರೀ ಬಹುಮತ ಸಾಧಿಸಿತ್ತು. ಸಿಎಂ ಜಗನ್ ಅವರಿಗೆ ಅವರ ತಂಗಿ ಶರ್ಮಿಳಾ ಭರ್ಜರಿ ಟಕ್ಕರ್ ಕೊಡುವ ಸಾಧ್ಯತೆ ಇದೆ. ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ಶರ್ಮಿಳಾ ರೆಡ್ಡಿ ಅವರಿಗೆ ಸಿಕ್ಕಿರೋದು ಭಾರೀ ಸಂಚಲನ ಸೃಷ್ಟಿಸಿದೆ.