Sunday, 15th December 2024

Zakir Hussain: ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಇನ್ನಿಲ್ಲ

Zakir Hussain

ವಾಷಿಂಗ್ಟನ್‌: ತಬಲಾ ಮಾಂತ್ರಿಕ (Tabla Maestro) ಜಾಕಿರ್ ಹುಸೇನ್ (Zakir Hussain) ಅವರು ಹೃದಯ ಸಂಬಂಧಿ ಕಾಯಿಲೆಯಿಂದ (Heart Related Problems) ಭಾನುವಾರ (ಡಿ. 15) ಅಮೆರಿಕದಲ್ಲಿ ನಿಧನ ಹೊಂದಿದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಜಾಕಿರ್ ಹುಸೇನ್ ಅವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದ್ದರಿಂದ ಅವರನ್ನು ಸ್ಯಾನ್ ಫ್ರಾನ್ಸಿಸ್ಕೋ (San Francisco) ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದಕ್ಕೂ ಮೊದಲು ಈ ಬಗ್ಗೆ ಮಾಹಿತಿ ನೀಡಿದ್ದ ಕೊಳಲು ವಾದಕ ರಾಕೇಶ್ ಚೌರಾಸಿಯಾ (Rakesh Chaurasia) ಅವರುಜಾಕಿರ್ ಹುಸೇನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ವಿಚಾರವನ್ನು ಸುದ್ದಿಗಾರರಿಗೆ ತಿಳಿಸಿದ್ದರು.

73 ವರ್ಷದ ಜಾಕಿರ್‌ ಹುಸೇನ್‌ ಅವರಿಗೆ ರಕ್ತದೊತ್ತಡ ಸಮಸ್ಯೆ ಇತ್ತು ಎಂದು ಅವರ ಹತ್ತಿರದ ಸಂಬಂಧಿಕರು ಮಾಹಿತಿ ನೀಡಿದ್ದಾರೆ. ಕಳೆದ ವಾರ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಹೃದಯ ಸಂಬಂಧಿ ಕಾಯಿಲೆಯಿಂದ ಪರಿಸ್ಥಿತಿಯು ಗಂಭೀರವಾದ್ದರಿಂದ ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಉಸ್ತಾದ್‌ ಜಾಕಿರ್‌ ಹುಸೇನ್‌ ಅಂತಾರಾಷ್ಟ್ರೀಯ ಖ್ಯಾತಿಯ ತಬಲಾ ವಾದಕ. ಶ್ರೇಷ್ಠ ತಬಲಾ ವಾದಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. 1951ರ ಮಾರ್ಚ್‌ 9ರಂದು ಇವರು ಮುಂಬೈ ಜನಿಸಿದರು. ಖ್ಯಾತ ತಬಲಾ ವಾದಕ ಅಲ್ಲಾ ರಾಖಾ ಅವರ ಹಿರಿಯ ಪುತ್ರ ಜಾಕೀರ್ ಹುಸೇನ್ ತಮ್ಮ ತಂದೆಯ ಹೆಜ್ಜೆಗಳನ್ನು ಅನುಸರಿಸಿ ಜಾಗತಿಕ ಐಕಾನ್ ಆಗಿ ಬದಲಾಗಿದ್ದಾರೆ. ತಮ್ಮ ವೃತ್ತಿ ಜೀವನದುದ್ದಕ್ಕೂ ಜಾಕಿರ್‌ ಹುಸೇನ್ 5 ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಹಿಂದೂಸ್ಥಾನಿ, ಶಾಸ್ತ್ರೀಯ ಸಂಗೀತ ಮತ್ತು ಜಾಝ್‌ ಫ್ಯೂಷನ್‌ ಅನ್ನು ಅಭ್ಯಾಸ ಮಾಡಿದ್ದಾರೆ. ಕಳೆದ 60 ವರ್ಷಗಳಲ್ಲಿ ವಿಶ್ವದಾದ್ಯಂತ ಸಾವಿರಾರು ಸಂಗೀತ ಕಛೇರಿಗಳನ್ನು ನೀಡಿದ್ದಾರೆ. ತಮ್ಮದೇ ಅಭಿಮಾನಿಗಳನ್ನು ಹೊಂದಿರುವ ಅವರು ನೂರಾರು ಶಿಷ್ಯರನ್ನು ಹುಟ್ಟು ಹಾಕಿ ಸಂಗೀತ ಲೋಕಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಸಂಗೀತ ಕ್ಷೇತ್ರದಲ್ಲಿನ ಇವರ ಅಸಾಧಾರಣ ಸಾಧನೆಗೆ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳೂ ಸಂದಿವೆ.

ಇಂಗ್ಲಿಷ್ ಗಿಟಾರ್ ವಾದಕ ಜಾನ್ ಮೆಕ್ ಲಾಗ್ಲಿನ್, ಪಿಟೀಲು ವಾದಕ ಎಲ್.ಶಂಕರ್ ಮತ್ತು ತಾಳವಾದ್ಯಗಾರ ಟಿ.ಎಚ್.’ವಿಕ್ಕು’ ವಿನಾಯಕರಾಮ್ ಅವರೊಂದಿಗೆ 1973ರಲ್ಲಿ ನಡೆಸಿಕೊಟ್ಟ ವಿಶಿಷ್ಟ ಯೋಜನೆ ಅದ್ಭುತವಾಗಿತ್ತು. ಭಾರತೀಯ ಶಾಸ್ತ್ರೀಯ ಸಂಗೀತವನ್ನು ಜಾಝ್‌ನೊಂದಿಗೆ ಸಂಯೋಜಿಸಿದ ಈ ವಿಶಿಷ್ಟ ಪ್ರಯೋಗ ಜನಪ್ರಿಯವಾಗಿತ್ತು. ತಬಲಾ ವಾನದ ಜತೆಗೆ ಸಂಗೀತ ನಿರ್ದೇಶನ, ನಟನಾ ಕ್ಷೇತ್ರದಲ್ಲಿಯೂ ಅವರು ತೊಡಗಿಸಿಕೊಂಡಿದ್ದರು.

ಈ ಸುದ್ದಿಯನ್ನೂ ಓದಿ: SM Krishna Death: ಪಂಚಭೂತಗಳಲ್ಲಿ ಲೀನರಾದ ಜಂಟಲ್‌ಮ್ಯಾನ್‌ ರಾಜಕಾರಣಿ ಎಸ್​ಎಂ ಕೃಷ್ಣ