Thursday, 21st November 2024

Zomato Job Offer: ಝೊಮಾಟೊದಲ್ಲಿ ಕೆಲಸ ಖಾಲಿ ಇದೆ, ಒಂದು ವರ್ಷ ಸಂಬಳವಿಲ್ಲ; ಆದರೂ 10 ಸಾವಿರ ಅರ್ಜಿ ಸಲ್ಲಿಕೆ !

Zomato Job Offer

ಬೆಂಗಳೂರು: ಝೊಮಾಟೊ (Zomato) ಸಂಸ್ಥೆಯಲ್ಲಿ ದೊಡ್ಡ ಕೆಲಸವೊಂದು ಖಾಲಿಯಿದೆ. ನಿಮಗೆ ಕೆಲಸ ಬೇಕೆಂದರೆ 20 ಲಕ್ಷ ರೂ. ಶುಲ್ಕ ಪಾವತಿಸುವ ಜತೆಗೆ ಒಂದು ವರ್ಷ ಉಚಿತವಾಗಿ ಕೆಲಸ ಮಾಡಲು ಸಿದ್ಧರಿರಬೇಕು ಎಂದು ಝೊಮಾಟೊ ಸಹ ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್‌ ಗೋಯಲ್‌ (Deepinder Goyal) ಉದ್ಯೋಗ ಆಕಾಂಕ್ಷಿಗಳಿಗೆ ಆಫರ್‌ ಕೊಟ್ಟಿದ್ದಾರೆ. ಅಚ್ಚರಿಯ ವಿಷಯವೆಂದರೆ 20 ಲಕ್ಷ ರೂ. ಕೊಟ್ಟು,ಒಂದು ವರ್ಷ ಉಚಿತವಾಗಿ ಕೆಲಸ ಮಾಡಲು 10 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ! ಸದ್ಯ ಈ ಸುದ್ದಿ ವೈರಲ್‌ ಆಗಿದೆ (Viral News).

ಝೊಮಾಟೊ ಸಂಸ್ಥೆಯು ಕಂಪೆನಿಯನ್ನು ನಡೆಸಲು ಸಹಾಯ ಮಾಡುವ ಸಿಬ್ಬಂದಿಯ ಮುಖ್ಯಸ್ಥರನ್ನು ಹುಡುಕುತ್ತಿದೆ. ಅದು ಕಡಿಮೆ ಹಂತದ ಹುದ್ದೆಯಾಗಿರದೆ, ಉನ್ನತ ದರ್ಜೆಯ ಹುದ್ದೆಯಾಗಿದೆ. ಈ ಕುರಿತು ದೀಪಿಂದರ್‌ ಗೋಯಲ್ ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.

20 ಲಕ್ಷ ರೂ ಶುಲ್ಕ, ಒಂದು ವರ್ಷ ಸಂಬಳವಿಲ್ಲದೆ ಕೆಲಸ

ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ದೀಪಿಂದರ್‌ “ನಾನು ನನಗಾಗಿ ಮುಖ್ಯ ಸಿಬ್ಬಂದಿಯನ್ನು ಹುಡುಕುತ್ತಿದ್ದೇನೆ. ನಮ್ಮ ಸಂಸ್ಥೆಯಲ್ಲಿ ಉದ್ಯೋಗವೊಂದು ಖಾಲಿಯಿದೆ. ಈ ಉದ್ಯೋಗದಲ್ಲಿ ಯಾವುದೇ ಸಾಮಾನ್ಯ ಸವಲತ್ತುಗಳು ಇರುವುದಿಲ್ಲ. ಮೊದಲ ಒಂದು ವರ್ಷ ಸಂಬಳವಿಲ್ಲದೆ ಕೆಲಸ ಮಾಡಬೇಕು. ಈ ಉದ್ಯೋಗಕ್ಕೆ ಸೇರಲು ನೀವು ಬಯಸಿದರೆ 20 ಲಕ್ಷ ರೂ. ಫೀಡಿಂಗ್‌ ಇಂಡಿಯಾಗೆ ದೇಣಿಗೆ ರೂಪದಲ್ಲಿ ನೀಡಬೇಕಾಗುತ್ತದೆ” ಎಂದು ಹೇಳಿದ್ದಾರೆ.

ʼʼಉಚಿತವಾಗಿ ಕೆಲಸ ಮಾಡಲು ನಾವು ಹೇಳುತ್ತಿಲ್ಲ. ಆಯ್ಕೆಯಾದ ಉದ್ಯೋಗಿಗಳಿಗೆ ಅವರು ಸೂಚಿಸುವ ಚಾರಿಟಿಗೆ ಝೊಮಾಟೊ 50 ಲಕ್ಷ ರೂ. ದೇಣಿಗೆ ನೀಡುತ್ತದೆʼʼ ಎಂಬ ಭರವಸೆಯನ್ನು ನೀಡಿದ್ದಾರೆ. ಮೊದಲ ವರ್ಷವಷ್ಟೇ ಉಚಿತವಾಗಿ ಕೆಲಸ ಮಾಡಬೇಕಾಗುತ್ತದೆ. ಎರಡನೇ ವರ್ಷದಿಂದ ಸಂಬಳವನ್ನು ನಿಗದಿ ಮಾಡುತ್ತೇವೆ. 50 ಲಕ್ಷ ರೂ.ಗಿಂತ ಹೆಚ್ಚಿನ ಸಂಬಳ ನೀಡುವ ಸಾಧ್ಯತೆಯಿದ್ದು, ಅದರ ಕುರಿತು ಎರಡನೇ ವರ್ಷದ ಆರಂಭದಲ್ಲಿ ನಿರ್ಧರಿಸುತ್ತೇವೆ ಎಂದು ಗೋಯಲ್‌ ತಿಳಿಸಿದ್ದಾರೆ. ಮೊದಲ ಒಂದು ವರ್ಷದಲ್ಲಿ ಯಾವುದೇ ಪ್ರತಿಷ್ಠಿತ ಕಾಲೇಜಿನ ಪದವಿಗಿಂತ 10 ಪಟ್ಟು ಹೆಚ್ಚು ಕಲಿಯಬಹುದು ಎಂತಲೂ ಹೇಳಿದ್ದಾರೆ.

ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೆಚ್ಚಿನ ಅನುಭವ ಹೊಂದಿರಬೇಕಿಲ್ಲ. ಉತ್ತಮವಾದ ಸಂವಹನ ಕೌಶಲವಿದ್ದು ನಮ್ರತೆಯಿಂದ ಕೆಲಸ ಮಾಡಲು ಸಿದ್ಧರಿದ್ದರೆ ಸಾಕು ಎನ್ನಲಾಗಿದೆ. ಹಾಗೆ ಈ ಕೆಲಸ ಬೇಕಾದವರು ತಮ್ಮ ರೆಸ್ಯೂಮ್‌ ಕಳುಹಿಸುವ ಅವಶ್ಯಕತೆಯಿಲ್ಲ. 200 ಪದಗಳ ಮಿತಿಯಲ್ಲಿ ಬರೆದಿರುವ ಕವರ್‌ ಲೆಟರ್‌ ಅನ್ನು d@zomato.comಗೆ ಇಮೇಲ್‌ ಮಾಡಿ ಎಂದು ಝೊಮಾಟೊ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ. ಆಯ್ಕೆಯಾಗುವ ಅಭ್ಯರ್ಥಿಗಳು ಗುರುಗ್ರಾಮದಲ್ಲಿರುವ ಝೊಮಾಟೊ ಪ್ರಧಾನ ಕಚೇರಿಯಲ್ಲಿ ಕೆಲಸ ಮಾಡಬೇಕು. ಈಗಾಗಲೇ 10 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಕೆಲಸಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ. ನ. 21ರ ಸಂಜೆ 6 ಗಂಟೆಯವರೆಗೆ ಮಾತ್ರ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂದು ಗೋಯಲ್ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Zomato delivery agent: ಭಾರೀ ಮಳೆಗೆ ಕೆಟ್ಟು ನಿಂತ ಬೈಕ್‌; Zomato ಡೆಲಿವರಿ ಬಾಯ್‌ ಕಾರ್ಯಕ್ಕೆ ಭಾರೀ ಮೆಚ್ಚುಗೆ