ದುಬೈ: ಈಗಾಗಲೇ ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ(Pakistan Cricket Board) ಚಾಂಪಿಯನ್ಸ್ ಟ್ರೋಫಿ(Champions Trophy) ಆತಿಥ್ಯ ಕೈ ತಪ್ಪಿ ಹೋದರೆ ಸರಿ ಸುಮಾರು 548 ಕೋಟಿ ರೂಪಾಯಿ ನಷ್ಟವಾಗಲಿದೆ ಎಂದು ಕ್ರಿಕ್ ಬಝ್ ವರದಿ ಮಾಡಿವೆ.
ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಹೈಬ್ರಿಡ್ ಮಾಡೆಲ್ ಮೂಲಕ ಸರಣಿ ಆಯೋಜನೆ ಕುರಿತಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ(ಪಿಸಿಬಿ) ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರತಿಕ್ರಿಯೆ ಕೇಳಿದೆ. ಆದರೆ ಪಾಕಿಸ್ತಾನ ಸರ್ಕಾರ ಪಿಸಿಬಿಗೆ ಟೂರ್ನಿಯನ್ನು ಪಾಕ್‌ನ್ಲಲೇ ನಡೆಸುವಂತೆ ಸೂಚನೆ ನೀಡಿದೆ. ಒಂದೊಮ್ಮೆ ಟೂರ್ನಿ ಪಾಕ್‌ನಿಂದ ಬೇರೆ ದೇಶಕ್ಕೆ ಸ್ಥಳಾಂತರಗೊಂಡರೆ ಪಿಸಿಬಿಗೆ ದೊಡ್ಡ ಮಟ್ಟದ ನಷ್ಟ ಸಂಭವಿಸಲಿದೆ.
ಪಾಕ್ ಆಟಗಾರರಿಗೆ ವೇತನ ನೀಡಲೂ ಆಗದ ಸ್ಥಿತಿಯಲ್ಲಿರುವ ಪಿಸಿಬಿ ಹಾಗೂ ಹೀಗೂ ಮಾಡಿ ಸಾಲ ಪಡೆದು ಟೂರ್ನಿ ಆಯೋಜನೆಗಾಗಿ ಕ್ರೀಡಾಂಗಣ ನವೀಕರಣ ಸೇರಿದಂತೆ ಹಲವು ಕೆಲಸ ಮುಗಿಸಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಲಾಹೋರ್, ಕರಾಚಿ ಮತ್ತು ರಾವಲ್ಪಿಂಡಿಯ ಸ್ಟೇಡಿಯಂಗಳ ದುರಸ್ತಿಗೆ ಸುಮಾರು 1300 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಈ ಮೂರು ಕ್ರೀಡಾಂಗಣಗಳು ಈಗ ಬಹುತೇಕ ಹೊಸ ಕ್ರೀಡಾಂಗಣಗಳಾಗಿ ಮಾರ್ಪಟ್ಟಿವೆ ಎಂದು ಇತ್ತೀಚೆಗೆ ಮೊಹ್ಸಿನ್ ನಖ್ವಿ ಅಲ್ಲಿಯ ಮಾಧ್ಯಮಗಳಲ್ಲಿ ಹೇಳಿದ್ದರು. ಹೀಗಿರುವಾಗಲೇ ಟೂರ್ನಿ ಬೇರೆಡೆಗೆ ಶಿಫ್ಟ್ ಆದರೆ ಮಾಡಿದ ಖರ್ಚೆಲ್ಲ ನೀರಲ್ಲಿ ಹೋಮ ಮಾಡಿದಂತಾಗುತ್ತದೆ. ಒಂದೊಮ್ಮೆ ಪಾಕ್ ಕ್ರಿಕೆಟ್ ಮಂಡಳಿಗೆ ನಷ್ಟದ ಮೊತ್ತವನ್ನು ಭರಿಸಲು ಬಿಸಿಸಿಐ ಅಥವಾ ಐಸಿಸಿ ಒಪ್ಪಿಕೊಂಡರೆ ಆಗ ಪಾಕ್ ಕ್ರಿಕೆಟ್ ಮಂಡಳಿ ಹೈಬ್ರೀಡ್ ಮಾದರಿಗೆ ಒಪ್ಪಿಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ Champions Trophy: ರಾಜಕೀಯ ತಿರುವು ಪಡೆದ ಚಾಂಪಿಯನ್ಸ್ ಟ್ರೋಫಿ ಆತಿಥ್ಯ
ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿನ ವರದಿಯ ಪ್ರಕಾರ ಪಾಕಿಸ್ತಾನ ಸರ್ಕಾರವು ಒಂದೇ ಒಂದು ಪಂದ್ಯವನ್ನೂ ಕೂಡ ದೇಶದ ಹೊರಗೆ ನಡೆಸದಂತೆ ಪಾಕ್ ಕ್ರಿಕೆಟ್ ಮಂಡಳಿಗೆ ತಿಳಿಸಿದೆ ಎನ್ನಲಾಗಿದೆ. ʼಪಾಕಿಸ್ತಾನದಿಂದ ಯಾವುದೇ ಪಂದ್ಯವನ್ನು ಸ್ಥಳಾಂತರಿಸಬೇಡಿ ಎಂದು ನಮ್ಮ ಸರ್ಕಾರವು ನಮಗೆ ಹೇಳಿದೆ ಮತ್ತು ಸಮಯ ಬಂದಾಗ ಅದು ನಮ್ಮ ನಿಲುವು ಆಗಿರುತ್ತದೆ. ಇದೀಗ, ಐಸಿಸಿ ಭಾರತದ ನಿರ್ಧಾರದ ಬಗ್ಗೆ ನಮಗೆ ತಿಳಿಸಿದೆ. ನಾವು ಚಾಂಪಿಯನ್ಸ್ ಟ್ರೋಫಿಯ ಆತಿಥ್ಯದ ಹಕ್ಕುಗಳನ್ನು ಹೊಂದಿದ್ದೇವೆ. ಆದ್ದರಿಂದ ನಾವು ಪಾಕಿಸ್ತಾನದ ಹೊರಗೆ ಆಟಗಳನ್ನು ಸ್ಥಳಾಂತರಿಸಲು ಯಾವುದೇ ಮಾರ್ಗವಿಲ್ಲ” ಎಂದು ಪಿಸಿಬಿಯ ಹೆಸರು ಹೇಳದ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ.