Monday, 14th October 2024

Pakistan Super League : ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಮ್ಯಾಚ್‌ ಫಿಕ್ಸಿಂಗ್‌

Match-fixing in Pakistan

ಬೆಂಗಳೂರು ; ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಭ್ರಷ್ಟಾಚಾರ ನಿಗ್ರಹ ಘಟಕದ (ACU) ಮುಖ್ಯಸ್ಥ ಅಲೆಕ್ಸ್ ಮಾರ್ಷಲ್ ಕ್ರಿಕೆಟ್ ಲೀಗ್‌ಗಳಲ್ಲ ನಡೆಯುತ್ತಿರುವ ಮ್ಯಾಚ್ ಫಿಕ್ಸಿಂಗ್‌ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ಪಾಕಿಸ್ತಾನ ಕ್ರಿಕೆಟ್ ಲೀಗ್‌ನಲ್ಲಿ ನಡೆಯುತ್ತಿರುವ ಅಕ್ರಮವನ್ನು ಆಕ್ಷೇಪಿಸಿದ್ದಾರೆ. ಕ್ರಿಕೆಟ್ ಲೀಗ್‌ಗಳು ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿರುತ್ತವೆ ಎಂದು ಅವರು ಹೇಳಿದ್ದಾರೆ. ಅವರ ಹೇಳಿಕೆಗಳು ಪಾಕಿಸ್ತಾನ ಕ್ರಿಕೆಟ್ ಲೀಗ್‌ಗೆ (Pakistan Super League) ಸಂಬಂಧಿಸಿದ್ದಾಗಿದೆ.

ಕ್ರಿಕೆಟ್ ಆಟದಲ್ಲಿ ಫ್ರ್ಯಾಂಚೈಸ್ ಲೀಗ್ ಗಳ ಉದಯವು ಅನೇಕ ಕ್ರಿಕೆಟ್ ಮಂಡಳಿಗಳಿಗೆ ಆರ್ಥಿಕ ಸ್ಥಿರತೆ ತಂದುಕೊಟ್ಟಿದೆ. ವರ್ಷಗಳಲ್ಲಿ, ಕ್ರಿಕೆಟ್ ಮಂಡಳಿಗಳು ತಮ್ಮ ಫ್ರ್ಯಾಂಚೈಸ್ ಲೀಗ್‌ಗಳನ್ನು ಪ್ರಾರಂಭಿಸುವ ಅವಕಾಶ ಆನಂದಿಸಿವೆ. ಇದು ಗಮನಾರ್ಹ ಪ್ರಮಾಣದ ಆದಾಯಕ್ಕೆ ಕಾರಣವಾಗುತ್ತದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬಹುಶಃ ಕ್ರೀಡೆಯನ್ನು ವಾಣಿಜ್ಯ ಶಕ್ತಿ ಕೇಂದ್ರವಾಗಿ ಪರಿವರ್ತಿಸಿದ ಅತಿದೊಡ್ಡ ಉದಾಹರಣೆ. ಯಶಸ್ವಿ ಫ್ರ್ಯಾಂಚೈಸಿ ಲೀಗ್‌ ಏನು ಮಾಡಬಹುದು ಎಂಬುದಕ್ಕೆ ಐಪಿಎಲ್‌ನ ಬೆಳವಣಿಗೆ ಉತ್ತಮ ಉದಾಹರಣೆ.

ಅಲೆಕ್ಸ್ ಮಾರ್ಷಲ್ ಆಘಾತಕಾರಿ ಹೇಳಿಕೆ

ಆರ್ಥಿಕ ಅನುಕೂಲಗಳ ಹೊರತಾಗಿಯೂ ಲೀಗ್‌ಗಳು ಅನಾನುಕೂಲತೆಗಳನ್ನು ಸಹ ಹೊಂದಿದೆ. ಮ್ಯಾಚ್ ಫಿಕ್ಸಿಂಗ್ನಂತಹ ಪ್ರಕರಣಗಳಿಗೆ ಐಸಿಸಿಯ ಎಸಿಯು ನಿರಂತರ ಮೇಲ್ವಿಚಾರಣೆ ನಡೆಸುತ್ತಿದೆ. ಇತ್ತೀಚೆಗೆ, ಅಲೆಕ್ಸ್ ಮಾರ್ಷಲ್ ಕೆಲವು ಕೆಳಮಟ್ಟದ ಫ್ರ್ಯಾಂಚೈಸ್ ಲೀಗ್‌ಗಳ ಮೋಸದ ಬಗ್ಗೆ ಹೇಳಿಕೆ ನೀಡಿದ್ದಾರೆ. ಭ್ರಷ್ಟರು ಶುದ್ಧ ಕ್ರಿಕೆಟ್‌ಗೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಲೀಗ್‌ಗಳಲ್ಲಿ ಹಣ ಇರುವುದರಿಂದ ಈ ಮೋಸ ಮುಂದುವರಿಯುತ್ತದೆ ಎಂದು ಅವರು ಹೇಳಿದ್ದಾರೆ.

ನೀವು ನೋಡುವ ಕ್ರಿಕೆಟ್ ಸುರಕ್ಷಿತ ಮತ್ತು ಸ್ವಚ್ಛವಾಗಿರಬೇಕು. ಆದರೆ ಭ್ರಷ್ಟರು ನಿರಂತರವಾಗಿ ಆಟಕ್ಕೆ ಕಳಂಕ ತರುತ್ತಿದ್ದಾರೆ ಎಂದು ನನಗೆ ಸಂಪೂರ್ಣ ಖಾತ್ರಿಯಿದೆ. ನಿಯಮವಿಲ್ಲದೇ ನಡೆಸುವ ಕೆಳ ಹಂತದ ಫ್ರ್ಯಾಂಚೈಸಿ ಲೀಗ್‌ಗಳು ಮೋಸಗಾರರ ಜಾಲಕ್ಕೆ ಸಿಲುಕುತ್ತವೆ. ಅವರು ವ್ಯವಸ್ಥೆಯಲ್ಲಿ ದೌರ್ಬಲ್ಯ ಹುಡುಕುತ್ತಾರೆ ಎಂಬುದು ಮಾರ್ಷಲ್ ಹೇಳಿದ್ದಾರೆ.

ಅಲೆಕ್ಸ್ ಮಾರ್ಷಲ್ ಏಳು ವರ್ಷಗಳ ನಂತರ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದಾರೆ. ಮ್ಯಾಚ್ ಫಿಕ್ಸಿಂಗ್‌ಗೆ ಸಂಬಂಧಿಸಿದಂತೆ ಶ್ರೀಲಂಕಾದಲ್ಲಿ ಎಸಿಯು ತನಿಖೆಯ ಭಾಗವಾಗಿದ್ದರು. ತನಿಖೆಯ ನಂತರ, ಮ್ಯಾಚ್ ಫಿಕ್ಸಿಂಗ್‌ಗೆ ಸಂಬಂಧಿಸಿದ ಅಪರಾಧಗಳನ್ನು ಅಪರಾಧವೆಂದು ಪರಿಗಣಿಸುವ ದಕ್ಷಿಣ ಏಷ್ಯಾದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಶ್ರೀಲಂಕಾ ಪಾತ್ರವಾಗಿದೆ.

ಅಲೆಕ್ಸ್ ಮಾರ್ಷಲ್ ದೊಡ್ಡ ನಿರ್ಧಾರಗಳು

ಅಲೆಕ್ಸ್ ಮಾರ್ಷಲ್ ಐಸಿಸಿಯ ಎಸಿಯು ಅಧಿಕಾರಿಯಾಗಿದ್ದ ಅವಧಿಯಲ್ಲಿ ಬಾಂಗ್ಲಾದೇಶದ ಆಲ್ರೌಂಡರ್ ಶಕೀಬ್ ಅಲ್ ಹಸನ್ ಮತ್ತು ಜಿಂಬಾಬ್ವೆಯ ದಿವಂಗತ ಆಲ್ರೌಂಡರ್ ಹೀತ್ ಸ್ಟ್ರೀಕ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಹೊರಿಸಿದ್ದರು. ಇಬ್ಬರೂ ಕ್ರಿಕೆಟಿಗರು ತಮ್ಮ ಅಪರಾಧಗಳನ್ನು ಒಪ್ಪಿಕೊಂಡಿದ್ದರು.

ಇದನ್ನೂ ಓದಿ: Dodda Ganesh : ಕೀನ್ಯಾ ತಂಡದ ಕೋಚ್‌ ಆಗಿ ಒಂದೇ ತಿಂಗಳಲ್ಲಿ ವಜಾಗೊಂಡ ದೊಡ್ಡ ಗಣೇಶ್‌

ಭ್ರಷ್ಟರ ಮೂರು ಆಮೀಷಗಳನ್ನು ವರದಿ ಮಾಡಲು ಶಕೀಬ್ ವಿಫಲರಾದರೆ, ಸ್ಟ್ರೀಕ್ ಐಸಿಸಿಯ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಐದು ಬಾರಿ ಉಲ್ಲಂಘಿಸಿದ್ದರು. ಬುಕ್ಕಿಗಳಿಂದ ಅವರು ಬಿಟ್ ಕಾಯಿನ್ ತೆಗೆದುಕೊಂಡಿದ್ದರು.

ವರದಿಗಳ ಪ್ರಕಾರ, 2018 ರ ಜನವರಿಯಲ್ಲಿ ಬಾಂಗ್ಲಾದೇಶ, ಜಿಂಬಾಬ್ವೆ ಮತ್ತು ಶ್ರೀಲಂಕಾ ನಡುವಿನ ತ್ರಿಕೋನ ಸರಣಿಯಲ್ಲಿ ಶಕೀಬ್ ಅಲ್ ಹಸನ್ ಎರಡು ಬಾರಿ ವರದಿ ಮಾಡಲು ವಿಫಲರಾಗಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಐಪಿಎಲ್ 2018 ರ ಪಂದ್ಯದ ಸಮಯದಲ್ಲಿ ಮತ್ತೊಂದು ಉಲ್ಲಂಘನೆ ಮಾಡಿದ್ದರು. ಪರಿಣಾಮವಾಗಿ, ಅವರನ್ನು ಎರಡು ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿದ್ದರು.