Mangalore Murder Case: ಸುಹಾಸ್ ಹತ್ಯೆ ಬೆನ್ನಲ್ಲೇ ಪ್ರತೀಕಾರಕ್ಕಾಗಿ ನಡೆಯಿತಾ ಡೆಡ್ಲಿ ಅಟ್ಯಾಕ್? ಉಡುಪಿಯಲ್ಲಿ ಮುಸ್ಲಿಂ ಯುವಕನ ಕೊಲೆಗೆ ಯತ್ನ
Suhas Shetty Murder Case: ಇಷ್ಟು ದಿನ ಪ್ರಶಾಂತವಾಗಿದ್ದ ಕರಾವಳಿ ನಿಗಿ ನಿಗಿ ಕೆಂಡವಾಗಿದೆ. ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ನಿನ್ನೆ ರಾತ್ರಿ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದಾರೆ. ಇದೀಗ ಇದರ ಬೆನ್ನಲ್ಲೇ ಉಡುಪಿಯಲ್ಲಿ ಮುಸ್ಲಿಂ ಯುವಕನ ಮೇಲೆ ಡೆಡ್ಲಿ ಅಟ್ಯಾಕ್ ನಡೆದಿದೆ.


ಉಡುಪಿ : ಮಂಗಳೂರಿನ ಬಜ್ಪೆಯಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಬರ್ಬರ ಹತ್ಯೆ(Suhas Shetty Murder Case) ಬೆನ್ನಲ್ಲೇ ಪ್ರತಿಕಾರಕ್ಕಾಗಿ ಉಡುಪಿಯಲ್ಲೊಂದು ಡೆಡ್ಲಿ ಅಟ್ಯಾಕ್ ನಡೆದಿದೆ. ಉಡುಪಿಯಲ್ಲಿ ಮುಸ್ಲಿಂ ಯುವಕನ ಹತ್ಯೆಗೆ ಯತ್ನ(Mangalore Murder Case) ನಡೆದಿದೆ. ಉಡುಪಿ ತಾಲೂಕಿನ ಅತ್ರಾಡಿಯಲ್ಲಿ ಮುಸ್ಲಿಂ ಆಟೋ ಚಾಲಕ ಅಬೂಬಕ್ಕರ್ ಎಂಬುವರ ಮೇಲೆ ದಾಳಿಯಾಗಿದೆ. ಆಟೋ ಅಡ್ಡಗಟ್ಟಿ ಚಾಲಕ ಅಬೂಬಕ್ಕರ್ ಕೊಲೆಗೆ ಯತ್ನಿಸಲಾಗಿದೆ. ಇನ್ನು ದಾಳಿಗೆ ಯತ್ನಿಸಿದವರನ್ನು ಸುಶಾಂತ್, ಸಂದೇಶ್ ಪೂಜಾರಿ ಎಂದು ಗುರುತಿಸಲಾಗಿದೆ.
ಅಬೂಬಕ್ಕರ್ ನನ್ನು ಅಡ್ಡಗಟ್ಟಿ ಸುಶಾಂತ್, ಸಂದೇಶ್ ಪೂಜಾರಿ ಎಂಬುವರು ಕೊಲೆಗೆ ಯತ್ನಿಸಿದ್ದಾರೆ ಕೂಡಲೇ ಹಿರಿಯಡ್ಕ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ್ಕಾಗಿ ಕೃತ್ಯ ಎಸಗಿರುವುದಾಗಿ ಇಬ್ಬರು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Suhas Shetty Murder: ಸುಹಾಸ್ ಶೆಟ್ಟಿ ಕೊಲೆ; ಸೋಶಿಯಲ್ ಮೀಡಿಯಾದಲ್ಲೇ ಟಾರ್ಗೆಟ್ ಫಿಕ್ಸ್ ಮಾಡಿದ್ದ ಹಂತಕರು!
2022ರಲ್ಲಿ ಸುರತ್ಕಲ್ ನಲ್ಲಿ ನಡೆದ ಫಾಜಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸುಹಾಸ್ ಶೆಟ್ಟಿಯನ್ನು ಮೇ 1ರ ರಾತ್ರಿ 8.27ರ ಸುಮಾರಿಗೆ ಮಂಗಳೂರಿನ ಹೊರವಲಯದ ಬಜಪೆ ಕಿನ್ನಿಪದವು ಎಂಬಲ್ಲಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಹಿಂದೂ ಕಾರ್ಯಕರ್ತನ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ (Vishwa Hindu Parishad) ಇಂದು ದಕ್ಷಿಣ ಕನ್ನಡ ಬಂದ್ಗೆ ಕರೆ ಕೊಟ್ಟಿದೆ. ರಸ್ತೆಗಿಳಿದ ಖಾಸಗಿ ಬಸ್ ಮೇಲೆ ಉದ್ರಿಕ್ತ ಗುಂಪಿನಿಂದ ಕಲ್ಲು ತೂರಾಟ ನಡೆದಿದೆ. ಮಂಗಳೂರಿನ ಹಂಪನಕಟ್ಟೆ ಬಳಿಯ ಬಸ್ಸಿಗೆ ಉದ್ರಿಕ್ತ ಗುಂಪಿನಿಂದ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಮೂರು ಬಸ್ಸಿಗೆ ಹಾನಿಯಾಗಿದೆ.
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂರು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಸುಹಾಸ್ ಶೆಟ್ಟಿ ಅವರ ಇನೋವಾ ಕಾರು, ಆರೋಪಿಗಳು ಕೃತ್ಯಕ್ಕೆ ಬಳಸಿದ ಸ್ವಿಫ್ಟ್ ಕಾರು ಹಾಗೂ ಮೀನು ಸಾಗಾಟದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಬಳಸಿದ ಸ್ವಿಫ್ಟ್ ಕಾರಿನಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿವೆ.
ಇಂದು ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಬಂದ್ಗೆ ಕರೆ ನೀಡಿದೆ. ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ BNS ಕಲಂ 163 ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಆಗಿದೆ. ಈ ನಿಷೇಧಾಜ್ಞೆ ಮುಂಜಾನೆ 6 ಗಂಟೆಯಿಂದ ಮೇ 6ರ ಮುಂಜಾನೆ 6 ಗಂಟೆ ವರೆಗೆ ನಾಲ್ಕು ದಿನಗಳ ಕಾಲ ಜಾರಿಯಲ್ಲಿರಲಿದೆ.
ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಆದೇಶದಂತೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಹತ್ಯೆ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ ಗೆ ಕರೆ ನೀಡಿರುವ ವಿಶ್ವ ಹಿಂದೂ ಪರಿಷತ್, ಪ್ರತಿಭಟನೆ ಕೂಡ ನಡೆಸಲಿವೆ.