ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pralhad Joshi: ಮೋದಿ ಆಡಳಿತದಲ್ಲಿ ಹಣದುಬ್ಬರ ಕನಿಷ್ಠ ಮಟ್ಟಕ್ಕೆ ಇಳಿದಿದೆ: ಪ್ರಲ್ಹಾದ್‌ ಜೋಶಿ

Pralhad Joshi: 2025ರ ಮಾರ್ಚ್‌ನಲ್ಲಿ ಭಾರತದ ಹಣದುಬ್ಬರ ಐದು ವರ್ಷಗಳಲ್ಲೇ ಶೇ.3.34ರಷ್ಟು ಕನಿಷ್ಠ ಮಟ್ಟಕ್ಕೆ ಇಳಿದಿದೆ. ರಷ್ಯಾ-ಉಕ್ರೇನ್ ಯುದ್ಧದಂತಹ ಜಾಗತಿಕ ಅಡಚಣೆಗಳು ಆಹಾರ ಧಾನ್ಯಗಳ ಮೇಲೆ ಒತ್ತಡ ಹೇರುತ್ತಿದ್ದರೂ ಸಹ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಸರಾಸರಿ ಶೇ.5.1ರಷ್ಟಿರುವುದು ಗಮನಾರ್ಹವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ಮೋದಿ ಆಡಳಿತದಲ್ಲಿ ಹಣದುಬ್ಬರ ಕನಿಷ್ಠ ಮಟ್ಟಕ್ಕೆ ಇಳಿದಿದೆ: ಪ್ರಲ್ಹಾದ್‌ ಜೋಶಿ

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ.

Profile Siddalinga Swamy May 2, 2025 10:32 PM

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ 11 ವರ್ಷದ ಆಡಳಿತಾವಧಿಯಲ್ಲಿ ಕೋವಿಡ್‌ ಮತ್ತು ಯುದ್ಧ ಸನ್ನಿವೇಶದಂತಹ ಪರಿಸ್ಥಿತಿ ಎದುರಿಸಿದಾಗ್ಯೂ ಹಣದುಬ್ಬರ ಸರಾಸರಿ ದರ ಶೇ.5.1ರಷ್ಟಿದೆ. ಅದೇ ಯುಪಿಎ ಅವಧಿಯಲ್ಲಿ ಶೇ.12ರವರೆಗೆ ಏರಿತ್ತು ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿಳಿಸಿದರು. ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಲೆ ಏರಿಕೆಗೆ ಬಿಜೆಪಿ, ಕೇಂದ್ರ ಸರ್ಕಾರ ಕಾರಣ ಎಂದು ಬರೀ ಸುಳ್ಳು ಹೇಳುತ್ತ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಕಾಂಗ್ರೆಸ್ಸಿಗರು. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಿನಿಂದಲೂ ಹಗಲು ದರೋಡೆ ನಡೆಸುತ್ತಿದ್ದು, ಜನರೆದುರು ಸಾಚಾತನ ಪ್ರದರ್ಶಿಸಲು ಹೊರಟಿದೆ ಅಷ್ಟೇ ಎಂದು ಆರೋಪಿಸಿದರು.

2025ರ ಮಾರ್ಚ್‌ನಲ್ಲಿ ಭಾರತದ ಹಣದುಬ್ಬರ ಐದು ವರ್ಷಗಳಲ್ಲೇ ಶೇ.3.34ರಷ್ಟು ಕನಿಷ್ಠ ಮಟ್ಟಕ್ಕೆ ಇಳಿದಿದೆ. ರಷ್ಯಾ-ಯುಕ್ರೇನ್ ಯುದ್ಧದಂತಹ ಜಾಗತಿಕ ಅಡಚಣೆಗಳು ಆಹಾರ ಧಾನ್ಯಗಳ ಮೇಲೆ ಒತ್ತಡ ಹೇರುತ್ತಿದ್ದರೂ ಸಹ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಸರಾಸರಿ ಶೇ.5.1ರಷ್ಟಿರುವುದು ಗಮನಾರ್ಹವಾಗಿದೆ. ಇತ್ತೀಚಿನ ಆಹಾರ ಹಣದುಬ್ಬರವು ಶೇ.2.69ಕ್ಕೆ ಇಳಿದಿದೆ. ಇದು 2021ರಿಂದ ಅತ್ಯಂತ ಕನಿಷ್ಠ ಮಟ್ಟದ್ದಾಗಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಅಂಕಿ-ಸಂಖ್ಯೆ ಸಹಿತ ವಿವರಿಸಿದರು.

ದೇಶದಲ್ಲಿ ಯುಪಿಎ ಆಡಳಿತಾವಧಿಯಲ್ಲಿ 2009-11ರ ನಡುವೆ ಹಣದುಬ್ಬರ ಶೇ.14 ದಾಟಿದೆ. ಆಹಾರ ಹಣದುಬ್ಬರ ಸರಾಸರಿ ಶೇ.9 ತಲುಪಿತ್ತು. ಸರಾಸರಿ CPI ಹಣದುಬ್ಬರ ಕನಿಷ್ಠ ಶೇ.8.5ರಷ್ಟಾಗಿತ್ತು. ಗರಿಷ್ಠ ಹಣದುಬ್ಬರ ಶೇ.12ಕ್ಕೆ ಹೋಗಿತ್ತು. ಕೆಲವೊಮ್ಮೆ ಶೇ.18ಕ್ಕೂ ಏರಿತ್ತು. ಹೆಚ್ಚಿನ ಆಹಾರ ಹಣದುಬ್ಬರ ತೀವ್ರ ಕಳವಳಕಾರಿಯಾಗಿತ್ತು ಎಂದು ತಿಳಿಸಿದರು.

ವಿದೇಶಿ ವಿನಿಮಯ ಮೀಸಲು ನಿವ್ವಳ ಹೆಚ್ಚಳ

ಇನ್ನು, ಭಾರತದಲ್ಲಿ ಯುಪಿಎ ಆಡಳಿತಕ್ಕೆ ಹೋಲಿಸಿದರೆ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ವಿದೇಶಿ ವಿನಿಮಯ ಮೀಸಲು ದ್ವಿಗುಣವನ್ನು ಮೀರಿದೆ. 2014 ರಿಂದ 2024ರ ಹತ್ತು ವರ್ಷದಲ್ಲಿ $336 ಬಿಲಿಯನ್ ನಿವ್ವಳ ಹೆಚ್ಚಳ ಕಂಡಿದೆ. 2014ರಲ್ಲಿ ವಿದೇಶಿ ವಿನಿಮಯ ಮೀಸಲು $304 ಬಿಲಿಯನ್ ಇತ್ತು. 2024ರಲ್ಲಿ $640 ಬಿಲಿಯನ್ ಗಿಂತ ಹೆಚ್ಚಾಗಿದೆ. ಪ್ರಸ್ತುತ 2025ರ ಏಪ್ರಿಲ್‌ ಅಲ್ಲಿ ಇದು $677 ಬಿಲಿಯನ್ ಗಿಂತ ಹೆಚ್ಚಾಗಿದೆ. ಯುಪಿಎ ಅವಧಿಯಲ್ಲಿ 2004 ರಿಂದ 2014ರ ಹತ್ತು ವರ್ಷದಲ್ಲಿ ವಿದೇಶಿ ವಿನಿಮಯ ಮೀಸಲು ನಿವ್ವಳ ಹೆಚ್ಚಳ $191 ಬಿಲಿಯನ್ ಇತ್ತು. 2004ರಲ್ಲಿ $113 ಬಿಲಿಯನ್ ಇದ್ದದ್ದು 2014ರ ವೇಳೆಗೆ $304 ಬಿಲಿಯನ್ ತಲುಪಿತ್ತು ಎಂದು ಮಾಹಿತಿ ನೀಡಿದರು.

ರಷ್ಯಾ, ಉಕ್ರೇನ್‌ನಿಂದ ಪೊಟ್ಯಾಷ್‌, ಯುರಿಯಾ ಇತ್ಯಾದಿ ಬರುತ್ತದೆ. ಇರಾನ್‌ನಿಂದ ತೈಲ ಬರುತ್ತದೆ. ಪ್ರಸ್ತುತ ಎಲ್ಲಾ ಕಡೆ ಯುದ್ಧದ ಸನ್ನಿವೇಶವಿದ್ದು, ಜಗತ್ತೇ ತತ್ತರಿಸುತ್ತಿದೆ. ಅಂಥದ್ದರಲ್ಲೂ ಭಾರತ ಬೆಲೆ ಏರಿಕೆಯಲ್ಲಿ ಒಂದು ಮಟ್ಟವನ್ನು ಕಾಯ್ದುಕೊಂಡಿದೆ. ಕೇಂದ್ರ ಸರ್ಕಾರ ಪೆಟ್ರೋಲ್‌, ಡಿಸೇಲ್‌ ಬೆಲೆ, ತೆರಿಗೆ ಇಳಿಸಿದರೂ ರಾಜ್ಯ ಕಾಂಗ್ರೆಸ್‌ ಸರ್ಕಾರ ಇಳಿಸಿಲ್ಲ. ಬದಲಾಗಿ ₹2, ₹3 ಹೆಚ್ಚಿಸುತ್ತಲೇ ಇದೆ. ಕೇಂದ್ರದ ಮೇಲೆ ಅನಗತ್ಯ ಗೂಬೆ ಕೂರಿಸುತ್ತಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಕಿಡಿಕಾರಿದರು.

ಸಿಎಂ-ಡಿಸಿಎಂ ದೊಡ್ಡ ಪಿಕ್‌ ಪಾಕೇಟರ್‌

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಯಾವುದನ್ನೂ ಬಿಟ್ಟಿಲ್ಲ. 48 ಜನಪೋಯೋಗಿ ವಸ್ತುಗಳ ಬೆಲೆ ಏರಿಸಿದೆ. ಹಾಲು-ನೀರು, ಆಲ್ಕೋಹಾಲ್‌, ಕಸದಿಂದಲೂ ದುಡ್ಡು ಹೊಡೆಯುವ ದೊಡ್ಡ ಪಿಕ್‌ ಪಾಕೇಟರ್‌ ಅಂದ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್‌. ಇವರಿಗಿಂತ ಮಿಗಿಲಾದ ಪಿಕ್‌ ಪಾಕೇಟರ್‌ ಬೇರ್ಯಾರೂ ಇಲ್ಲ ಎಂದು ಪ್ರಲ್ಹಾದ್‌ ಜೋಶಿ ಆರೋಪಿಸಿದರು.

ಯಾವುದನ್ನು ಕೇಂದ್ರಕ್ಕೆ ಕೊಡ್ತಾರೆ?

ರಾಜ್ಯ ಸರ್ಕಾರ ಮಾಡಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯಲ್ಲಿ ಯಾವುದನ್ನು ಕೇಂದ್ರಕ್ಕೆ ಕೊಡುತ್ತಾರೆ. ಹಾಲಿನ ದರ ₹9 ಏರಿಸಿದರೂ ಇವರಿಗೆ, ಪೆಟ್ರೋಲ್‌ ₹3, ಡಿಸೇಲ್‌ ₹5 ಹೆಚ್ಚಿಸಿದರೂ ರಾಜ್ಯ ಸರ್ಕಾರದ ಟ್ಯಾಕ್ಸ್‌ ಇದು. ರಾಜ್ಯ ಸರ್ಕಾರದ ಸಂಪುಟದಲ್ಲಿ ತೆಗೆದುಕೊಂಡ ಬೆಲೆ ಏರಿಕೆ ನಿರ್ಣಯವಿದು. ರಾಜ್ಯ ಸರ್ಕಾರಕ್ಕೇ ಹೋಗುತ್ತದೆ. ಕೇಂದ್ರಕ್ಕೆ ಕೊಡುತ್ತೀರಾ? ಎಂದು ಅವರು ಪ್ರಶ್ನಿಸಿದರು.

ಯುಪಿಎ ಆಡಳಿತಾವಧಿಯಲ್ಲಿ ಪ್ರತಿ ಅಧಿವೇಶನದಲ್ಲೂ ಹಣದುಬ್ಬರದ್ದೇ ಚರ್ಚೆ ನಡೆಯುತ್ತಿತ್ತು. ಆದರೆ, ಪ್ರಧಾನಿ ಮೋದಿ ಅವರ ಆಡಳಿತಾವಧಿಯಲ್ಲಿ ಒಮ್ಮೆ ಮಾತ್ರ ಚರ್ಚೆ ನಡೆದಿದೆ. ಅದರಲ್ಲೂ ಕಾಂಗ್ರೆಸ್‌ ಚರ್ಚೆಯಿಂದ ನುಣಿಚಿಕೊಂಡಿತು. ನಿಜವಾಗಿ ಡ್ರಾಮಾ ಮಾಡುತ್ತಿರುವುದು ಕಾಂಗ್ರೆಸ್ಸಿಗರು ಎಂದು ಹೇಳಿದರು.

ಲೋಕಸಭೆ-ರಾಜ್ಯಸಭೆಯಲ್ಲಿ ಮಂಡಲ್‌ ಕಮಿಷನ್‌ ವಿರೋಧಿಸಿದವರು ರಾಜೀವ್‌ ಗಾಂಧಿ. ಜನ ಇತಿಹಾಸ ಮರೆತಿದ್ದಾರೆ ಎಂದು ಬಾಯಿಗೆ ಬಂದ ಹಾಗೆ ಮಾತನಾಡಬೇಡಿ. ಸಂವಿಧಾನವನ್ನು 125 ಸಲ ದುರುಪಯೋಗ ಮಾಡಿರುವುದು ಕಾಂಗ್ರೆಸ್ಸೇ. ಇಂದಿರಾಗಾಂಧಿ ಒಬ್ಬರೇ ಬಹುಮತ ಇದ್ದ ಸರ್ಕಾರದಲ್ಲಿ 56 ಬಾರಿ ಸಂವಿಧಾನ ದುರ್ಬಳಕೆ ಮಾಡಿದ್ದಾರೆ. ಅಂಬೇಡ್ಕರ್‌ ಸೋಲಿಸಿದವರಿಗೆ ಪದ್ಮಭೂಷಣ ಕೊಟ್ಟವರು ನೀವು, ಅಂಬೇಡ್ಕರ್‌ಗೆ ಕೊನೆಗೂ ಭಾರತ ರತ್ನ ಕೊಡದೆ ಅವಮಾನಿಸಿದವರು ನೀವು ಎಂದು ಜೋಶಿ ಆರೋಪಿಸಿದರು.

ಈ ಸುದ್ದಿಯನ್ನೂ ಓದಿ | Pralhad Joshi: ರಾಜ್ಯದಿಂದ ಅದೆಷ್ಟು ಜನರನ್ನು ಪಾಕ್‌ಗೆ ವಾಪಸ್‌ ಕಳಿಸಿದ್ದೀರಿ ಉತ್ತರ ಕೊಡಿ: ಪ್ರಲ್ಹಾದ್‌ ಜೋಶಿ

ಖರ್ಗೆ ಮೇಲೆ ಐಟಿ, ಇಡಿ ರೇಡ್‌ ಆಗಿಲ್ಲ

ದೇಶದಲ್ಲಿ ಐಟಿ, ಇಡಿ ರೇಡ್‌ ಅನೇಕ ಬಿಜೆಪಿ ನಾಯಕರ ಮೇಲೂ ಆಗಿದೆ. ಖರ್ಗೆ ಅವರ ಮೇಲೇನೂ ಆಗಿಲ್ಲ. ಯಾರು? ಯಾರು ದುಡ್ಡು ತಿಂದಿದ್ದಾರೋ ಅವರ ಮೇಲೆ ಐಟಿ, ಇಡಿ ಕ್ರಮಕ್ಕಿಳಿದಿದೆ. ಯಾರು ಭ್ರಷ್ಟಾಚಾರ ಮಾಡಿದ್ದಾರೋ ಅವರ ವಿರುದ್ಧ ಇಡಿ, ಐಟಿ ದಾಳಿ ಸಹಜ. ಅದರ ಹೊರತಾಗಿ ರಾಜ್ಯದಲ್ಲಿ ನಾವು ಯಾರ ಮೇಲೆ ಮಾಡಿಸಿದ್ದೇವೆ? ಮುಡಾ, ವಾಲ್ಮೀಕಿ ಹಗರಣ ಬಯಲಿಗೆ ಎಳೆದವರೇ ಕಾಂಗ್ರೆಸ್ಸಿಗರು. ನಾವಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿರುಗೇಟು ನೀಡಿದರು.