Pak ISI Spy : ಪಾಕಿಸ್ತಾನದ ISI ಪರ ಗೂಢಚರ್ಯೆ ನಡೆಸುತ್ತಿದ್ದವ ಪೊಲೀಸ್ ಬಲೆಗೆ
ರಾಜಸ್ಥಾನ ಗುಪ್ತಚರ ಇಲಾಖೆಯು ಜೈಸಲ್ಮೇರ್‌ನ ನಿವಾಸಿಯಾದ ಪಠಾಣ್ ಖಾನ್ ಎಂಬಾತನನ್ನು ಪಾಕಿಸ್ತಾನದ ಗುಪ್ತಚರ ಇಲಾಖೆ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ ಪರ ಗೂಢಚರ್ಯೆ(Pak ISI Spy Arrested) ನಡೆಸಿದ ಆರೋಪದ ಮೇಲೆ ಬಂಧಿಸಿದೆ ಎಂದು ಅಧಿಕೃತ ಮಾಹಿತಿ ತಿಳಿಸಿದೆ. ಆರೋಪಿಯಾದ ಪಠಾಣ್ ಖಾನ್ 2013ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಗುಪ್ತಚರ ಸಂಸ್ಥೆಯ ಅಧಿಕಾರಿಗಳ ಸಂಪರ್ಕಕ್ಕೆ ಬಂದಿದ್ದ ಎನ್ನಲಾಗಿದೆ.


ಜೈಸಲ್ಮೇರ್: ರಾಜಸ್ಥಾನ ಗುಪ್ತಚರ ಇಲಾಖೆಯು (Rajasthan Intelligence) ಜೈಸಲ್ಮೇರ್‌ನ (Jaisalmer) ನಿವಾಸಿಯಾದ ಪಠಾಣ್ ಖಾನ್ (Pathan Khan) ಎಂಬಾತನನ್ನು ಪಾಕಿಸ್ತಾನದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ISI)ಗೆ ಗೂಢಚರ್ಯೆ (Pak Spy) ನಡೆಸಿದ ಆರೋಪದ ಮೇಲೆ ಬಂಧಿಸಿದೆ ಎಂದು ಅಧಿಕೃತ ಮಾಹಿತಿ ತಿಳಿಸಿದೆ. ಆರೋಪಿಯಾದ ಪಠಾಣ್ ಖಾನ್ 2013ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಗುಪ್ತಚರ ಸಂಸ್ಥೆಯ ಅಧಿಕಾರಿಗಳ ಸಂಪರ್ಕಕ್ಕೆ ಬಂದಿದ್ದ. ಈತನ ವಿರುದ್ಧ ಅಫಿಶಿಯಲ್ ಸೀಕ್ರೆಟ್ಸ್ ಆಕ್ಟ್, 1923ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪಾಕಿಸ್ತಾನದಲ್ಲಿ ಖಾನ್‌ಗೆ ಹಣದ ಆಮಿಷ ಒಡ್ಡಿ ಗೂಢಚರ್ಯೆಗೆ ತರಬೇತಿ ನೀಡಲಾಗಿತ್ತು. 2013ರ ನಂತರವೂ ಆತ ಪಾಕಿಸ್ತಾನ ಗುಪ್ತಚರ ಸಂಸ್ಥೆಯ ಅಧಿಕಾರಿಗಳನ್ನು ಭೇಟಿಯಾಗುತ್ತಿದ್ದು, ಜೈಸಲ್ಮೇರ್ ಅಂತಾರಾಷ್ಟ್ರೀಯ ಗಡಿಗೆ ಸಂಬಂಧಿಸಿದ ಸೂಕ್ಷ್ಮ ಮತ್ತು ಗೌಪ್ಯ ಮಾಹಿತಿಯನ್ನು ಪಾಕಿಸ್ತಾನದ ಸಂಪರ್ಕಿಗಳೊಂದಿಗೆ ಹಂಚಿಕೊಂಡಿದ್ದ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇತ್ತೀಚಿನ ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಗಿರುವ ಬೆನ್ನಲ್ಲೇ, ರಾಜಸ್ಥಾನದ ಅಂತಾರಾಷ್ಟ್ರೀಯ ಗಡಿಯ ಸಮೀಪದ ಗ್ರಾಮಸ್ಥರು ಎಲ್ಲಾ ಸಾಧ್ಯತೆಗಳಿಗೆ ಸಿದ್ಧರಾಗಿದ್ದಾರೆ. ಭಾರತೀಯ ಸೇನೆಗೆ ಸಂಪೂರ್ಣ ಸಹಕಾರ ನೀಡಲು ತಾವು ಸಿದ್ಧ ಎಂದು ಸ್ಥಳೀಯರು ಹೇಳಿದ್ದಾರೆ.
ರಾಜಸ್ಥಾನದ ಭಾರತ-ಪಾಕ್ ಗಡಿಯ ಸಮೀಪದ ಕೊನೆಯ ಗ್ರಾಮಗಳಲ್ಲಿ ದೇಶಪ್ರೇಮ ಮತ್ತು ಸನ್ನದ್ಧತೆ ಒಟ್ಟಿಗೆ ಕಾಣಿಸುತ್ತಿದೆ. ಸೈನಿಕ ಘರ್ಷಣೆ ಸಂಭವಿಸಿದರೆ ನಾಗರಿಕರು ಮತ್ತು ಭದ್ರತಾ ಪಡೆಗಳಿಗೆ ಆಶ್ರಯ ನೀಡಲು ಬಂಕರ್‌ಗಳನ್ನು ಈಗಾಗಲೇ ನಿರ್ಮಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಭಾರತೀಯ ಸೇನೆಯ ಉಪಸ್ಥಿತಿಯು ನಿರಂತರ ಸನ್ನದ್ಧತೆಯನ್ನು ಸೂಚಿಸುತ್ತಿದೆ.ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ದಾಳಿಯನ್ನು ಸ್ಥಳೀಯರು ತೀವ್ರವಾಗಿ ಖಂಡಿಸಿದ್ದಾರೆ. ಭಾರತ ಸರ್ಕಾರವು ಈ ಸಂದರ್ಭಕ್ಕೆ ತಕ್ಕಂತೆ ಪ್ರತಿಕಾರ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಈ ಸುದ್ದಿಯನ್ನು ಓದಿ: Viral News: ಹಿಂದೂ ಎಂದು ನಂಬಿಸಿ ಮದ್ವೆ... ಎರಡು ಮಕ್ಕಳಾದ ಮೇಲೆ ಬಯಲಾಯ್ತು ಕಿಡಿಗೇಡಿ ಪತಿಯ ಅಸಲಿ ಮುಖ!
ಸ್ಥಳೀಯ ಗ್ರಾಮಸ್ಥ ಅರ್ಜುನ್ ಸಿಂಗ್ ಮಾತನಾಡಿ, "ಪಾಕಿಸ್ತಾನಕ್ಕೆ ಪ್ರತಿಕ್ರಿಯಿಸುವುದು ಖಂಡಿತವಾಗಿಯೂ ಅಗತ್ಯ. ಅವರು ನಿರಂತರವಾಗಿ ನಮ್ಮನ್ನು ಕೆರಳಿಸುತ್ತಿದ್ದಾರೆ. ಪಹಲ್ಗಾಮ್‌ನಲ್ಲಿ ನಾಗರಿಕರನ್ನು ಕೊಂದಿರುವುದು ಸಂಪೂರ್ಣವಾಗಿ ಒಪ್ಪಲಾಗದು. ಸೇನೆಯು ತಕ್ಕ ರೀತಿಯಲ್ಲಿ ಉತ್ತರಿಸಬೇಕು," ಎಂದಿದ್ದಾರೆ. 1971ರ ಯುದ್ಧವನ್ನು ನೆನಪಿಸಿಕೊಂಡ ವೃದ್ಧರೊಬ್ಬರು, "ನಾನು ರಾಮ್‌ಗಢದಲ್ಲಿದ್ದಾಗ ಬಾಂಬ್‌ಗಳು ಬೀಳುತ್ತಿದ್ದವು. ಆಗ ನಾವು ಸೇನೆಗೆ ಎಲ್ಲ ರೀತಿಯಿಂದ ಸಹಾಯ ಮಾಡಿದ್ದೆವು. ಇಂದಿಗೂ ಯಾವುದೇ ಕಷ್ಟವಾದರೂ ಸಹಾಯಕ್ಕೆ ಸಿದ್ಧರಿದ್ದೇವೆ," ಎಂದು ಹೇಳಿದ್ದಾರೆ.
ಪಾಕಿಸ್ತಾನದ ಸೇನೆಯು ಭಾರತದ ಗಡಿಯಲ್ಲಿ ತನ್ನ ಸೈನಿಕ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದು, ವಾಯು ರಕ್ಷಣೆ ಮತ್ತು ಫಿರಂಗಿ ಘಟಕಗಳನ್ನು ಮುಂಚೂಣಿಯಲ್ಲಿ ನಿಯೋಜಿಸಿದೆ. ಪಾಕಿಸ್ತಾನ ವಾಯುಸೇನೆಯು ಫಿಝಾ-ಎ-ಬದ್ರ್, ಲಲ್ಕಾರ್-ಎ-ಮೊಮಿನ್, ಮತ್ತು ಝರ್ಬ್-ಎ-ಹೈದರಿ ಎಂಬ ಮೂರು ಕವಾಯತುಗಳನ್ನು ಏಕಕಾಲದಲ್ಲಿ ನಡೆಸುತ್ತಿದ್ದು, ಇದರಲ್ಲಿ ಎಫ್-16, ಜೆ-10, ಮತ್ತು ಜೆಎಫ್-17 ಯುದ್ಧ ವಿಮಾನಗಳು ಭಾಗವಹಿಸಿವೆ.
ಮಂಗಳವಾರ, ಭಾರತ ಮತ್ತು ಪಾಕಿಸ್ತಾನದ ಸೈನಿಕ ಕಾರ್ಯಾಚರಣೆಯ ಮಹಾನಿರ್ದೇಶಕರು ಹಾಟ್‌ಲೈನ್ ಮೂಲಕ ಮಾತುಕತೆ ನಡೆಸಿದ್ದಾರೆ. ಪಾಕಿಸ್ತಾನ ಸೇನೆಯಿಂದ ಗಡಿಯಲ್ಲಿ ನಡೆದ ಅನಪೇಕ್ಷಿತ ಕದನ ವಿರಾಮ ಉಲ್ಲಂಘನೆಯ ಬಗ್ಗೆ ಚರ್ಚಿಸಲಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಏಪ್ರಿಲ್ 27-28ರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಮತ್ತು ಪೂಂಚ್ ಜಿಲ್ಲೆಗಳ ಗಡಿಯಲ್ಲಿ ಪಾಕಿಸ್ತಾನದಿಂದ ನಡೆದ ಶಸ್ತ್ರಾಸ್ತ್ರ ಗುಂಡಿನ ದಾಳಿಗೆ ಭಾರತೀಯ ಸೇನೆ ತಕ್ಕ ರೀತಿಯಲ್ಲಿ ಪ್ರತಿಕ್ರಿಯಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.