Saturday, 16th November 2024

Delhi Shootout: ಶಾಕಿಂಗ್‌! ರೋಗಿಯ ಸೋಗಿನಲ್ಲಿ ಬಂದು ವೈದ್ಯನ ಮೇಲೆ ಫೈರಿಂಗ್‌

delhi shootout

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಗುಂಡಿನ ಸಪ್ಪಳ(Delhi Shootout) ಕೇಳಿದೆ. ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ಇಬ್ಬರು ವೈದ್ಯನನ್ನೇ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ವರದಿಯಾಗಿದೆ. ಜೈತ್‌ಪುರ ಪ್ರದೇಶದ ಕಾಳಿಂದಿ ಕುಂಜ್‌ನಲ್ಲಿರುವ ನಿಮಾ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಗಾಯಗೊಂಡ ಇಬ್ಬರು ವ್ಯಕ್ತಿಗಳು ಚಿಕಿತ್ಸೆಗೆ ಬಂದ ನಂತರ ವೈದ್ಯನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಯ ಸಿಬ್ಬಂದಿ ಪ್ರಕಾರ, ಇಬ್ಬರು ವ್ಯಕ್ತಿಗಳು ಗಾಯಗೊಂಡು ಆಸ್ಪತ್ರೆಗೆ ಬಂದಿದ್ದರು, ಅವರು ಡ್ರೆಸ್ಸಿಂಗ್ ನಂತರ ವೈದ್ಯರನ್ನು ಭೇಟಿಯಾಗಲು ಒತ್ತಾಯಿಸಿದರು ಮತ್ತು ಅವರ ಕ್ಯಾಬಿನ್‌ಗೆ ಪ್ರವೇಶಿಸುತ್ತಿದ್ದಂತೆ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ಗುಂಡಿನ ಸದ್ದು ಕೇಳಿದ ಕೂಡಲೇ ವೈದ್ಯರ ಕ್ಯಾಬಿನ್‌ಗೆ ಧಾವಿಸಿ ನೋಡಿದಾಗ ರಕ್ತಸ್ರಾವವಾಗುತ್ತಿರುವುದು ಕಂಡು ಬಂದಿತು ಎಂದು ಸಿಬ್ಬಂದಿ ತಿಳಿಸಿದ್ದಾರೆ. ವೈದ್ಯರ ಹತ್ಯೆಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಜಿಮ್‌ ಮಾಲೀಕನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ವರದಿಯಾಗಿತ್ತು. ದೆಹಲಿಯ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ 35 ವರ್ಷದ ಜಿಮ್ ಮಾಲೀಕನನ್ನು ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಭೀಕರ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಅಫ್ಘಾನಿಸ್ತಾನ ಮೂಲದ ಮತ್ತು ಸಿಆರ್ ಪಾರ್ಕ್‌ನಲ್ಲಿ ನೆಲೆಸಿದ್ದ ನಾದಿರ್ ಶಾ ಎಂಬಾತ ಮೃತ ದುರ್ದೈವಿಯಾಗಿದ್ದು, ದುಷ್ಕರ್ಮಿಗಳ ಗುಂಡಿನ ದಾಳಿಯಲ್ಲಿ ಆತ ಗಂಭೀರವಾಗಿ ಗಾಯಗೊಂಡು ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ. ರಾತ್ರಿ 10:45 ರ ಸುಮಾರಿಗೆ ಗುಂಡಿನ ದಾಳಿಯ ಬಗ್ಗೆ ಪೊಲೀಸರಿಗೆ ಕರೆ ಬಂದಿತು. ತಕ್ಷಣ ಸ್ಥಳಕ್ಕೆ ದೌಡಾಯಿಸಿ ನೋಡಿದಾಗ ರಕ್ತದಮಡುವಿನಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಶಾನನ್ನು ಪೊಲೀಸರು ಕಂಡಿದ್ದಾರೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿಗೆ ತಲುಪುವಷ್ಟರಲ್ಲಿ ಆತ ಕೊನೆಯುಸಿರೆಳೆದಿದ್ದ ಎನ್ನಲಾಗಿದೆ.

ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಗಾಳಿಯಲ್ಲಿ ಹಲವಾರು ಸುತ್ತಿನ ಗುಂಡು ಹಾರಿಸಿದ್ದು, ಸ್ಥಳದಲ್ಲಿ ಖಾಲಿಯಾದ ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಲ್ಲಾ ಸಂಭಾವ್ಯ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಅಂಕಿತ್ ಚೌಹಾಣ್ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Delhi Shootout: ರಾತ್ರೋರಾತ್ರಿ ಶೂಟೌಟ್‌; ಆಫ್ಘನ್‌ ಮೂಲದ ಜಿಮ್‌ ಓನರ್‌ ಬಲಿ- ಬಿಷ್ಣೋಯ್‌ ಗ್ಯಾಂಗ್‌ನಿಂದ ಕೃತ್ಯ