Thursday, 19th September 2024

Fraud Case: ಯುವತಿಯ ಕರೆಗೆ ಓಗೊಟ್ಟು ಹೋಟೆಲ್‌ಗೆ ಹೋದ ಯುವಕ; ಮುಂದೆ ನಡೆದದ್ದೇ ಬೇರೆ…

Fraud Case

ಉತ್ತರ ಪ್ರದೇಶ: ಇತ್ತೀಚೆಗೆ ಮೀರತ್‍ನಲ್ಲಿ ಸಂಘಟಿತ ಗ್ಯಾಂಗ್ ಒಂದು ಕಾರ್ಯಾಚರಿಸುತ್ತಿರುವ ಬಗ್ಗೆ ವರದಿಯಾಗಿದೆ. ಈ ಗ್ಯಾಂಗ್‍ನಲ್ಲಿ ಮಹಿಳೆಯರು ಮತ್ತು ಪುರುಷರು ಸೇರಿದ್ದು, ಇವರು ಜನರನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುವ ಕೃತ್ಯ ಮಾಡುತ್ತಿದ್ದಾರೆ. ಈ ಗ್ಯಾಂಗ್‌ನವರು ಎಷ್ಟು ಬುದ್ಧಿವಂತಿಕೆಯಿಂದ ಕೆಲಸ ಮಾಡುತ್ತಾರೆ ಎಂದರೆ ಅವರು ಅನೇಕ ಜನರನ್ನು ತಮ್ಮ ಬಲೆಗೆ ಬೀಳಿಸಿಕೊಂಡು ನಂತರ ಅವರಿಂದ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದಾರೆ. ಮಹಿಳೆಯರ ಮುಗ್ಧ ಮುಖಗಳನ್ನು ನೋಡಿ ಯಾರಾದರೂ ಮೋಸ (Fraud Case) ಹೋಗಬಹುದು. ಆದರೆ ಈ ಮಹಿಳೆಯರ ಹಿಂದೆ ಬಹಳ ಬುದ್ಧಿವಂತ ಮತ್ತು ಅಪಾಯಕಾರಿ ಗ್ಯಾಂಗ್ ಕೆಲಸ ಮಾಡುತ್ತಿದೆ ಎಂಬ ಅರಿವು ಯಾರಿಗೂ ತಿಳಿದಿರುವುದಿಲ್ಲ.

ಮೀರತ್‍ನ ಪಾರ್ತಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಯುವಕನೊಬ್ಬಈ ಗ್ಯಾಂಗ್‍ಗೆ ಬಲಿಪಶುವಾಗಿದ್ದಾನೆ. ಶುರುವಿಗೆ ಅಪರಿಚಿತ ಮಹಿಳೆ ಯುವಕನಿಗೆ ಕರೆ ಮಾಡಿ ಕೆಲವು ತುರ್ತು ಕೆಲಸಗಳನ್ನು ತಿಳಿಸಿ ಯುವಕನನ್ನು ಭೇಟಿಯಾಗಲು ಕೇಳಿಕೊಂಡಿದ್ದಾಳೆ. ಆದರೆ ಯುವಕ ಶುರುವಿನಲ್ಲಿ ಅವಳ ಕರೆಯನ್ನು ನಿರ್ಲಕ್ಷಿಸಿದ್ದಾನೆ. ಸ್ವಲ್ಪ ಸಮಯದ ನಂತರ, ಯುವಕ ಸ್ವತಃ ಮಹಿಳೆಗೆ ಕರೆ ಮಾಡಿ ಅವಳ ಬಳಿ ತನ್ನ ನಂಬರ್ ಹೇಗೆ ಸಿಕ್ಕಿತ್ತು ಎಂದು ಕೇಳಿದ್ದಾನೆ. ಆತನ ನಂಬರ್ ಅನ್ನು ತನ್ನ ಸ್ನೇಹಿತೆ ರುಹಿನಾ ಅಲಿಯಾಸ್ ಸಿಮ್ರಾನ್ ನೀಡಿದ್ದಾಳೆ ಎಂದು ಮಹಿಳೆ ಹೇಳಿದ್ದಾಳೆ. ಇದರ ನಂತರ, ಇಬ್ಬರ ನಡುವೆ ಮಾತುಕತೆ ಶುರುವಾಗಿ ಶೀಘ್ರದಲ್ಲೇ ಅವರು ಸ್ನೇಹಿತರಾದರು. ಮಹಿಳೆ ತನ್ನ ಹೆಸರನ್ನು ಶಾಲು ಶರ್ಮಾ ಎಂದು ಹೇಳಿ, ಸೆಪ್ಟೆಂಬರ್ 3 ರಂದು ಯುವಕನನ್ನು ಭೇಟಿಯಾಗಲು ಮೀರತ್‍ಗೆ ಬಂದಿದ್ದಳು.

ದೆಹಲಿ ರಸ್ತೆಯ ರಿಥಾನಿ ಬಳಿ ಇರುವ ವೀವ್ ಬೈಲಿ ಹೋಟೆಲ್‍ನಲ್ಲಿ ಯುವಕ ಮಹಿಳೆಯನ್ನು ಭೇಟಿಯಾಗಿ ನಂತರ ದೈಹಿಕ ಸಂಬಂಧ ಹೊಂದಿದ್ದರು. ಅವರು ಹೋಟೆಲ್‌ನಿಂದ ಹೊರಬಂದಾಗ ಮಹಿಳೆ ತನ್ನ ಸಹೋದರ ಮತ್ತು ಅತ್ತಿಗೆ ಹೋಟೆಲ್ ಹೊರಗೆ ನಿಂತಿದ್ದಾರೆ ಎಂದು ಯುವಕನಿಗೆ ಹೇಳಿದ್ದಳು. ಆಗ ಸ್ವಿಫ್ಟ್ ಕಾರು ಮತ್ತು ಬೈಕ್ ಅನ್ನು ಹೋಟೆಲ್ ಹೊರಗೆ ನಿಲ್ಲಿಸಲಾಗಿತ್ತು. ಅದರಲ್ಲಿದ್ದ ಕೆಲವರು ಆತನನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು ಆತನಿಗೆ ತೀವ್ರವಾಗಿ ಥಳಿಸಿ 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದರೆ ಕೊಲೆ ಅಥವಾ ಸುಳ್ಳು ಅತ್ಯಾಚಾರ ಪ್ರಕರಣ ದಾಖಲೆಯ ಬೆದರಿಕೆ ಹಾಕಿದ್ದರು. ಆ ಸಮಯದಲ್ಲಿ ಯುವಕನ ಮೊಬೈಲ್ ಸ್ವಿಚ್ ಆಫ್ ಆಗಿತ್ತು, ಆದ್ದರಿಂದ ಆರೋಪಿಗಳು ಅವನ ಸಿಮ್ ತೆಗೆದು ತಮ್ಮ ಫೋನ್‍ನಲ್ಲಿ ಹಾಕಿ ಅದೇ ನಂಬರ್‌ನಿಂದ ಆತನ ಹೆಂಡತಿ ಮತ್ತು ಅವನ ಸಹೋದರನಿಗೆ ಕರೆ ಮಾಡಿದ್ದಾರೆ. ಪತ್ನಿ ಮತ್ತು ಸಹೋದರನಿಂದ 10 ಲಕ್ಷ ರೂ.ಗೆ ಬೇಡಿಕೆ ಇಟ್ಟು, ಹಣ ನೀಡದಿದ್ದರೆ ಯುವಕನನ್ನು ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಆರೋಪಿಗಳಲ್ಲಿ ಒಬ್ಬನಾದ ಬೌನ್ಸರ್ ದೀಪಕ್ ಮೀರತ್‍ನ ದಿಲ್ನಾ ಗ್ರಾಮದ ನಿವಾಸಿ. ಸೈನಿಕ್ ಕಾಲೋನಿ ಕಸೆರು ಖೇಡಾ ಲಾಲ್ಕುರ್ತಿಯ ಅನಿಕೇತ್ ಎಂಬ ವ್ಯಕ್ತಿಯೂ ಈ ಗ್ಯಾಂಗ್ ನಲ್ಲಿ ಭಾಗಿಯಾಗಿದ್ದ. ಇದಲ್ಲದೆ, ಉಳಿದ ಎಲ್ಲಾ ಆರೋಪಿಗಳು ದೆಹಲಿ ನಿವಾಸಿಗಳಾಗಿದ್ದಾರೆ. ಆರೋಪಿಗಳು ಯುವಕನನ್ನು ರಸ್ತೆಯಲ್ಲೇ ಬಿಟ್ಟು, ಬೇಗನೆ ಹಣ ನೀಡದಿದ್ದರೆ, ಅತ್ಯಾಚಾರ ಆರೋಪ ಹೊರಿಸಿ ಜೈಲಿಗೆ ಕಳುಹಿಸುವುದಾಗಿ ಮತ್ತು ಅವರ ಕುಟುಂಬದವರಿಗೆ ತೊಂದರೆ ನೀಡುವುದಾಗಿ ಎಚ್ಚರಿಕೆ ನೀಡಿ ಹೊರಟು ಹೋಗಿದ್ದಾರೆ.

ಇದನ್ನೂ ಓದಿ: ತಂದೆಯನ್ನು ಕೊಲ್ಲುವುದಾಗಿ ಬೆದರಿಸಿ ವಿದ್ಯಾರ್ಥಿನಿ ಮೇಲೆ 11 ಬಾಲಕರಿಂದ ಅತ್ಯಾಚಾರ

ಈ ಬಗ್ಗೆ ಯುವಕ ಪರ್ತಾಪುರ ಪೊಲೀಸರಿಗೆ ದೂರು ನೀಡಿದ್ದು, ತಕ್ಷಣ ಕ್ರಮ ಕೈಗೊಂಡ ಪೊಲೀಸರು ಇಬ್ಬರು ಮಹಿಳೆಯರು ಸೇರಿದಂತೆ ಗ್ಯಾಂಗ್‍ನ ಐವರು ಸದಸ್ಯರನ್ನು ಬಂಧಿಸಿದ್ದಾರೆ. ಪೊಲೀಸರು ಈಗ ಈ ಗ್ಯಾಂಗ್‍ನ ಉಳಿದ ಸದಸ್ಯರನ್ನು ಹುಡುಕುತ್ತಿದ್ದು, ಸದ್ಯದಲ್ಲೇ ಅವರನೆಲ್ಲಾ ಬಂಧಿಸುವುದಾಗಿ ತಿಳಿಸಿದ್ದಾರೆ.