ಮಧ್ಯಪ್ರದೇಶ: ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಇತ್ತೀಚೆಗೆ ನವವಿವಾಹಿತೆಯ ಮೇಲೆ ಐವರು ಸಾಮೂಹಿಕ ಅತ್ಯಾಚಾರ(Physical Abuse) ಎಸಗಿದ ಹೀನ ಕೃತ್ಯ ನಡೆದಿದೆ. ಮಹಿಳೆ ತನ್ನ ಪತಿಯೊಂದಿಗೆ ಪಿಕ್‍ನಿಕ್‍ಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 100ಕ್ಕೂ ಹೆಚ್ಚು ಜನರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಇದುವರೆಗೂ ಆರೋಪಿಗಳನ್ನು ಬಂಧಿಸಲಾಗಿಲ್ಲ ಎಂಬುದಾಗಿ ತಿಳಿದುಬಂದಿದೆ.
ವರದಿ ಪ್ರಕಾರ ಮಹಿಳೆ ಇತ್ತೀಚೆಗೆ ಮದುವೆಯಾಗಿದ್ದು, ಪಿಕ್‍ನಿಕ್‍ಗೆಂದು ಪತಿಯ ಜೊತೆ ಬಂದಿದ್ದರು. ದಂಪತಿ 19-20 ವರ್ಷ ವಯಸ್ಸಿನವರಾಗಿದ್ದು ಇನ್ನೂ ಕಾಲೇಜಿನಲ್ಲಿ ಓದುತ್ತಿದ್ದಾರೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಗುರ್ಹ್ ಕೈಗಾರಿಕಾ ಪ್ರದೇಶದ ಪ್ರಸಿದ್ಧ ದೇವಾಲಯದಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಕಾರಂಜಿಯ ಬಳಿ ಪತಿ-ಪತ್ನಿ ಮಾತನಾಡುತ್ತಿದ್ದಾಗ ಅಲ್ಲಿಗೆ ಬಂದ ಐವರು ಪತಿಯ ಮೇಲೆ ಹಲ್ಲೆ ಮಾಡಿ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದಾರಂತೆ. ಈ ಕುರಿತು ಸಂತ್ರಸ್ತೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಆರೋಪಿಗಳು ಘಟನೆಯ ವಿಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ ಮತ್ತು ಪೊಲೀಸರನ್ನು ಸಂಪರ್ಕಿಸಿದರೆ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ದಂಪತಿಗೆ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಸಂತ್ರಸ್ತೆ ತಿಳಿಸಿದ್ದಾರೆ. ಅಲ್ಲದೇ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಐದು ವ್ಯಕ್ತಿಗಳಲ್ಲಿ ಒಬ್ಬನ ಕೈ ಮತ್ತು ಎದೆಯ ಮೇಲೆ ಟ್ಯಾಟೂ ಇದೆ ಎಂದು ಸಂತ್ರಸ್ತೆ ಪೊಲೀಸರಿಗೆ ಆರೋಪಿಯನ್ನು ಪತ್ತೆಮಾಡಲು ಕ್ಲೂ ನೀಡಿದ್ದಾರೆ.
ಈ ಪ್ರಕರಣದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 296, 127 (2), 115, 351 (3), 70 (1), 79 ಮತ್ತು 3 (5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ ಮತ್ತು ಈ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆಯ ವೇಳೆ ಆರೋಪಿಗಳು ದೇವಾಲಯದ ಬಳಿಯ ಕೊಳದಲ್ಲಿ ಸ್ನಾನ ಮಾಡಲು ಮತ್ತು ಪಾರ್ಟಿ ಮಾಡಲು ಹೋಗಿದ್ದರು ಮತ್ತು ಅವರೆಲ್ಲಾ ಮದ್ಯಪಾನ ಮಾಡಿದ್ದರು. ಹಾಗಾಗಿ ಸ್ಥಳದಿಂದ ಮದ್ಯದ ಬಾಟಲಿಗಳು ಮತ್ತು ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:8 ವರ್ಷದ ಬಳಿಕ ಜನಿಸಿದ ಕಂದ 19ನೇ ದಿನಕ್ಕೆ ಕೊಲೆಯಾಯ್ತು; ಕೊಂದವರು ಯಾರು?
ಈ ನಡುವೆ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿರುವ ಹಿನ್ನೆಯಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ನೇತೃತ್ವದ ರಾಜ್ಯ ಗೃಹ ಇಲಾಖೆಯನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. ಮಹಿಳೆಯರ ವಿರುದ್ಧ ಇತ್ತೀಚಿನ ಅಪರಾಧ ಪ್ರಕರಣಗಳ ಬಗ್ಗೆ ಕಾಂಗ್ರೆಸ್, ಸರ್ಕಾರವನ್ನು ಗುರಿಯಾಗಿಸಿಕೊಂಡಿದೆ ಮತ್ತು ಮುಖ್ಯಮಂತ್ರಿ ಗೃಹ ಇಲಾಖೆಯನ್ನು ತ್ಯಜಿಸಬೇಕೆಂದು ಒತ್ತಾಯಿಸಿದೆ.