Friday, 22nd November 2024

Self Harming: ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿ, ಇಬ್ಬರು ಮಕ್ಕಳು ಆತ್ಮಹತ್ಯೆ

ರಾಜಸ್ಥಾನ: ಅಕ್ರಮ ಸಂಬಂಧ ಎನ್ನುವುದು ದಂಪತಿ ನಡುವಿನ ಸಂಬಂಧ ಹಾಳುಮಾಡುವುದಲ್ಲದೇ ಕೆಲವೊಮ್ಮೆ ಜೀವ ಬಲಿ ತೆಗೆದುಕೊಳ್ಳುತ್ತದೆ. ಇಂತಹ ಅಕ್ರಮ ಸಂಬಂಧ ಮೂರು ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡ ಘಟನೆ ರಾಜಸ್ಥಾನದ ಹನುಮಾನ್‍ಗಢ ಜಿಲ್ಲೆಯ ರಾವತ್‌ಸರ್‌ನಲ್ಲಿ ನಡೆದಿದೆ. ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ತನ್ನ ತಾಯಿಯ ಕುಟುಂಬದವರ ಜೊತೆ ಸೇರಿ ಪತಿಗೆ ಮಾನಸಿಕ ಚಿತ್ರಹಿಂಸೆ ನೀಡಿದ ಕಾರಣ ಪತಿ ತನ್ನ ಇಬ್ಬರು ಗಂಡು ಮಕ್ಕಳ ಜೊತೆ ಆತ್ಮಹತ್ಯೆ(Self Harming) ಮಾಡಿಕೊಂಡಿದ್ದಾರೆ.

ಮೃತನನ್ನು ವಿನೋದ್ ಕುಮಾರ್ ಎಂದು ಗುರುತಿಸಲಾಗಿದೆ. ಹಾಗೇ ಅವರ  ಜೊತೆ ಸಾವನಪ್ಪಿದ ನತದೃಷ್ಟ ಮಕ್ಕಳನ್ನು 7 ವರ್ಷದ ಪಾರ್ಥ್ ಮತ್ತು 4 ವರ್ಷದ ಮನ್ವೀರ್ ಎಂಬುದಾಗಿ ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ವಿನೋದ್ ಕುಮಾರ್ ಅವರಿಗೆ ಕಳೆದ ಕೆಲವು ತಿಂಗಳುಗಳಿಂದ ಅವರ ಪತ್ನಿ ಮತ್ತು ಅತ್ತೆ ಮಾವ ನಿರಂತರವಾಗಿ ಕೊಲೆ ಬೆದರಿಕೆಗಳನ್ನು ಹಾಕಿದ್ದರು. ಅಷ್ಟೇ ಅಲ್ಲದೇ ಇತ್ತೀಚೆಗೆ ಕೆಲವು ದುಷ್ಕರ್ಮಿಗಳು ವಿನೋದ್ ಅವರ ಮನೆಗೆ ನುಗ್ಗಿ ಅವರ ಮತ್ತು ಅವರ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಘಟನೆಯ ನಂತರ ಆರೋಪಿಗಳನ್ನು ಪೊಲೀಸರು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು, ಇದು ವಿನೋದ್ ಅವರನ್ನು ಮತ್ತಷ್ಟು ಭಯಪಡುವಂತೆ ಮಾಡಿತ್ತು.  ಭಯದ ವಾತಾವರಣದಲ್ಲಿ ಬದುಕುತ್ತಿದ್ದ ವಿನೋದ್ ಕುಮಾರ್ ಕೊನೆಗೆ ಇತ್ತೀಚೆಗೆ ತನ್ನ ಇಬ್ಬರು ಮಕ್ಕಳೊಂದಿಗೆ ಇಂದಿರಾ ಗಾಂಧಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ ಮೂವರ ಶವಗಳನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ:ಹೆಂಡತಿ ಒಪ್ಪಿಗೆಯಿಲ್ಲದೆ ಆಭರಣ ಅಡವಿಟ್ಟರೆ ಜೈಲು ಶಿಕ್ಷೆ; ಹೈಕೋರ್ಟ್ ತೀರ್ಪು

ವಿನೋದ್ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದರು ಹಾಗೂ ಅವರು  ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು ಎಂಬುದಾಗಿ ಕುಟುಂಬದ ವಿಚಾರಣೆಯ ವೇಳೆ ತಿಳಿದುಬಂದಿದೆ.  ಅವರ ಪತ್ನಿಗೆ ಅನೈತಿಕ ಸಂಬಂಧವಿತ್ತು. ಈ ಕಾರಣದಿಂದಾಗಿ, ಅವರು ಬೇಸರಗೊಂಡಿದ್ದರು. ಅಷ್ಟೇ ಅಲ್ಲದೇ  ಅವರ ಪತ್ನಿ ಮತ್ತು ಅವಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಜನರು ಆಗಾಗ್ಗೆ ವಿನೋದ್ ಅವರಿಗೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಈ ಪ್ರಕರಣದಲ್ಲಿ ವಿನೋದ್ ಕುಮಾರ್ ಅವರ ಪತ್ನಿ, ಅತ್ತೆ ಮತ್ತು ಇತರ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಇಡೀ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.