ಒಡಿಶಾ: ಒಡಿಶಾದ ಗಜಪತಿ ಜಿಲ್ಲೆಯಲ್ಲಿ ವಿಚಾರಣೆಗೆ ಒಳಪಡಿಸಿದ್ದ ಕೈದಿಯೊಬ್ಬ ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆಯ ನಂತರ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದಾನೆ. ವಿಚಾರಣೆಯ ನಂತರ ಆರೋಪಿ ಪೊಲೀಸರೊಂದಿಗೆ ಹೋಟೆಲ್‍ನಲ್ಲಿ ತಂಗಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಪೊಲೀಸರು ನಿದ್ದೆಗೆ ಜಾರುತ್ತಿದ್ದಂತೆ ಆರೋಪಿ ತಪ್ಪಿಸಿಕೊಂಡಿದ್ದು,(Prisoner Escapes) ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರೀ ವೈರಲ್(Viral Video)ಆಗುತ್ತಿದೆ.
ಆರೋಪಿಯನ್ನು ಜುವಾಲ್ ಸಬರ್ ಎಂದು ಗುರುತಿಸಲಾಗಿದ್ದು, ಮಾದಕ ದ್ರವ್ಯಗಳ ಕಳ್ಳಸಾಗಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ತನಿಖೆಯ ಸಮಯದಲ್ಲಿ, ಅತ್ಯಾಚಾರ ಪ್ರಕರಣದಲ್ಲಿಯೂ ಕೂಡ ಸಬರ್ ಭಾಗಿಯಾಗಿರುವುದು ಪೊಲೀಸರಿಗೆ ತಿಳಿದುಬಂದಿದೆ.
ಇತ್ತೀಚೆಗೆ ಆರೋಪಿಯನ್ನು ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆಗಾಗಿ ನಾಗ್ಪುರದಿಂದ ಗಜಪತಿಗೆ ಕರೆತರಲಾಗಿತ್ತು. ನ್ಯಾಯಾಲಯದ ವಿಚಾರಣೆಯ ನಂತರ, ಸಬರ್ ಮತ್ತು ಪೊಲೀಸ್ ತಂಡವು ಹೋಟೆಲ್‍ನಲ್ಲಿ ತಂಗಿದ್ದಾರೆ. ಹಾಗೇ ಆರೋಪಿ ತಪ್ಪಿಸಿಕೊಳ್ಳಬಾರದೆಂದು ಪೊಲೀಸರು ಅವನ ಕಾಲುಗಳನ್ನು ಸರಪಳಿಯಿಂದ ಕಟ್ಟಿಹಾಕಿದ್ದರಂತೆ. ಇಷ್ಟೆಲ್ಲಾ ಬಂದೋಬಸ್ ನಡುವೆಯೂ ಆರೋಪಿ ಸಬರ್ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದಾನೆ. ಸಬರ್ ತಪ್ಪಿಸಿಕೊಂಡಾಗ ಪೊಲೀಸ್ ತಂಡವು ಮತ್ತೊಂದು ಕೋಣೆಯಲ್ಲಿ ಮಲಗಿತ್ತು ಎಂದು ವರದಿಯಾಗಿದೆ.
ಹೋಟೆಲ್‍ನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಆರೋಪಿ ತಪ್ಪಿಸಿಕೊಂಡ ದೃಶ್ಯ ಸೆರೆಯಾಗಿದೆ. ಅದರಲ್ಲಿ ಆರೋಪಿ ತನ್ನ ಕಾಲುಗಳಿಗೆ ಸರಪಳಿ ಕಟ್ಟಿದರೂ ಕೂಡ ನಿಧಾನವಾಗಿ ಚಲಿಸುತ್ತಾ ಹೋಟೆಲ್ ಹೊರಗೆ ಹೋಗಿದ್ದಾನಂತೆ.
ಪ್ರಕರಣದ ಬಗ್ಗೆ ಮಾತನಾಡಿದ ಹಿರಿಯ ಅಧಿಕಾರಿಯೊಬ್ಬರು, ಸಬರ್‌ನನ್ನು ಹಿಡಿಯಲು ತಂಡಗಳನ್ನು ರಚಿಸಲಾಗಿದೆ. ಮತ್ತು ಘಟನೆಯ ಬಗ್ಗೆ ನಾಗ್ಪುರದ ಪೊಲೀಸ್ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ ಎಂಬುದಾಗಿ ತಿಳಿಸಿದ್ದಾರೆ. ಪೊಲೀಸರು ಸಬರ್‌ಗಾಗಿ ಹುಡುಕುತ್ತಿದ್ದಾರೆ. ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದಕ್ಕಾಗಿ ಸೆಕ್ಷನ್ 226 ರ ಅಡಿಯಲ್ಲಿ ಅವರ ವಿರುದ್ಧ ಹೊಸ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಮಹಿಳೆಯ ತಲೆ ಬೋಳಿಸಿ ಮೆರವಣಿಗೆ ಮಾಡಿದ ಸ್ಥಳೀಯರು!
ಆರೋಪಿಗಳು ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡ ಘಟನೆ ನಡೆದಿದ್ದು ಇದೇ ಮೊದಲಲ್ಲ. ಇದಕ್ಕೂ ಮೊದಲು ಪೂಜಾಪ್ಪುರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಅತ್ಯಾಚಾರ ಪ್ರಕರಣದ ಖೈದಿಯನ್ನು ತಪಾಸಣೆಗಾಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆತಂದಾಗ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದಾನೆ. ಆದರೆ ಒಂದು ಗಂಟೆಯ ನಂತರ, ಆಸ್ಪತ್ರೆಯ ಬಳಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಿಂದ ಪೊಲೀಸರು ಆತನನ್ನು ಮತ್ತೆ ಬಂಧಿಸಿದ್ದಾರೆ. ಹಾಗೂ ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತಾದ ಸೆಕ್ಷನ್ 265 ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.